ಹಾವೇರಿ: ನಿರಂತರ ನೀರು ಬಂದರೂ ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವ ಜನರು. ದುರಸ್ತಿಗಾಗಿ ಕಾದು ಒಣಗಿರುವ ನಳಗಳು. ವಾಲ್ಗಳು ಹಾಳಾಗಿ ಸೋರಿಕೆಯಾಗುವ ನೀರು. ಜಲ ಬಳಕೆ ಮಾಡದಿದ್ದರೂ ಓಡುವ ಮೀಟರ್ಗಳು. ನಳಗಳ ದುರಸ್ತಿಗೆ ಮನವಿ ಮಾಡಿದರೂ ಸ್ಥಳಕ್ಕೆ ಬಾರದ ಸಿಬ್ಬಂದಿ. ಸುಮಾರು 70 ಮನೆಗಳಿರುವ ಗ್ರಾಮದಲ್ಲಿ 113 ನಳಗಳ ಸಂಪರ್ಕ ನೀಡಿರುವುದಾಗಿ ಘೋಷಿಸಿದ ಗುತ್ತಿಗೆದಾರ

‘ಜಲಜೀವನ್ ಮಿಷನ್ ಯೋಜನೆಯಡಿ ನಿರಂತರ ನೀರು ಪಡೆಯುತ್ತಿರುವ ಜಿಲ್ಲೆಯ ಪ್ರಥಮ ಗ್ರಾಮ’ ಎಂದು ಜಿಲ್ಲಾಡಳಿತ ಘೋಷಣೆ ಮಾಡಿರುವ ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದ ವಾಸ್ತವದ ಚಿತ್ರಣವಿದು.

ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ‘ಜಲೋತ್ಸವ– ಮನೆ ಮನೆಗೆ ಗಂಗೆ’ ಹೆಸರಿನಡಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಜಲಜೀವನ್ ಮಿಷನ್’ ಯೋಜನೆ, ಜಿಲ್ಲೆಯ ಹಲವು ಕಡೆ ಹಾದಿ ತಪ್ಪಿದೆ. ಯೋಜನೆಯ ಹುಳುಕು ಮುಚ್ಚಿಕೊಳ್ಳಲು ಪ್ರಚಾರಕ್ಕಷ್ಟೇ ಕಂಕಣವಾಡವನ್ನು ಪ್ರಥಮ ಗ್ರಾಮವೆಂದು ಘೋಷಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾಮಸ್ಥರೇ ಕಿಡಿಕಾರುತ್ತಿದ್ದಾರೆ.

ಶಿಗ್ಗಾವಿ ತಾಲ್ಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಂಕಣವಾಡ ಗ್ರಾಮದಲ್ಲಿ ಸುಮಾರು 70 ಮನೆಗಳಿವೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ, 113 ನಳಗಳ ಸಂಪರ್ಕ ನೀಡಲಾಗಿದೆ. ಆದರೆ, ಎಷ್ಟು ನಳಗಳಲ್ಲಿ ಸದ್ಯ ನೀರು ಬರುತ್ತಿದೆ ? ಎಂಬ ಮಾಹಿತಿ ಮಾತ್ರ ಜಿಲ್ಲಾಡಳಿತದಲ್ಲಿ ಲಭ್ಯವಿಲ್ಲ.

ಯೋಜನೆಯ ವಾಸ್ತವ ಸ್ಥಿತಿ ತಿಳಿಯಲು ಗ್ರಾಮದಲ್ಲಿ ಸುತ್ತಾಡಿದಾಗ, 50ಕ್ಕೂ ಹೆಚ್ಚು ನಳಗಳಲ್ಲಿ ಮಾತ್ರ ನಿರಂತರ ನೀರು ಬರುತ್ತಿದೆ. ಅದು ಬಳಕೆಗಷ್ಟೇ ಸೀಮಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಕೆಲ ನಳಗಳು, ಬಂದ್ ಆಗಿ ವರ್ಷಗಳೇ ಕಳೆದಿವೆ. ಕೆಲ ನಳಗಳು ಭಾಗಶಃ ಹಾಳಾಗಿದ್ದು, ಮುಚ್ಚಳಕ್ಕೆ ಕಟ್ಟಿಗೆಯ ತುಂಡು ಇರಿಸಲಾಗಿದೆ. ಕೆಲ ನಳಗಳ ವಾಲ್ ಕಿತ್ತು ಹೋಗಿ, ನೀರು ಸೋರಿಕೆಯಾಗುತ್ತಿದೆ. ಅವುಗಳ ಮೀಟರ್ ಮಾತ್ರ ಓಡುತ್ತಿದ್ದು, ದಿಢೀರ್ ನೂರಾರು ರೂಪಾಯಿ ಬಿಲ್ ಬಂದರೆ ಏನು ಮಾಡುವುದು ? ಎಂದು ಮನೆ ಮಾಲೀಕರು ಚಿಂತೆಯಲ್ಲಿದ್ದಾರೆ.

‘ಕಂಕಣವಾಡ ಸಣ್ಣ ಗ್ರಾಮ. ಇಂಥ ಗ್ರಾಮದಲ್ಲಿಯೇ ಯೋಜನೆಯನ್ನು ಸಂಪೂರ್ಣವಾಗಿ ಜಾರಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ವಾಸ್ತವದಲ್ಲಿ ಯೋಜನೆ ವಿಫಲವಾದರೂ ಅಧಿಕಾರಿಗಳು ಮಾತ್ರ ಪ್ರಥಮ ಗ್ರಾಮವೆಂದು ಘೋಷಿಸಿ ಪ್ರಚಾರ ಪಡೆಯುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ, ಅಧಿಕಾರಿಗಳ ಕಳ್ಳಾಟ ಗೊತ್ತಾಗುತ್ತದೆ’ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಶುದ್ಧ ನೀರಿಗೆ ಅಲೆದಾಟ: ‘ವರ್ಷದ ಹಿಂದೆ ನಳ ಜೋಡಣೆ ಮಾಡಲಾಗಿದೆ. ಐದಾರು ತಿಂಗಳಿನಿಂದ ನಳದಲ್ಲಿ ಸವಳು ನೀರು ಬರುತ್ತಿದ್ದು, ಇದು ಬಳಕೆಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗಿದೆ. ನಾವೇನಾದರೂ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಉಲ್ಭಣಿಸುತ್ತಿವೆ’ ಎಂದು ಗ್ರಾಮದ ಸಿದ್ದಪ್ಪ ಯಲ್ಲಪ್ಪ ವಾಲ್ಮೀಕಿ ತಿಳಿಸಿದರು.

‘ಮಕ್ಕಳು, ವೃದ್ಧರು ಇರುವ ಮನೆಗಳಿಗೆ ಶುದ್ಧ ಕುಡಿಯುವ ನೀರು ಬೇಕು. 2 ಕಿ.ಮೀ. ದೂರದ ಹನುಮರಹಳ್ಳಿ, 5 ಕಿ.ಮೀ. ದೂರದ ಶಿಗ್ಗಾವಿ ಹಾಗೂ ಒಂದೂವರೆ ಕಿ.ಮೀ. ದೂರದ ಚಿಕ್ಕಮಲ್ಲೂರಿಗೆ ಹೋಗಿ ಶುದ್ಧ ಕುಡಿಯುವ ನೀರು ತರುತ್ತಿದ್ದೇವೆ. ಸವಳು ನೀರಿನ ಬದಲು ಸಿಹಿ ನೀರು ಸಿಗುವ ಕಡೆಯಲ್ಲಿ ಕೊಳವೆಬಾವಿ ಕೊರೆಸಬೇಕು. ಅದೇ ನೀರನ್ನು ನಳಗಳ ಮೂಲಕ ಮನೆಗೆ ಪೂರೈಸಿದರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಯುವಕ ಕರಬಸಪ್ಪ, ‘ನಳಗಳ ನಿರ್ವಹಣೆ ಇಲ್ಲ. ವಾಲ್ ಹಾಳಾದರೂ ಕೇಳುವವರಿಲ್ಲ. ಕೆಲ ನಳಗಳು ಕಿತ್ತು ಹೋದರೂ ಲೆಕ್ಕಕ್ಕಿಲ್ಲ. ನೀರಿನ ಟ್ಯಾಂಕ್ನ ಒಳಭಾಗ ಗಲೀಜಾಗಿದ್ದು, ಅದನ್ನು ಸ್ವಚ್ಛಗೊಳಿಸಿಲ್ಲ. ನಳದ ನೀರಿನಲ್ಲಿ ಬಿಳಿ ಬಣ್ಣದ ವಸ್ತು ಬರುತ್ತಿದೆ. ಇದರಿಂದ ಕೆಲವರಿಗೆ ಮೈ ಕೆರೆತ ಶುರುವಾಗಿದೆ. ನಳದಲ್ಲಿ ನಿರಂತರವಾಗಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ’ ಎಂದರು.

ನೀರಿಲ್ಲದೇ ನಳ ಬಂದ್: ‘ಕೆಲ ದಿನದವರೆಗೆ ನೀರು ಬರುತ್ತಿದ್ದ ನಮ್ಮ ಮನೆಯ ನಳ, ಈಗ ಸಂಪೂರ್ಣ ಬಂದ್ ಆಗಿದೆ. ದುರಸ್ತಿಗೆ ಮನವಿ ನೀಡಿದರೂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಬೇರೊಂದು ನಳದಲ್ಲಿ ನೀರು ಪಡೆಯುತ್ತಿದ್ದೇವೆ’ ಎಂದು ಗ್ರಾಮದ ನಾಗಪ್ಪ ವಾಲ್ಮೀಕಿ ಹೇಳಿದರು.

ನಾಗನಗೌಡ ಪಾಟೀಲ, ‘ಆರಂಭದಿಂದಲೇ ನನ್ನ ಮನೆಯ ನಳ ಹಾಳಾಗಿದ್ದು, ವಾಲ್ ಕಿತ್ತುಹೋಗಿದೆ. ದುರಸ್ತಿ ಮಾಡುವಂತೆ ಹೇಳಿದರೆ, ನಳದ ಸಾಮಗ್ರಿಗಳು ನಮ್ಮ ಬಳಿ ಇಲ್ಲವೆಂದು ಪಂಚಾಯಿತಿಯವರು ಹೇಳುತ್ತಿದ್ದಾರೆ. ನಳ ಹಾಕಿದರೂ ನಮಗೆ ಪ್ರಯೋಜನವಿಲ್ಲದಂತಾಗಿದೆ’ ಎಂದರು.

‘ಪಂಚಾಯಿತಿಗೆ ಹಲವು ಬಾರಿ ಮನವಿ ನೀಡಿದ್ದೇನೆ. ಅವರ್ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ನಳ ಹಾಕಿ ಹೋಗಿದ್ದಾರೆ. ನಿರ್ವಹಣೆಯನ್ನೇ ಮರೆತಿದ್ದಾರೆ. ಹಿರಿಯ ಅಧಿಕಾರಿ ಹಾಗೂ ಮುಖ್ಯಮಂತ್ರಿಗೂ ಮನವಿ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ತಿಳಿಸಿದರು.

ಜನರಿಗೆ ಶುದ್ಧ ಕುಡಿಯುವ ನೀರಿನ ಅಗತ್ಯತೆ ಹೆಚ್ಚಿದೆ. ನಿರಂತರ ನೀರು ನೀಡಿರುವ ಅಧಿಕಾರಿಗಳು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಗಮನ ನೀಡಬೇಕು
ಸಿದ್ದಪ್ಪ ವಾಲ್ಮೀಕಿ ಕಂಕಣವಾಡ ಗ್ರಾಮಸ್ಥ

ಪ್ರತಿ ಮನೆಗೂ ಬಂದು ನಳಗಳ ಸ್ಥಿತಿ ಪರಿಶೀಲಿಸಬೇಕು. ಹಾಳಾದ ನಳಗಳನ್ನು ದುರಸ್ತಿ ಮಾಡಿಸಬೇಕು. ಎಲ್ಲರ ಮನೆಗೂ ನೀರು ಬರುವುದು ಖಾತ್ರಿಯಾದ ನಂತರ ಏನಾದರೂ ಘೋಷಣೆ ಮಾಡಿಕೊಳ್ಳಿ
ನಾಗನಗೌಡ ಪಾಟೀಲ ಕಂಕಣವಾಡ ಗ್ರಾಮಸ್ಥ

‘ಜನ ಇರದಿದ್ದಾಗ ಕಾರ್ಯಕ್ರಮ’:

‘ಜಲಜೀವನ್ ಮಿಷನ್ ಯೋಜನೆಯಡಿ ನಿರಂತರ ನೀರು ಪಡೆಯುತ್ತಿರುವ ಜಿಲ್ಲೆಯ ಪ್ರಥಮ ಗ್ರಾಮ’ ಎಂಬುದನ್ನು ಘೋಷಣೆ ಮಾಡಲು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಹನುಮರಹಳ್ಳಿ ಪಂಚಾಯಿತಿ ವತಿಯಿಂದ ಆಗಸ್ಟ್ 4ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಗ್ಗಾವಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಎಸ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾಶಿನಾಥ ಹಾಗೂ ಪಂಚಾಯಿತಿ ಸದಸ್ಯರು ಹಾಜರಿದ್ದರು. ಈ ಬಗ್ಗೆಯೂ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ‘ಮನೆಗೆ ಅಳವಡಿಸಿರುವ ನಳಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವಂತೆ ಪಂಚಾಯಿತಿಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಇದರ ನಡುವೆಯೇ ಆಗಸ್ಟ್ 4ರಂದು ಗ್ರಾಮದಲ್ಲಿ ಹೆಚ್ಚು ಜನರು ಇಲ್ಲದ ಸಂದರ್ಭದಲ್ಲಿ ಅಧಿಕಾರಿಗಳು ಕಾರ್ಯಕ್ರಮ ಮಾಡಿದ್ದಾರೆ. ಅವರು ಸಹ ನಳದ ನೀರು ಕುಡಿದಿಲ್ಲ. ಬಾಟ್ಲಿ ನೀರು ತಂದು ಕುಡಿದಿದ್ದಾರೆ’ ಎಂದು ಕೆಲ ಗ್ರಾಮಸ್ಥರು ದೂರಿದರು. ‘ಗ್ರಾಮಕ್ಕೆ ಒಬ್ಬರೇ ಸದಸ್ಯರಿದ್ದಾರೆ. ಜನರು ಆಕ್ಷೇಪ ವ್ಯಕ್ತಪಡಿಸುತ್ತಾರೆಂದು ತಿಳಿದು ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ ಹೋಗಿದ್ದಾರೆ. ಇದಾದ ನಂತರ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇವೆ. ಕೆಲದಿನಗಳ ನಂತರ ಸಮಸ್ಯೆ ಬಗೆಹರಿಸುವುದಾಗಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸುವುದಾಗಿ ಅವರು ಹೇಳುತ್ತಿದ್ದಾರೆ. ಸಮಸ್ಯೆಗಳು ಇರುವಾಗಲೇ ಪ್ರಥಮ ಗ್ರಾಮವೆಂದು ಘೋಷಣೆ ಮಾಡಿದ್ದು ಏಕೆ? ಅಧಿಕಾರಿಗಳು ತಮ್ಮ ಹುಳುಕು ಮುಚ್ಚಿಕೊಳ್ಳಲು ನಮ್ಮ ಗ್ರಾಮ ಆಯ್ಕೆ ಮಾಡಿಕೊಂಡಿದ್ದು ಏಕೆ’ ಎಂದು ಪ್ರಶ್ನಿಸಿದರು.

ಯೋಜನೆಯಲ್ಲಿ ಅಕ್ರಮ ?:

‘ಕಂಕಣವಾಡ ಗ್ರಾಮದಲ್ಲಿ ಸುಮಾರು 70 ಮನೆಗಳಿವೆ. ಆದರೆ 113 ಮನೆಗಳಿಗೆ ನಳದ ಸಂಪರ್ಕ ನೀಡಿರುವುದಾಗಿ ಗುತ್ತಿಗೆದಾರರು ಫಲಕ ಹಾಕಿಕೊಂಡಿದ್ದಾರೆ. ಉಪಯೋಗ ಇಲ್ಲದ ಕಡೆಯೂ ನಳ ಅಳವಡಿಸಲಾಗಿದೆ’ ಎಂದು ಗ್ರಾಮಸ್ಥರು ದೂರಿದರು. ‘₹ 50.68 ಲಕ್ಷ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕಳಪೆ ಮಟ್ಟದ ವಸ್ತುಗಳನ್ನು ಬಳಸಿ ಸಂಪರ್ಕ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಯೋಜನೆಯಲ್ಲಿ ಅಕ್ರಮ ನಡೆದಿರುವ ಅನುಮಾನವಿದ್ದು ಸೂಕ್ತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.