ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲತ್ತಿ ಗ್ರಾಮ: ಮೂಲಸೌಲಭ್ಯ ಮರೀಚಿಕೆ

ಕೆರೆ ಅಭಿವೃದ್ಧಿ, ಪದವಿ ಪೂರ್ವ ಕಾಲೇಜು ಪ್ರಾರಂಭಕ್ಕೆ ಗ್ರಾಮಸ್ಥರ ಒತ್ತಾಯ
Published 6 ಸೆಪ್ಟೆಂಬರ್ 2023, 6:25 IST
Last Updated 6 ಸೆಪ್ಟೆಂಬರ್ 2023, 6:25 IST
ಅಕ್ಷರ ಗಾತ್ರ

ರಟ್ಟೀಹಳ್ಳಿ : ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಗ್ರಾಮಸ್ಥರಿಗೆ ಮೂಲಸೌಲಭ್ಯ ಒದಗಿಸಿದಲ್ಲಿ ಮಾತ್ರ ಸಾಧ್ಯ. ಹುಲ್ಲತ್ತಿ ಗ್ರಾಮವು ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮವಾಗಿದ್ದು, ಅಂದಾಜು ಐದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಆದರೆ ಗ್ರಾಮಸ್ಥರು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ.

ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಯಿಂದ 8 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ರಟ್ಟೀಹಳ್ಳಿಯಿಂದ ಯಾವುದೇ ಸಾರಿಗೆ ಸಂಪರ್ಕ ಇಲ್ಲ. ಹುಲ್ಲತ್ತಿ ಗ್ರಾಮಸ್ಥರು ನಿತ್ಯ ತಮ್ಮ ಕಚೇರಿ ಕೆಲಸಗಳು, ವ್ಯಾಪಾರ ವಹಿವಾಟಿಗೆ ತಾಲ್ಲೂಕು ಕೇಂದ್ರಕ್ಕೆ ಬರಬೇಕಾದರೆ ವಾಹನ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಿದ್ದು, ಹೆಚ್ಚಿನ ಓದಿಗಾಗಿ ರಟ್ಟೀಹಳ್ಳಿಗೆ ಬರಲು ಬಸ್ ಸಂಚಾರ ವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ಮೊಟಕು ಗೊಳಿಸುವ ಪರಿಸ್ಥಿತಿಯಿದೆ. ಹೀಗಾಗಿ ಇಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭಿ ಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಸೆ.

ಕೆರೆಗಳ ಅಭಿವೃದ್ಧಿ ಶೂನ್ಯ: ಗ್ರಾಮದಲ್ಲಿ ಈ ವರೆಗೂ ಜಲಜೀವನ ಯೋಜನೆ ಅನುಷ್ಠಾನಗೊಂಡಿಲ್ಲ. ಗ್ರಾಮದಲ್ಲಿ ಒಟ್ಟು ಆರು ಕೆರೆಗಳಿದ್ದು, ತುಂಬೋ ಹೊಂಡ, ದೊಡ್ಡಕೆರೆ, ಚೌಡವ್ವನ ಕೆರೆ, ರಾಮನ ಕಟ್ಟೆಕೆರೆ, ಚಿಕ್ಕನಕಟ್ಟೆ ಕೆರೆ, ಗೋ-ಕಟ್ಟೆ, ಕೆರೆಗಳು ಇದುವರೆಗೂ ಅಭಿವೃದ್ಧಿಗೊಂಡಿಲ್ಲ. ಹಾಗಾಗಿ ತ್ಯಾಜ್ಯ ಎಸೆಯುವ ಗುಂಡಿಗಳಂತಾಗಿವೆ.

‘ಹಲವಾರು ಬಾರಿ ಗ್ರಾಮಸ್ಥರು ಕೆರೆಗಳ ಅಭಿವೃದ್ಧಿ ಕೈಗೊಳ್ಳುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಿಂದೆ ಇದೇ ಕೆರೆಗಳು ಸುವ್ಯವಸ್ಥೆಯಿಂದ ಕೂಡಿದ್ದು ನಮ್ಮ ಹಿರಿಯರು ಈ ಕೆರೆಯ ನೀರನ್ನೆ ಕುಡಿಯಲು ಬಳಸುತ್ತಿದ್ದರು. ಕೆರೆಗಳ ಅಭಿವೃದ್ದಿಯಿಂದ ಜಾನುವಾರುಗಳಿಗೆ ಮೈತೊಳೆಯಲು, ನೀರು ಕುಡಿಯಲು ಅನುಕೂಲವಾಗುತ್ತದೆ. ಸುತ್ತಮುತ್ತಲಿನ ಜಮೀನುಗಳ ಅಂತರ್ಜಲಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ. ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಗ್ರಾಮಸ್ಥರಾದ ಗುರುರಾಜ ಕಡೇಮನಿ.

‘ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲ. ಸ್ಥಳೀಯವಾಗಿ ಕ್ಷೇಮ ಆರೋಗ್ಯ ಕೇಂದ್ರವಿದೆ. ಆದರೆ ತುರ್ತು ಚಿಕಿತ್ಸೆಗೆ ಗ್ರಾಮಸ್ಥರು ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಗೆ ತೆರಳಬೇಕು ಮತ್ತು ಮಕ್ಕಳು ಉನ್ನತ ಶಿಕ್ಷಣಕ್ಕೆ ರಟ್ಟೀಹಳ್ಳಿಗೆ ಹೋಗ ಬೇಕಾಗಿರುವುದರಿಂದ ಬಸ್ ಸೌಲಭ್ಯ ಕಲ್ಪಿಸಬೇಕು. ಗ್ರಾಮದಲ್ಲಿ ವ್ಯವಸ್ಥಿತ ಚರಂಡಿ ಇಲ್ಲದೆ ಕೊಳಚೆ ನೀರು ಅಲ್ಲಲ್ಲಿ ನಿಂತು ರೋಗು-ರುಜಿನುಗಳು ಹರಡುವಂತಾಗಿದೆ. ಗ್ರಾಮ ಪಂಚಾಯ್ತಿ ಯವರು ಗ್ರಾಮದಲ್ಲಿ ಚರಂಡಿ ನಿರ್ಮಿಸ ಬೇಕು. ಅಂಗನವಾಡಿ ಕೇಂದ್ರಗಳು, ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಗಳು, ಶೌಚಾಲಯ, ದುರಸ್ತಿಗೊಳಿಸ ಬೇಕು’ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದಿವೀಗಿಹಳ್ಳಿ.

ಹುಲ್ಲತ್ತಿಗೆ ಗ್ರಾಮದ ಸಂಪರ್ಕ ರಸ್ತೆಗಳಾದ ಚಿಕ್ಕಯಡಚಿ, ಕೋಡ, ಗಂಗಾಪುರದಿಂದ ಚಿಕ್ಕಮತ್ತೂರ, ಮಾರ್ಗಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ಗ್ರಾಮಕ್ಕೆ ತಲುಪುವುದೇ ದೊಡ್ಡ ಸಾಹಸವಾಗುತ್ತದೆ.

ಹುಲ್ಲತ್ತಿ, ಹುಲ್ಲತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಮತ್ತೂರ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ
ಮಾರುತಿ ಶಿವಪ್ಪ ಪೂಜಾರ, ಗ್ರಾ. ಪಂ.ಅಧ್ಯಕ್ಷ, ಹುಲ್ಲತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT