ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಲಿ–ಕಲಿ’ ಶಾಲೆಯಲ್ಲಿ ಮಕ್ಕಳ ಚಿಲಿಪಿಲಿ

Last Updated 24 ಜನವರಿ 2020, 16:29 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ರಾಣೆಬೆನ್ನೂರು ತಾಲ್ಲೂಕಿನ ಮಣಕೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನ ಪೂರೈಸಿದೆ. ಅಲ್ಲದೆ, 2019–20ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದ ‘ಉತ್ತಮ ನಲಿ–ಕಲಿ ಶಾಲೆ’ ಎನ್ನುವ ಕೀರ್ತಿಯನ್ನೂ ಪಡೆದಿದೆ.

‘1918 ರಲ್ಲಿ ಶಾಲೆಯು ಆರಂಭವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 136 ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಕಲಿಕೆಯ ಪ್ರಗತಿ ತೃಪ್ತಿದಾಯಕವಾಗಿದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಸ್.ಎಫ್ ಕಡೇಮನಿ.

‘ಶಾಲೆಗೆಶಿವಪ್ಪ ಬನ್ನಿಕೋಡ ಹಾಗೂ ಹನುಮಪ್ಪ ಮಲ್ಲಪ್ಪ ಬನ್ನಿಕೋಡ ಅವರು 1970ರಲ್ಲಿ 20 ಗುಂಟೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಅಲ್ಲದೆ, ವಿವಿಧ ದಾನಿಗಳಿಂದ ಸಂಗ್ರಹಿಸಿದ ₹2 ಲಕ್ಷ ದೇಣಿಗೆ ಹಣದಿಂದ ಲ್ಯಾಪ್‌ಟಾಪ್, ಪ್ರೊಜೆಕ್ಟರ್, ಪ್ರಿಂಟರ್, ಧ್ವನಿವರ್ಧಕ, ಮೆಗಾಫೋನ್‌, ಟ್ರಾವೆಲರ್ ಮೈಕ್, ಜೆರಾಕ್ಸ್ ಯಂತ್ರ ತಂದಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪರಡ್ಡಿ ದೊಡ್ಡಬಿದರಿ ತಿಳಿಸಿದರು.

ಶಾಲೆಯ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ಗ್ರಾಮ ಪಂಚಾಯ್ತಿ ಸದಸ್ಯ ಯಲ್ಲಪ್ಪರಡ್ಡಿ ಕೆಂಚರಡ್ಡಿಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದು ಶಿಕ್ಷಕ ಎಂ.ಎನ್ ಗುಡ್ಡರಡ್ಡಿ ಹಾಗೂ ಶಿಕ್ಷಕಿ ಶಕೀಲಾಬಾನು ಹೇಳಿದರು.

‘ಮಕ್ಕಳ ಪ್ರಗತಿ ಕುರಿತು ಪಾಲಕರ ಸಭೆಯಲ್ಲಿ ಚರ್ಚೆ, ಕಲಿಕಾ ಕ್ರಿಯಾ ಯೋಜನೆ ತಯಾರಿ, ಪ್ರೊಜೆಕ್ಟರ್, ಲ್ಯಾಪ್ ಟಾಪ್ ಬಳಕೆ ಮಾಡಿಕೊಂಡು ಕಲಿಸುವ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಕಾಳಜಿ ತೋರುವ ಮೂಲಕ ಅವರ ಕಲಿಕೆಯಲ್ಲಿ ಪ್ರಗತಿ ಸಾಧಿಸುವುದು. ಹೀಗೆ ಹಲವಾರು ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದು ಎನ್‌.ಎಸ್‌. ಶರತ್‌ಕುಮಾರ ಹಾಗೂ ಎಚ್.ಬಿ ಗೌಡರ ತಿಳಿಸಿದರು.

ಈ ಶಾಲೆಯ ವಿದ್ಯಾರ್ಥಿಗಳು ಆಟ-ಪಾಠ, ಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಮೇಲುಗೈ ಸಾಧಿಸುತ್ತಿದ್ದಾರೆ. 2018-19ನೇ ಸಾಲಿನಲ್ಲಿ ಸ್ಫೂರ್ತಿ ಜಕ್ಕರಡ್ಡಿ ಜವಾಹರ ನವೋದಯ ಶಾಲೆಗೆ, 5 ವರ್ಷಗಳಲ್ಲಿ 10 ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಎನ್ಎಂಎಂಎಸ್ ಪರೀಕ್ಷೆಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಶಿಕ್ಷಕ ಎಂ.ಎನ್. ಗುಡ್ಡರಡ್ಡಿ ತಿಳಿಸಿದರು.

‘ನಲಿ-ಕಲಿ’ ತರಗತಿಯಲ್ಲಿ ಮಕ್ಕಳಿಗೆ ವಿವಿಧ ತರಹದ ಶಿಶುಪದ್ಯಗಳು ಯೋಚನಾ ಶಕ್ತಿಯನ್ನು ತುಂಬುತ್ತವೆ. ಒತ್ತಡವಿಲ್ಲದೇ ಸಂತಸದಿಂದ ಆಟದ ಮೂಲಕ ಕಲಿಕೆ ನಡೆಯುವುದರಿಂದ ಮಕ್ಕಳ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಶಿಕ್ಷಕ ಎಚ್.ಎನ್. ಗೋವಿಂದರಡ್ಡೇರ ಹೇಳಿದರು.

ಮೂಲಸೌಕರ್ಯಕ್ಕೆ ಮನವಿ:

ಶಾಲೆ ಸುತ್ತ ಕಾಂಪೌಂಡ್, ಶುದ್ಧ ನೀರಿನ ಘಟಕ ಹಾಗೂ ಆಧುನಿಕ ಮಾದರಿಯ ಶೌಚಾಲಯ ಶಾಲೆಗೆ ಅಗತ್ಯವಾಗಿದೆ. ಇಲಾಖೆ ಅಧಿಕಾರಿಗಳು ಶಾಲೆಗೆ ಮೂಲಸೌಕರ್ಯಗಳನ್ನು ಒದಗಿಸಿ ಕೊಡಬೇಕು ಎಂದು ಯಲ್ಲಪ್ಪರಡ್ಡಿ ದೊಡ್ಡಬಿದರಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT