ರಾಣೆಬೆನ್ನೂರು: ‘ತಾಲ್ಲೂಕಿನ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ₹2 ಕೋಟಿ ಅನುದಾನ ಮೀಸಲಿಟ್ಟಿದ್ದು, ತಾಲ್ಲೂಕಿನ 100 ಸರ್ಕಾರಿ ಶಾಲೆಗಳಿಗೆ 100 ಸ್ಮಾರ್ಟ್ ಕ್ಲಾಸ್‌ನ್ನು ಒದಗಿಸಿದ್ದೇವೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿನ ಸರ್ಕಾರಿ ಶಾಲೆ ನಂ.7ರಲ್ಲಿ ಹಾಗೂ ತಾಲ್ಲೂಕಿನ ಹರನಗಿರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಸಕ ಅನುದಾನ ಮತ್ತು ಫ್ರೀಡಂ ಥ್ರೂ ಡಿಜಿಟಲ್ ಎಜುಕೇಷನ್ 41 ಕ್ಲಬ್ ಆಫ್ ಇಂಡಿಯಾ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 100 ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ 100 ಶಾಲೆಗಳನ್ನು ಸಜ್ಜುಗೊಳಿಸಿ, ಯಾವುದೇ ದೊಡ್ಡ ನಗರಕ್ಕೆ ಸಮಾನವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪೂರೈಸುವುದು ನನ್ನ ಗುರಿಯಾಗಿದೆ. ದೇಶದಲ್ಲಿಯೇ ಇದು ಮೊಟ್ಟಮೊದಲನೆಯದಾಗಿದೆ. ಡಿಜಿಟಲ್ ಶಿಕ್ಷಣದ ಕ್ಷೇತ್ರದಲ್ಲಿ 41 ಕ್ಲಬ್‌ಗಳ ಅಸೋಸಿಯೇಷನ್‌ನ ಕೆಲಸದಿಂದ ನನಗೆ ತುಂಬಾ ಸಂತೋಷ ತಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ವರ್ಷ ಇದೇ ಸಂಸ್ಥೆಯ ಸಹಕಾರದೊಂದಿಗೆ ತಾಲ್ಲೂಕಿನಲ್ಲಿ 24 ನೂತನ ಶಾಲಾ ಕೊಠಡಿಗಳನ್ನು ನಿರ್ಮಸಲಾಗುವುದು ಎಂದು ಭರವಸೆ ನೀಡಿದರು.
ಅಸೋಸಿಯೇಷನ್ ಆಫ್ 41 ಕ್ಲಬ್ ಆಫ್ ಇಂಡಿಯಾ ಅಸೋಸಿಯೇಶನ್ ಅಧ್ಯಕ್ಷ ಎಆರ್ ಶ್ರೀನಿವಾಸ ಸರಸ್ವತುಲ ಮಾತನಾಡಿ, ‘ಫ್ರೀಡ್‌ಂ ಥ್ರೂ ಡಿಜಿಟಲ್ ಎಜುಕೇಷನ್ ಎಂಬುದು ನಮ್ಮ ದೀರ್ಘಾವಧಿಯ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೆಟ್ರೋ ನಗರದ ವಿದ್ಯಾರ್ಥಿಗಳಂತೆ ಕಲಿಕಾ ಅವಕಾಶಗಳನ್ನು ಒದಗಿಸುವ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಶಿಕ್ಷಣ ಉಪಕರಣಗಳನ್ನು ಪೂರೈಸುತ್ತದೆ’ ಎಂದರು.
ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಗ, ಐಆರ್‌ಓ ವಿವೇಕ ಮಠ, ಆಕ್ಸನ್ ಅಗ್ರಿ ಸೈನ್ ಪ್ರೈಲಿನ ಆನಂದಗೌಡ, ಸತ್ಯಸಾಕುಮರಿ, ಗಿರಿ ಯಂಡಮೂರಿ,ಗಣೇಶ ಕಿಣಿ, ಪರಶುರಾನ ಶಲಗರ, ಪ್ರಶಾಂತ ರಾಮನಗೌಡ್ರ, ಅಲೀಂ, ಡಾ.ವಿರುಪಾಕ್ಷ, ರಿಷಿ ತಿವಾರಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಪಾಶಿಗಾರ, ಹೇಮಯ್ಯ ಕಾಕೋಳ, ಗಂಗಪ್ಪನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.