ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ ಹೆಚ್ಚಳ; ಕಳವಳ

ಅತಿವೃಷ್ಟಿಯಿಂದ 70 ಸಾವಿರ ಹೆಕ್ಟೇರ್‌ ಬೆಳೆಹಾನಿ: ಸಾಲದ ಸುಳಿಗೆ ಸಿಲುಕುತ್ತಿರುವ ಅನ್ನದಾತರು
Last Updated 21 ನವೆಂಬರ್ 2022, 6:59 IST
ಅಕ್ಷರ ಗಾತ್ರ

ಹಾವೇರಿ: ಕೃಷಿ ಪ್ರಧಾನ ಜಿಲ್ಲೆಯಾದ ಹಾವೇರಿಯಲ್ಲಿ ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನಲ್ಲಿ 70 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ. ರೈತರ ಆತ್ಮಹತ್ಯೆಗೆ ಬೆಳೆ ಹಾನಿ, ಇಳುವರಿ ಕುಂಠಿತ ಮತ್ತು ಸಾಲಬಾಧೆ ಪ್ರಮುಖ ಕಾರಣಗಳಾಗಿವೆ.

ಐದು ವರ್ಷಗಳ ಹಿಂದೆ ಬರಗಾಲಕ್ಕೆ ನಲುಗಿದ್ದ ಜಿಲ್ಲೆಯ ಅನ್ನದಾತ, ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ, ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾನೆ. 2020ರಲ್ಲಿ 84, 2021ರಲ್ಲಿ 111 ಹಾಗೂ 2022ರಲ್ಲಿ 113 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದೇ ವರ್ಷ ಜನವರಿ ತಿಂಗಳಲ್ಲಿ 13, ಫೆಬ್ರುವರಿ 10, ಮಾರ್ಚ್ 13, ಏಪ್ರಿಲ್‌ನಲ್ಲಿ 10, ಮೇ ತಿಂಗಳಲ್ಲಿ 10 ರೈತರ ಆತ್ಮಹತ್ಯೆಗಳು ನಡೆದಿವೆ. ಜೂನ್‌ನಲ್ಲಿ 9, ಜುಲೈನಲ್ಲಿ 8, ಆಗಸ್ಟ್‌ನಲ್ಲಿ 12, ಸೆಪ್ಟೆಂಬರ್‌ನಲ್ಲಿ 20 ಹಾಗೂ ಅಕ್ಟೋಬರ್ ತಿಂಗಳಲ್ಲಿ ಈವರೆಗೆ 8 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

2015ರಲ್ಲಿ ಮಂಡ್ಯ ಬಿಟ್ಟರೆ ರಾಜ್ಯದಲ್ಲಿ ಹಾವೇರಿಯಲ್ಲೇ ಅತಿಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ನಿರಂತರ ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟ ಎದುರಿಸಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ವಾಡಿಕೆ ಮಳೆಗಿಂತ ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಬೆಳೆಗಳು ಜಲಾವೃತಗೊಂಡು, ಫಸಲುಗಳು ನೀರಿನಲ್ಲೇ ಕೊಳೆತು ಹೋಗುತ್ತಿವೆ. ಕೆಲವು ಕಡೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಕೀಟಬಾಧೆಯಿಂದ ಬೆಳೆಗಳು ಕಮರಿ ಹೋಗಿವೆ. ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ತೀರಿಸಲಾಗದೇ ನಿತ್ಯವೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ವರದಿಗಳು ಆತಂಕ ಸೃಷ್ಟಿಸಿವೆ.

‘ಆತ್ಮಹತ್ಯೆ ತಡೆಗೆ ಸರ್ಕಾರ ಮುಂದಾಗಲಿ’

ಶಿಗ್ಗಾವಿ:‘ಸರ್ಕಾರ ರೈತಪರ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಆತ್ಮಹತ್ಯೆ ತಡೆಗೆ ಮುಂದಾಗಬೇಕು. ಆದರೆ ಸರ್ಕಾರ ರೂಪಿಸಿರುವ ರೈತಪರ ಯೋಜನೆಗಳು ಸರಿಯಾಗಿ ಅರ್ಹ ರೈತರಿಗೆ ತಲುಪುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ ಗುಡಿಗೇರಿ ದೂರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಸಣ್ಣ ಸಂಸ್ಕರಣಾ ಘಟಕಗಳು ಬೇಕು. ರೈತರು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದಾಗ ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಕಾಕೋಳದ ಪ್ರಗತಿಪರ ರೈತಚನ್ನಪ್ಪಬಸಪ್ಪ ಕೊಂಬಳಿ.

‘ರೈತರ ಸಮಸ್ಯೆಗೆ ಸರ್ಕಾರದ ಸ್ಪಂದನೆಯಿಲ್ಲ’

ರಟ್ಟೀಹಳ್ಳಿ:‘ರೈತರ ಸಮಸ್ಯೆಗಳಿಗೆ ಪೂರಕವಾಗಿ ಸರ್ಕಾರದ ಸ್ಪಂದನೆಯಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ಅವನ ಬದುಕು ಕತ್ತಲಾಗುತ್ತದೆ. ಉತ್ತಮ ಬೆಳೆ ಬಂದಾಗ ಬೆಂಬಲವಿಲ್ಲದೆ ರೈತ ಹತಾಶೆಗೊಳಾಗಾಗುತ್ತಿದ್ದಾನೆ. ಸರ್ಕಾರ ಬೆಳೆಗೆ ಬೆಲೆ ನಿಗದಿಪಡಿಸುತ್ತದೆ, ಆದರೆ ಉತ್ಪನ್ನವನ್ನು ಖರೀದಿಸುವುದಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಬೇಸರ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಒಟ್ಟು 12 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎಂಟು ಪ್ರಕರಣಗಳನ್ನು ಕೃಷಿ ಇಲಾಖೆಗೆ ನಮ್ಮ ಕಚೇರಿಯಿಂದ ಅನುಮೋದನೆಗಾಗಿ ಕಳುಹಿಸಲಾಗಿದ್ದು, ನಾಲ್ಕು ಪ್ರಕರಣಗಳಿಗೆ ಹಣ ಮಂಜೂರಾತಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ ಮೂರು ಪ್ರಕರಣಗಳಿಗೆ ನಾವು ಪ್ರತಿ ಕುಟುಂಬಕ್ಕೆ ₹5 ಲಕ್ಷದಂತೆ ಪರಿಹಾರ ನೀಡಿರುತ್ತೇವೆ’ ಎಂದು ತಹಶೀಲ್ದಾರ್‌ ಅರುಣಕುಮಾರ ಕಾರಗಿ ಮಾಹಿತಿ ನೀಡಿದರು.

ಸಾಲದ ಸುಳಿಯಲ್ಲಿ ಅನ್ನದಾತರು

ಹಾನಗಲ್:‘ರೈತಪರವಾದ ಸರ್ಕಾರಿ ಕಾರ್ಯಕ್ರಮಗಳು ಅರ್ಹ ರೈತರನ್ನು ತಲುಪುವುದೇ ಇಲ್ಲ. ಸಾಲ ನೀಡುವ ರಾಷ್ಟ್ರೀಕೃತ ಬ್ಯಾಂಕ್‌ಗಳು ನಿಗದಿತ ಅವಧಿಗೂ ಮುನ್ನ ಸಾಲ ಮರುಪಾವತಿಗೆ ಅವಕಾಶ ನೀಡಬೇಕು. ಕೈತುಂಬ ಬೆಳೆ ಬಂದಾಗ ರೈತರು ತಾವು ಮಾಡಿದ ಸಾಲ ತೀರಿಸಲು ಅವಕಾಶವಾದಾಗ ಸಾಲದ ಹೊರೆ ತಗ್ಗಲಿದೆ. ಇದು ಆತ್ಮಹತ್ಯೆ ಘಟನೆಗಳಿಂದ ಮುಕ್ತ ಪಡೆಯಲು ಸಾಧ್ಯವಾಗಿಸುತ್ತವೆ’ ಎಂದುರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಅಭಿಪ್ರಾಯಪಡುತ್ತಾರೆ.

‘ಪ್ರತಿ ವರ್ಷ ಬೆಳೆ ಹಾನಿಯಾದರೆ ಸಾಲದ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಸಾಲ ತೀರಿಸುವುದು ಅಸಾಧ್ಯವಾಗುವುದರಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ವಿಶೇಷ ಯೋಜನೆ ರೂಪಿಸಬೇಕು’ ಎಂದು ಬ್ಯಾಡಗಿಯ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಒತ್ತಾಯಿಸಿದರು.

ಜಾನುವಾರು ಕಳೆದುಕೊಂಡು ತಬ್ಬಲಿಯಾದ ರೈತ

ಸವಣೂರು: ಕಳೆದ 3 ವರ್ಷಗಳಿಂದ ನಿರಂತರ ಸುರಿದ ಮಳೆಗೆ ಬೆಳೆಗಳೆಲ್ಲ ನೆಲಕಚ್ಚಿದ್ದು ಬಿತ್ತನೆ ಮಾಡಿದ ರೈತರಿಗೆ ಸಮರ್ಪಕವಾಗಿ ಬೆಳೆ ಬಾರದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.

‘ಚರ್ಮಗಂಟು ರೋಗ ಉಲ್ಬಣಗೊಂಡು ನೂರಾರು ಜಾನುವಾರುಗಳು ಮರಣ ಹೊಂದಿವೆ. ಇದರಿಂದ ರೈತ ತಬ್ಬಲಿಯಂತಾಗಿದ್ದಾನೆ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಎಲ್ಲ ಅರ್ಹ ಫಲಾನುಭವಿಗಳಿಗೆ ಸಿಕ್ಕಿಲ್ಲ. ಸರ್ಕಾರ ರೈತರ ಅಳಲಿಗೆ ಧ್ವನಿಯಾಗಿ ನಿಂತಿಲ್ಲ’ ಎನ್ನುತ್ತಾರೆಕರ್ನಾಟಕ ರಾಜ್ಯ ರೈತ ಸಂಘ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಸೋಮಶೇಖರಗೌಡ.

ನಿರಂತರ ಮಳೆ: ಕೈತಪ್ಪಿದ ಬೆಳೆ

ಹಿರೇಕೆರೂರು:ಕಳೆದ ಮೂರು ವರ್ಷಗಳಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಅದರಲ್ಲಿ 4 ಪ್ರಕರಣಗಳು ತಿರಸ್ಕೃತವಾದರೆ. 27 ಪ್ರಕರಣಗಳಲ್ಲಿ ಪರಿಹಾರವನ್ನು ನೀಡಲಾಗಿದ್ದು, ಇನ್ನುಳಿದ 4 ಪ್ರಕರಣಗಳಲ್ಲಿ ಎಫ್‌.ಎಸ್‌.ಎಲ್‌. ವರದಿ ಬರುವುದು ತಡವಾಗಿರುವುದರಿಂದ ಪರಿಹಾರವನ್ನು ಕೊಡಲಾಗಿಲ್ಲ. ಒಟ್ಟು ₹1 ಕೋಟಿ 25 ಲಕ್ಷಗಳನ್ನು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರವನ್ನು ಕೊಡಲಾಗಿದೆ.

‘ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಬೆಳೆಗಳು ಬಾರದೆ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ. ಒಂದು ಎಕರೆ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದರೆ ಎಕರೆಗೆ ಎರಡು ಕ್ವಿಂಟಲ್ ಮೆಕ್ಕೆಜೋಳ ಬರುತ್ತಿಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ಬೆಳೆ ಹಾನಿ ಪರಿಹಾರ ಕೊಡುತ್ತಿಲ್ಲ. ಹೀಗಾಗಿ ರೈತರು ಬ್ಯಾಂಕು, ಫೈನಾನ್ಸ್‌ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ರೈತಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ಹೇಳಿದರು.

ಕಳಪೆ ಬೀಜದಿಂದ ಉತ್ಪಾದನೆ ಕುಂಠಿತ

ರಾಣೆಬೆನ್ನೂರು: ರೈತನ ಜೀವನ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಸೂಕ್ತ ಸಮಯಕ್ಕೆ ಮಳೆ ಬಾರದೆ ರೈತ ಹಾಕಿದ ಬಂಡವಾಳ ಮಣ್ಣು ಪಾಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆ ವಿದ್ಯುತ್ ಲಭ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಕಳಪೆ ಬೀಜಗಳಿಂದ ರೈತನ ಉತ್ಪಾದನೆ ಕಡಿಮೆಯಾಗುತ್ತಿದೆ. ಇಳುವರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಅಂಗಡಿ ಹೆಚ್ಚಾಗಿ ಕುಡಿತಕ್ಕೆ ಕೂಲಿ ಕಾರ್ಮಿಕರು ದಾಸರಾಗುತ್ತಿದ್ದಾರೆ. ಜಾತ್ರೆ, ಹಬ್ಬ ಹರಿದಿನಗಳಿಗೆ ಧುಂದು ವೆಚ್ಚ ಮಾಡಿ ರೈತರು ಸಾಲಗಾರರಾಗುತ್ತಿದ್ದಾರೆ. ಸರ್ಕಾರ ಮೊದಲು ಮದ್ಯದ ಅಂಗಡಿ ಬಂದ್‌ ಮಾಡಬೇಕು ಎನ್ನುತ್ತಾರೆ ಗ್ರಾಮೀಣ ಪ್ರದೇಶದ ರೈತ ಮಹಿಳೆಯರು.

‘ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಾದ್ಯಂತ 22 ರೈತ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಎಲ್ಲವೂ ಪರಿಗಣನೆಗೆ ಬರುವುದಿಲ್ಲ. ಉಪವಿಭಾಗಾಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಗಳ ಸಮಿತಿಯಿಂದ 11 ಪ್ರಕರಣಗಳು ಪರಿಹಾರಕ್ಕೆ ಅರ್ಹವಾಗಿವೆ. ಅದರಲ್ಲಿ 3 ಪ್ರಕರಣಗಳ ದಾಖಲಾತಿಗಳ ಸಂಗ್ರಹದಿಂದ ಬಾಕಿ ಉಳಿದಿವೆ. ಒಂದು ತಿರಸ್ಕೃತಗೊಂಡಿದ್ದು, 7 ಪ್ರಕರಣಗಳಿಗೆ ಪರಿಹಾರಕ್ಕೆ ತಹಶೀಲ್ದಾರ್‌ ಕಚೇರಿಗೆ ಅನುದಾನಕ್ಕೆ ಕಳಿಸಲಾಗಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿ ಎಚ್‌.ಬಿ.ಗೌಡಪ್ಪಳವರ.

***

ಗುಣಮಟ್ಟದ ಬೀಜಗಳ ವಿತರಣೆ, ರಸಗೊಬ್ಬರವನ್ನು ಸಕಾಲಕ್ಕೆ ಪೂರೈಸಬೇಕು. ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು
– ಹನುಮಂತಪ್ಪ ಕಬ್ಬಾರ, ರೈತ ಮುಖಂಡ

**

ರೈತರು ಏಕಬೆಳೆ ಪದ್ಧತಿ ಕೈಬಿಟ್ಟು, ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ರೈತರ ಬೆಳೆ ಬಂದಾಗ ಸರ್ಕಾರ ಉತ್ಪನ್ನ ಖರೀದಿಸಿಲು ಮುಂದಾಗಬೇಕು
– ಚನ್ನಪ್ಪಬಸಪ್ಪ ಕೊಂಬಳಿ, ಪ್ರಗತಿಪರ ರೈತ, ಕಾಕೋಳ

**

ವಿಮಾ ಕಂಪನಿಗಳು ಸರಿಯಾಗಿ ವಿಮಾ ಹಣ ಬಿಡುಗಡೆ ಮಾಡುತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ಅರ್ಧದಷ್ಟು ರೈತರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ
– ರವೀಂದ್ರಗೌಡ ಪಾಟೀಲ, ರೈತ ಮುಖಂಡ, ರಾಣೆಬೆನ್ನೂರು

**

ರೈತ ಸತ್ತ ನಂತರ ₹5 ಲಕ್ಷ ಪರಿಹಾರ ನೀಡುವ ಬದಲು, ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ನೆರವು ನೀಡಿ ಆತ್ಮಸ್ಥೈರ್ಯ ತುಂಬಬೇಕು
– ರಾಮಣ್ಣ ಕೆಂಚಳ್ಳೇರ, ಜಿಲ್ಲಾ ಘಟಕದ ಅಧ್ಯಕ್ಷ, ರೈತಸಂಘ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ, ಶಂಕರಪ್ಪ ಕೊಪ್ಪದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT