ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ನಿವಾರಣೆಗೆ ಚಿಕಿತ್ಸೆ ಕೊಡಿಸಿ: ನ್ಯಾಯಾಧೀಶ ಪ್ರಕಾಶ ಸಲಹೆ

ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ: ನ್ಯಾಯಾಧೀಶ ಪ್ರಕಾಶ ಸಲಹೆ
Published 25 ಮೇ 2024, 5:38 IST
Last Updated 25 ಮೇ 2024, 5:38 IST
ಅಕ್ಷರ ಗಾತ್ರ

ಹಾವೇರಿ: ‘ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರೀತಿ- ವಿಶ್ವಾಸದಿಂದ ಕಾಣಬೇಕು. ಅವರಲ್ಲಿರುವ ಖಿನ್ನತೆಯನ್ನು ಹೋಗಲಾಡಿಸಬೇಕು ಹಾಗೂ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆಯಬೇಕು’ ಎಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸಿ.ಜೆ.ಎಂ. ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ವಿ. ಸಲಹೆ ನೀಡಿದರು. 

ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ‘ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆಪ್ತ ಸಮಾಲೋಚನೆ ಪಡೆದುಕೊಳ್ಳಿ:

ಮಾನಸಿಕ ಅಸ್ವಸ್ಥರಿಗೂ ಸಾಮಾನ್ಯ ವ್ಯಕ್ತಿಗಳಂತೆ ಗೌರವದಿಂದ ಬದುಕುವ ಹಕ್ಕಿದೆ. ಮಾಸಿಕ ರೋಗಿಗಳಿಗೂ ಎಲ್ಲ ಮೂಲಭೂತ ಸೌಕರ್ಯಗಳು ದೊರೆಯಬೇಕು. ದೇಹದ ಸದೃಢ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಬಹಳ ಮುಖ್ಯವಾಗಿದೆ. ಮಾನಸಿಕ ರೋಗಿಗಳನ್ನು ಆಪ್ತ ಸಮಾಲೋಚನೆ ಮೂಲಕ ಗುಣಪಡಿಸಬಹುದು. ನಿಮ್ಮ ಅಕ್ಕಪಕ್ಕದಲ್ಲಿ ಮಾನಸಿಕ ರೋಗಳು ಕಂಡುಬದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದರೆ ಅವರಿಗೆ ಕಾನೂನಿನಡಿ ಸೂಕ್ತ ಸೌಲಭ್ಯ ಒದಗಿಸಲಾಗುವುದು. ಸಮಾಜ ಆರೋಗ್ಯವಾಗಿರಬೇಕಾದರೆ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಎಂದು ಹೇಳಿದರು.

ಒತ್ತಡ ಜೀವನಶೈಲಿ ಬದಲಿಸಿಕೊಳ್ಳಿ:

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ಮಾತನಾಡಿ, ವಿಶ್ವದಾದ್ಯಂತ ಇಂದು 21 ದಶಲಕ್ಷ ಜನರು ಸ್ಕಿಜೊಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಧುನಿಕ ಯುಗದ ನಿರಂತರ ಒತ್ತಡದ ಬದುಕಿನಿಂದ ಮಾನವ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಇಂತಹ ವ್ಯಕ್ತಿಗಳಿಗೆ ಆಪ್ತ ಸಮಾಲೋಚನೆ ಮೂಲಕ ಗುಣಪಡಿಸಬಹುದು. ಜಿಲ್ಲಾ ಆಸ್ಪತ್ರೆಯಲ್ಲಿ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಯಾವುದೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಬೇಕು ಹಾಗೂ ತಾಳ್ಮೆಯಿಂದ ನಡೆದುಕೊಳ್ಳಬೇಕು. ಸಿಟ್ಟಿನ ಕೈಲ್ಲಿ ಬುದ್ಧಿ ಕೊಡಬಾರದು. ಕ್ಷಣಿಕ ಸಿಟ್ಟು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ ಎಂದು ಅರಿತುಕೊಳ್ಳಬೇಕು. ಮಾನಸಿಕ ಕಾಯಿಲೆ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಲು ಕೆಲವರಿಗೆ ಮುಜುಗರ ಉಂಟಾದಲ್ಲಿ ‘ಟೆಲಿ ಮನಸ್‌’ ಸಹಾಯವಾಣಿ 14416 ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯ ಡಾ.ವಿಜಯಕುಮಾರ ಬಿ. ಮಾತನಾಡಿ, ಸ್ಕೀಜೊಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಅರ್ಥವಿಲ್ಲದ ಮತ್ತು ಅಸಂಬದ್ಧ ಮಾತುಗಳು, ಸೂಕ್ತವಲ್ಲದ ಭಾವನೆಗಳನ್ನು ವ್ಯಕ್ತಪಡಿಸುವುದು, ಕಾರಣವಿಲ್ಲದೇ ಅಳುವುದು, ನಗುವುದು ಮತ್ತು ಕೋಪ ಮಾಡಿಕೊಳ್ಳುವುದು, ಭಾವನೆಗಳೇ ಇಲ್ಲದ ಹಾಗೆ ಇರುವುದು, ತನ್ನ ಲೋಕದಲ್ಲಿ ಒಂಟಿಯಾಗಿರುವುದು.. ಹೀಗೆ ಅನೇಕ ಲಕ್ಷಣಗಳನ್ನು ಹೊಂದಿರುತ್ತಾನೆ. ಅನವಶ್ಯಕವಾಗಿ ಆಲೋಚನೆಗೆ ಒಳಪಡಿಸುತ್ತದೆ. ಆದರೆ ರೋಗಿಯನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದರು.

ಕಾಲೇಜು ಉಪ ಪ್ರಾಚಾರ್ಯ ಡಿ.ವಿ.ಕೊಲ್ಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಇದ್ದರು. ಉಪನ್ಯಾಸಕಿ ಅಶ್ವಿನಿ ಹತ್ತಿಕಾಳ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀದೇವಿ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಯಲ್ಲಪ್ಪ ಒಬಣ್ಣವರ ವಂದಿಸಿದರು.

ಟೆಲಿ ಮನಸ್‌ ಸಹಾಯವಾಣಿ 14416 ಸಂಪರ್ಕಿಸಿ ವಿಶ್ವದಾದ್ಯಂತ 21 ದಶಲಕ್ಷ ಮಂದಿಗೆ ಸ್ಕಿಜೋಫ್ರೀನಿಯಾ ಕ್ಷಣಿಕ ಸಿಟ್ಟಿನಿಂದ ಜೀವನ ಹಾಳು 

‘ಮೊಬೈಲ್‌ ಗೀಳಿನಿಂದ ಹೊರಬನ್ನಿ’

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮೊಬೈಲ್ ಗೀಳಿನಿಂದ ಹೊರಬಂದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಇದರಿಂದ ಜ್ಞಾನ ವೃದ್ಧಿಯಾಗುತ್ತದೆ. ಇಂದು ಸೈಬರ್ ಅಪರಾಧಗಳು ಹೆಚ್ಚಾಗಿರುವುದರಿಂದ ಮೊಬೈಲ್‍ಗೆ ಬರುವ ಅಪರಿಚಿತರ ಕರೆ ಹಾಗೂ ಸಂದೇಶಗಳನ್ನು ಸ್ವೀಕರಿಸಬಾರದು. ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ಡಿಎಲ್ ಪಡೆದು ವಾಹನ ಚಾಲನೆ ಮಾಡಬೇಕು. ಜನನ-ಮರಣ ಪ್ರಮಾಣಪತ್ರ ಆಸ್ತಿ ದಾಖಲೆಗಳ ಬಗ್ಗೆ ಅರಿವು ಹೊಂದಬೇಕು ಹಾಗೂ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಕಾಶ ವಿ. ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT