ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು: ಪೂರ್ಣಗೊಳ್ಳದ ಏತ ನೀರಾವರಿ ಯೋಜನೆ, ನೀರಿನ ಕೊರತೆಯಿಂದ ಜನರಿಗೆ ತೊಂದರೆ

ಹಿಂದುಳಿದ ತಾಲ್ಲೂಕಿನಲ್ಲಿ ತೀವ್ರ ನೀರಿನ ಕೊರತೆ
Published 26 ಫೆಬ್ರುವರಿ 2024, 6:13 IST
Last Updated 26 ಫೆಬ್ರುವರಿ 2024, 6:13 IST
ಅಕ್ಷರ ಗಾತ್ರ

ಸವಣೂರು: ನೀರಿಗಾಗಿ ಸಾಕಷ್ಟು ಹೋರಾಟ ಕಂಡಿರುವ ಸವಣೂರು ತಾಲ್ಲೂಕಿನಲ್ಲಿ ಈ ಬಾರಿಯೂ ಜಲಕ್ಷಾಮ ಎದುರಾಗಿದೆ. ಬೇಸಿಗೆಯ ಆರಂಭಕ್ಕೂ ಮುನ್ನವೇ ತಿಂಗಳಿಗೆ ಒಂದೆರಡು ಬಾರಿ ನೀರು ಕಾಣುವ ಪರಿಸ್ಥಿತಿ ಸವಣೂರಿನ ಜನರಿಗೆ ಎದುರಾಗಿದೆ.

ಹಲವು ದಶಕಗಳಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಸವಣೂರು ಜನ ಅತಿವೃಷ್ಟಿಯಾದಾಗ  ಮಾತ್ರ ಕೆಲವು ವರ್ಷ ಜಲ ಸಮೃದ್ದಿಯನ್ನು ಕಂಡಿದ್ದರು. ‘ಹಿಂದುಳಿದ ತಾಲ್ಲೂಕು’ ಎಂಬ ಹಣೆಪಟ್ಟಿಯೊಂದಿಗೆ ನೀರಿನ ಕೊರತೆಯೂ ಸವಣೂರಿನ ಅಭಿವೃದ್ಧಿಗೆ ಮಾರಕವಾಗಿದ್ದು, ತಾಲ್ಲೂಕಿನ ಜೀವನದಿಯಾದ ವರದೆಯಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.

ಸವಣೂರಿನ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳು ರೂಪುಗೊಂಡಿದ್ದರೂ, ಪರಿಣಾಮ ಮಾತ್ರ ಶೂನ್ಯ. ಕಳೆದ 25 ವರ್ಷಗಳಿಂದ ತಾಲ್ಲೂಕಿಗೆ ನಾಲ್ಕು ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ, ಜಲದಾಹ ಮಾತ್ರ ತೀರದಂತಾಗಿದೆ. ‘ನೀರಿನ ವಿಷಯದಲ್ಲಿ, ಆಡಳಿತ ನಡೆಸಿದ ಸರ್ಕಾರಗಳು ಮಲತಾಯಿ ಧೋರಣೆ ತೋರಿವೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ ಬಾರ್ಕಿ ಆರೋಪಿಸಿದ್ದಾರೆ.

ಆಡಳಿತಾತ್ಮಕವಾಗಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಿ ಹೋಗಿರುವ ಸವಣೂರು ತಾಲ್ಲೂಕು ಲೋಕಸಭಾ ಕ್ಷೇತ್ರದ ವಿಷಯದಲ್ಲಿಯೂ ಇಬ್ಬರು ಸಂಸದರ ಕಾರ್ಯ ಕ್ಷೇತ್ರವಾಗಿದೆ. ರಾಜಕೀಯ ಚದುರಂಗದ ಆಟದಲ್ಲಿ ಇಲ್ಲಿನ ಜನ ಬಲಿಪಶುಗಳಾಗುತ್ತಿದ್ದಾರೆ. 

ವಿಫಲಗೊಂಡ ಯೋಜನೆ: ಮೊಟ್ಟಮೊದಲು ಸವಣೂರು ನಗರದ ಮೋತಿ ತಲಾಬ ಕೆರೆಗೆ ಶಿಗ್ಗಾವಿಯ ನಾಗನೂರ ಕೆರೆಯಿಂದ ನೀರು ತುಂಬಿಸುವ ಯೋಜನೆ ರೂಪಿಸಲಾಯಿತು. ಕಾಮಗಾರಿ ಅರಂಭಗೊಳ್ಳುತ್ತಿದ್ದಂತೆ ಹೊಗೆಯಾಡಿದ ಅಸಮಾಧಾನ, ಯೋಜನೆ ಪೂರ್ಣಗೊಳ್ಳುವ ಹಂತ ತಲುಪುತ್ತಿದ್ದಂತೆ ದಟ್ಟವಾಯಿತು. ಶಿಗ್ಗಾವಿ ಕೆರೆಯ ನೀರನ್ನು ಸವಣೂರಿಗೆ ನೀಡುವ ಬಗ್ಗೆ ಅಪಸ್ವರ ಆರಂಭವಾದವು. ಆದ್ದರಿಂದ ಹತ್ತಾರು ಕೋಟಿ ರೂಪಾಯಿಗಳ ಕಾಮಗಾರಿ ಪೂರ್ಣಗೊಂಡರೂ, ಸಂಪೂರ್ಣ ವಿಫಲವಾಯಿತು. ಇದಕ್ಕೆ ಪೂರಕವಾಗಿ ನಾಗನೂರ ಕೆರೆಗೆ ವರದಾ ನದಿ ನೀರು ಹರಿಸುವ ಯೋಜನೆಯೂ ರೂಪುಗೊಂಡು, ಅಪೂರ್ಣಗೊಂಡಿತು.

ಬಳಿಕ ಬಹು ನಿರೀಕ್ಷೆಯೊಂದಿಗೆ ಕಾರ್ಯಾರಂಭಗೊಂಡ ಮೋತಿ ತಲಾಭ ಏತ ನೀರಾವರಿ ಯೋಜನೆಯೂ ಹತ್ತಾರು ಹೋರಾಟದ ನಡುವೆಯೂ ವಿಫಲವಾಯಿತು. ಯೋಜನೆ ಪೂರ್ಣಗೊಂಡರೂ ಅದರ ನಿರ್ವಹಣೆಯ ಹೊಣೆಗಾರಿಕೆಯನ್ನು ರೈತರಿಗೆ ನೀಡಿದ್ದರಿಂದ ಮತ್ತೊಂದು ಬಹುಕೋಟಿ ಮೊತ್ತದ ಯೋಜನೆ ಮಣ್ಣು ಪಾಲಾಯಿತು.

‘ಇದರ ಬಳಿಕ ಬಹುಗ್ರಾಮ ನೀರು ಸರಬರಾಜು ಯೋಜನೆಯ ಅಡಿ ಹಲವಾರು ಕಾಮಗಾರಿಗಳು ನಡೆದರೂ ಎಲ್ಲವೂ ಕೇವಲ ಹಣವನ್ನು ಕೊಳ್ಳೆಹೊಡೆಯುವ ಸಾಧನಗಳಾಗಿ ಬಳಕೆಯಾದವು. ಸವಣೂರಿನ ನೀರಿನ ಕೊರತೆ ಕೇವಲ ಸಾಮಾಜಿಕ ಸಮಸ್ಯೆಯ ಮುಖ ಮಾತ್ರ ಹೊಂದಿರದೆ ರಾಜಕೀಯ ಹಾಗೂ ಆರ್ಥಿಕ ಲೆಕ್ಕಾಚಾರಗಳಿಗೂ ಹೆಚ್ಚಿನ ಮಹತ್ವ ಪಡೆಯಿತು. ಸವಣೂರಿನ ನೀರಿನ ಸಮಸ್ಯೆ ಜೀವಂತವಾಗಿರಬೇಕು’ ಎಂಬ ತೆರೆಮರೆಯ ಉದ್ದೇಶ ಮಾತ್ರ ಸಫಲವಾಯಿತು ಎನ್ನುತ್ತಾರೆ ರೈತ ಚನ್ನಪ್ಪ ಮರಡೂರ.

ಅನುದಾನ ವ್ಯರ್ಥ: ‘ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಕಳಸೂರ ಗ್ರಾಮದ ಏತ ನೀರಾವರಿ ಯೋಜನೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ಕನಿಷ್ಠ ಪ್ರಮಾಣದ ನಿರ್ವಹಣೆಯೂ ಇಲ್ಲದೆ ಯೋಜನೆಯ ಬಹುತೇಕ ಅನುದಾನ ವ್ಯರ್ಥವಾಗಿದೆ. ನದಿಯಿಂದ ಜಾಕ್‌ವೆಲ್‌ವರೆಗೆ ಮಾಡಲಾದ ಕಾಲುವೆ ಸಂಪೂರ್ಣವಾಗಿ ಹೂಳಿನಿಂದ ತುಂಬಿದೆ. ನಿರಂತರವಾಗಿ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಜಾಕ್‌ವೆಲ್‌ನಲ್ಲಿ ಅನೇಕ ಸಮಸ್ಯೆಗಳಿವೆ. ವಿದ್ಯುತ್ ಉಪಕರಣ, ಶೆಲ್‌ಗಳೂ ಹಾಳಾಗಿವೆ’ ಎಂಬುದು ಸ್ಥಳೀಯ ಸಾರ್ವಜನಿಕರ ಆರೋಪ.

ಬೇಸಿಗೆ ಆರಂಭಗೊಳ್ಳುವ ಹಂತದಲ್ಲಿ ನೀರಿಗಾಗಿ ಹಣ ವ್ಯರ್ಥಮಾಡುವ ತಾಲ್ಲೂಕಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವರದಾ ನದಿಯಲ್ಲಿ ನೀರಿನ ಹರಿವು ಇರುವ ಸಂದರ್ಭದಲ್ಲಿಯೇ ಭವಿಷ್ಯದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಯೋಜನೆಯ ಪೈಪ್‌ಲೈನ್, ಮೋಟಾರ್ ವ್ಯವಸ್ಥೆ, ಕಾಲುವೆಗಳ ನಿರ್ವಹಣೆ, ಸಮರ್ಪಕ ವಿದ್ಯುತ್ ಪೂರೈಕೆ, ಸಿಬ್ಬಂದಿ ಸುರಕ್ಷತೆ ಮೊದಲಾದ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯೋಜನೆಯ ಗುತ್ತಿಗೆದಾರರ ಮರ್ಜಿಗೆ ಒಳಗಾಗದೆ, ಅವರಿಂದ 5 ವರ್ಷಗಳ ನಿರ್ವಹಣಾ ಅವಧಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂಬುದು ತಾಲ್ಲೂಕಿನ ಜನರ ಆಗ್ರಹ.

ಈ ಏತನೀರಾವರಿ ಯೋಜನೆಯ ಅನ್ವಯ ಕುಂದಗೋಳ ಹಾಗೂ ಹಾನಗಲ್ಲ ತಾಲ್ಲೂಕಿಗೆ ಸಂಪರ್ಕಿಸಬೇಕಾದ ಪೈಪ್‌ಲೈನ್ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಪೈಪ್‌ಲೈನ್ ಕಾಮಗಾರಿಯ ಸಂದರ್ಭದಲ್ಲಿ ಹಲವು ರೈತರ ಹೊಲಗಳಿಗೆ ಹಾನಿಯಾಗಿದ್ದರೂ ಪರಿಹಾರ ನೀಡಿಕೆ ಸಮರ್ಪಕವಾಗಿಲ್ಲ. ಪಂಪ್‌ಹೌಸ್‌ವರೆಗೆ ಮಾಡಲಾದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಒಟ್ಟಾರೆಯಾಗಿ ವರದಾ ನದಿಯಲ್ಲಿ ಹರಿದ ನೀರಿನಂತೆ ನೀರಾವರಿ ಯೋಜನೆಯ ಹೆಸರಿನಲ್ಲಿ ಹರಿದು ಹೋದ ಸಹಸ್ರಾರು ಕೋಟಿ ರೂಪಾಯಿಗಳ ಅನುದಾನವೂ ವ್ಯರ್ಥವಾಗಿ ಹೋಗಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಸಂಗಮೇಶ ಪಿತಾಂಬ್ರಶೆಟ್ಟಿ.

ಸವಣೂರು ತಾಲ್ಲೂಕಿನ ಕಳಸೂರ ಗ್ರಾಮದ ಹತ್ತಿರದ ಸವಣೂರು ಏತನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ಅಳವಡಿಸಿರುವ 110ಕೆವಿ ವಿದ್ಯುತ್ ಪ್ರಸರಣ ಘಟಕ
ಸವಣೂರು ತಾಲ್ಲೂಕಿನ ಕಳಸೂರ ಗ್ರಾಮದ ಹತ್ತಿರದ ಸವಣೂರು ಏತನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ಅಳವಡಿಸಿರುವ 110ಕೆವಿ ವಿದ್ಯುತ್ ಪ್ರಸರಣ ಘಟಕ
ವರದಾ ನದಿಯಿಂದ ಸವಣೂರು ಏತನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ನೀರು ಹರಿದು ಬರುವ ಕಾಲುವೆ ನೀರಿಲ್ಲದೆ ಒಣಗಿರುವುದು
ವರದಾ ನದಿಯಿಂದ ಸವಣೂರು ಏತನೀರಾವರಿ ಯೋಜನೆಯ ಜಾಕ್‌ವೆಲ್‌ಗೆ ನೀರು ಹರಿದು ಬರುವ ಕಾಲುವೆ ನೀರಿಲ್ಲದೆ ಒಣಗಿರುವುದು
ಸವಣೂರು ಏತ ನೀರಾವರಿ ಯೋಜನೆಯಲ್ಲಿ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯಂತ್ರಗಳು ನಿಷ್ಕ್ರೀಯಗೊಂಡಿರುವುದು
ಸವಣೂರು ಏತ ನೀರಾವರಿ ಯೋಜನೆಯಲ್ಲಿ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯಂತ್ರಗಳು ನಿಷ್ಕ್ರೀಯಗೊಂಡಿರುವುದು

ಬಹುವೆಚ್ಚದ ಯೋಜನೆ: ಹಲವು ದೋಷ 

ಸವಣೂರಿನ ಶಾಸಕರಾಗಿ ಜಲಸಂಪನ್ಮೂಲ ಸಚಿವರಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಸವಣೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಅದಕ್ಕೆ ತಕ್ಕಂತೆ ತಾಲ್ಲೂಕಿನ ಕಳಸೂರ ಗ್ರಾಮದಿಂದ ಮೋತಿ ತಲಾಬ ಕೆರೆಗೆ ನೀರು ಹರಿಸುವ ₹800 ಕೋಟಿ ಮೊತ್ತದ ಬೃಹತ್ ಯೋಜನೆಯೊಂದು ರೂಪುಗೊಂಡಿತು ಸವಣೂರು ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ಕುಂದಗೋಳ ಹಾನಗಲ್ಲ ಹಾಗೂ ಶಿಗ್ಗಾವಿ ತಾಲ್ಲೂಕುಗಳಲ್ಲಿನ 48 ಕೆರೆಗಳನ್ನು ತುಂಬಿಸುವ ಈ ಯೋಜನೆಯ ಕಾಮಗಾರಿ ಅನುಷ್ಠಾನಗೊಳ್ಳಲು ಐದಾರು ವರ್ಷ ಬೇಕಾಯಿತು. ಅಂತಿಮವಾಗಿ ಕಾಮಗಾರಿ ಆರಂಭಗೊಳ್ಳುವ ಸಂದರ್ಭದಲ್ಲಿ ಯೋಜನಾ ವೆಚ್ಚ ಸಾವಿರ ಕೋಟಿ ದಾಟಿತು.

2022–23 ನೇ ಆರ್ಥಿಕ ವರ್ಷದಲ್ಲಿ ಮುಖ್ಯ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರೂ ಮಳೆಗಾಲದಲ್ಲಿ ಪೂರ್ಣಾವಧಿ ಕಾರ್ಯನಿರ್ವಹಿಸಬೇಕಿದ್ದ ನೀರಾವರಿ ಯೋಜನೆ ಕುಂಟುತ್ತ ಸಾಗಿತು. ಯೋಜನೆಯ ಕಾಮಗಾರಿಗಳಲ್ಲಿದ್ದ ಲೋಪದೋಷಗಳು ಕಳಪೆ ಪೈಪ್‌ಲೈನ್ ಮಾರ್ಗಗಳು ನೀರಿನ ಹರಿವಿಗೆ ತೊಂದರೆ ಮಾಡಿತು. ಕೊಳವೆ ಮಾರ್ಗದ ಹಲವು ಕಡೆಗಳಲ್ಲಿ ಸೋರಿಕೆ ಕಂಡುಬಂದವು. ವಿದ್ಯುತ್ ಮಾರ್ಗವೂ ದೋಷಪೂರಿತವಾಗಿತ್ತು.

ವರದಾ ನದಿಯಲ್ಲಿ ನೀರಿನ ಹರಿವು ಇರುವಾಗಲೇ ನೀರನ್ನು ಕೆರೆಗಳಿಗೆ ತುಂಬಿಸಲು ಮುಂದಾಗಬೇಕಿದ್ದ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆದಾರರು ತೀವ್ರ ನಿರ್ಲಕ್ಷ ತೋರಿದ ಪರಿಣಾಮ ಎಂದಿನಂತೆ ವರದಾ ನದಿಯಲ್ಲಿನ ನೀರು ವ್ಯರ್ಥವಾಗಿ ಹರಿದು ಹೋಯಿತು. ಬಳಿಕ ಈ ವರ್ಷ ಬರಗಾಲದ ಸಾಧ್ಯತೆಗಳು ಕಂಡುಬರುತ್ತಿದ್ದಂತೆ ಎಚ್ಚೆತ್ತುಕೊಂಡ ನೀರಾವರಿ ನಿಗಮದ ಅಧಿಕಾರಿಗಳು ನೀರು ಹರಿಸಲು ಮುಂದಾದರೂ ನದಿಯಲ್ಲಿನ ನೀರಿನ ಹರಿವು ಇಳಿಕೆಯಾಗಿತ್ತು.

Cut-off box - ಸಿಬ್ಬಂದಿಗಿಲ್ಲ ಸೌಲಭ್ಯ ಕಳಸೂರ ಪಂಪ್ ಹೌಸ್ ಆರಂಭಗೊಂಡ ಕೆಲವೇ ದಿನಗಳಲ್ಲಿ ಅಲ್ಲಿನ ಕೆಲಸಗಾರರೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿರುವ ಘಟನೆ ಸಂಭವಿಸಿತ್ತು. ಆದರೆ ಈವೆರೆಗೂ ಸೂಕ್ತ ಮುನ್ನೆಚ್ಚರಿಕೆ ವಹಿಸಿಲ್ಲ. ಅಲ್ಲಿನ ಸಿಬ್ಬಂದಿಗೆ ಕನಿಷ್ಠ ಪ್ರಮಾಣದ ಸೌಲಭ್ಯಗಳೂ ಇಲ್ಲ ಎಂಬ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT