ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಸರು ಗದ್ದೆಯಾಗುವ ಕ್ರೀಡಾಂಗಣ: ನನಸಾಗದ ‘ಸಿಂಥೆಟಿಕ್’

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಜನರ ಒತ್ತಾಯ: ಪ್ರತಿ ವರ್ಷ ತಾತ್ಕಾಲಿಕ ಕ್ರಮಕ್ಕೆ ಹಣ ಖರ್ಚು
Published : 15 ಆಗಸ್ಟ್ 2024, 7:01 IST
Last Updated : 15 ಆಗಸ್ಟ್ 2024, 7:01 IST
ಫಾಲೋ ಮಾಡಿ
Comments

ಹಾವೇರಿ: ಇಲ್ಲಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತಿದ್ದು, ‘ಸಿಂಥೆಟಿಕ್ ಟ್ರ್ಯಾಕ್’ ನಿರ್ಮಿಸಬೇಕೆಂಬ ಜನರ ಹಲವು ವರ್ಷಗಳ ಕನಸು ಮಾತ್ರ ಇದುವರೆಗೂ ನನಸಾಗಿಲ್ಲ. ಇದೀಗ, ಸ್ವಾತಂತ್ರ್ಯೋತ್ಸವ ಆಚರಣೆಗೂ ಕೆಸರು ಕಾಡುತ್ತಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಯೋಜಿಸಲಾಗುತ್ತಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಲಾಗುತ್ತಿದೆ. ಬುಧವಾರ ಬೆಳಿಗ್ಗೆ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಇದರಿಂದ ಕ್ರೀಡಾಂಗಣದಲ್ಲಿ ನೀರು ನಿಂತುಕೊಂಡು ಕೆಸರು ಹೆಚ್ಚಾಗಿದೆ.

ಬೆಳಿಗ್ಗೆ ಅಭ್ಯಾಸಕ್ಕೆ ಬಂದ ಪೊಲೀಸರು, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಕೆಸರು ಕಡಿಮೆ ಮಾಡಲು ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಹಾಕಿಸಿದರು. ನಂತರ, ಇದೇ ಕ್ರೀಡಾಂಗಣದಲ್ಲಿಯೇ ಪೊಲೀಸರು ಹಾಗೂ ಶಾಲೆ–ಕಾಲೇಜು ವಿದ್ಯಾರ್ಥಿಗಳು ಪಂಥಸಂಚಲನದ ಅಭ್ಯಾಸ ನಡೆಸಿದರು.

‘ಮುಖ್ಯ ವೇದಿಕೆಯ ಮುಂಭಾಗದಲ್ಲಿ ಮಾತ್ರ ಅಭ್ಯಾಸ ಮಾಡಿ. ಕ್ರೀಡಾಂಗಣದ ಮಧ್ಯಕ್ಕೆ ಜಾಸ್ತಿ ಹೋಗಬೇಡಿ. ಅಲ್ಲಿ ಕೆಸರು ಇದೆ. ಎಚ್ಚರವಿರಲಿ’ ಎನ್ನುತ್ತಲೇ ಅಧಿಕಾರಿಗಳು, ಅಭ್ಯಾಸಕ್ಕೆ ನಿರ್ದೇಶನಗಳನ್ನು ನೀಡಿದರು.

‘ಜಿಲ್ಲಾ ಕ್ರೀಡಾಂಗಣ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಮಳೆ ಬಂದರೆ, ನೀರು ನಿಂತು ಕೆಸರು ಹೆಚ್ಚಾಗುತ್ತದೆ. ಕ್ರೀಡಾಪಟುಗಳಿಗೆ, ವಾಯುವಿಹಾರಿಗಳಿಗೆ ಹಾಗೂ ಇತರೆ ಕಾರ್ಯಕ್ರಮ ನಡೆಸುವವರಿಗೆ ಅನಾನೂಕೂಲವಾಗುತ್ತಿದೆ. ಇದು ಒಂದು ವರ್ಷದ ಸಮಸ್ಯೆಯಲ್ಲ. ಹಲವು ವರ್ಷಗಳ ಸಮಸ್ಯೆ’ ಎಂದು ಕ್ರೀಡಾಂಗಣದಲ್ಲಿ ಅಭ್ಯಾಸನಿರತ ಅಧಿಕಾರಿಯೊಬ್ಬರು ಹೇಳಿದರು.

‘ಕಲ್ಲು, ಇಟ್ಟಿಗೆ ಮತ್ತು ಮಣ್ಣಿನಿಂದ ಕೂಡಿದ ಕ್ರೀಡಾಂಗಣದಲ್ಲಿ ಅಭ್ಯಾಸ ಬಲುಕಷ್ಟ. ಸ್ವಾತಂತ್ರ್ಯೋತ್ಸವದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ಅಭ್ಯಾಸಕ್ಕೆ ಬಂದಿದ್ದಾಗ, ಕೆಸರು ಹೆಚ್ಚಿತ್ತು. ಜಲ್ಲಿ ಕಲ್ಲು ಹಾಕಿ ತಾತ್ಕಾಲಿಕವಾಗಿ ಕೆಸರು ಕಡಿಮೆ ಮಾಡಲಾಗಿದೆ. ಗುರುವಾರ ಪುನಃ ಮಳೆಯಾದರೆ, ಆಚರಣೆಗೆ ತೊಂದರೆಯಾಗಬಹುದು’ ತಿಳಿಸಿದರು.

ಸಿಂಥೆಟಿಕ್ ಟ್ರ್ಯಾಕ್‌ಗೆ ಒತ್ತಾಯ: ಸದ್ಯದ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಕಲ್ಲು, ಮಣ್ಣು ಹಾಗೂ ಇಟ್ಟಿಗೆ ಇದೆ. ಈ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಲು ಕ್ರೀಡಾಪಡುಗಳು ನಿತ್ಯವೂ ಕಷ್ಟಪಡುತ್ತಿದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕಾಗಿ ಅವರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದು, ಅವರ ಬೇಡಿಕೆ ಮಾತ್ರ ಈಡೇರಿಲ್ಲ.

ತಾಲ್ಲೂಕು ಮಟ್ಟ, ಜಿಲ್ಲಾಮಟ್ಟ ಹಾಗೂ ಇತರೆ ಇಲಾಖೆಗಳ ಕ್ರೀಡಾಕೂಟಗಳು ಸಹ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲೂ ಹಲವು ಸಮಸ್ಯೆಗಳು ಉಂಟಾಗುತ್ತಿದೆ. ಓಟ ಮತ್ತು ರಿಲೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಟಗಾರರು, ಆಯತಪ್ಪಿ ಬಿದ್ದರೆ ಗಾಯಗೊಳ್ಳುವ ಪ್ರಕರಣಗಳು ವರದಿಯಾಗಿವೆ.

‘ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಬೇಕೆಂಬುದು ಎಲ್ಲರ ಒತ್ತಾಯ. ಆದರೆ, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು, ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಆಸಕ್ತಿ ತೋರುತ್ತಿಲ್ಲ. ಕ್ರೀಡಾ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಕ್ರೀಡಾಪಟುಗಳು ದೂರಿದರು.

ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕೆಸರು ಹೆಚ್ಚಿರುವ ಜಾಗದಲ್ಲಿ ಸಿಬ್ಬಂದಿ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲುಗಳನ್ನು ಬುಧವಾರ ಹಾಕಿದರು–ಪ್ರಜವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕೆಸರು ಹೆಚ್ಚಿರುವ ಜಾಗದಲ್ಲಿ ಸಿಬ್ಬಂದಿ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲುಗಳನ್ನು ಬುಧವಾರ ಹಾಕಿದರು–ಪ್ರಜವಾಣಿ ಚಿತ್ರ/ ಮಾಲತೇಶ ಇಚ್ಚಂಗಿ

‘ಧ್ವಜಾರೋಹಣದಂದು ಘೋಷಣೆಗೆ ಆಗ್ರಹ’

‘ಕ್ರೀಡಾಂಗಣದಲ್ಲಿ ಕೆಸರು ಹೆಚ್ಚಿರುವ ಸಂದರ್ಭದಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡು ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ತಾತ್ಕಾಲಿಕ ಕ್ರಮಕ್ಕೆ ಹಣ ಖರ್ಚು ಮಾಡಲಾಗುತ್ತಿದೆ. ಇದರ ಬದಲು ಶಾಶ್ವತವಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು. ಸುತ್ತಲೂ ಸುಸಜ್ಜಿತ ಕಾಂಪೌಂಡ್ ನಿರ್ಮಿಸಬೇಕು’ ಎಂದು ಕ್ರೀಡಾಪಟುಗಳು ಆಗ್ರಹಿಸುತ್ತಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದ ಬಗ್ಗೆ ಘೋಷಿಸಬೇಕು’ ಎಂದು ಒತ್ತಾಯಿಸಿದರು. ‘ಮಳೆಗಾಲದಲ್ಲಿ ಕೆಸರು ಇದ್ದರೆ ಬೇಸಿಗೆಯಲ್ಲಿ ದೂಳು ಹೆಚ್ಚು. ಇದರಿಂದ ಕ್ರೀಡಾಪಟಗಳು ಆರೋಗ್ಯ ಸಮಸ್ಯೆಗೂ ಒಳಗಾಗುತ್ತಿದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾದರೆ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತದೆ. ಕ್ರೀಡಾಂಗಣವೂ ಅಚ್ಚುಕಟ್ಟಾಗುತ್ತದೆ’ ಎಂದು ಹೇಳಿದರು.

ಕೆಸರಿನಿಂದ ಸ್ಥಳಾಂತರವಾದ ಪೊಲೀಸ್ ಪರೀಕ್ಷೆ

ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲಾ ಕ್ರೀಡಾಂಗಣ ಇತ್ತೀಚೆಗೆ ನೀರು ನಿಂತು ಕೆಸರು ಹೆಚ್ಚಾಗಿತ್ತು. ಇದೇ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಶಸ್ತ್ರ ಮೀಸಲು ಪಡೆಯ 60 ಕಾನ್‌ಸ್ಟೆಬಲ್ (ಎಪಿಸಿ) ಹುದ್ದೆಗಳ ನೇಮಕಾತಿ ದೈಹಿಕ ಪರೀಕ್ಷೆಯನ್ನು ಅನಿವಾರ್ಯವಾಗಿ ಧಾರವಾಡದ ಆರ್‌.ಎನ್. ಶೆಟ್ಟಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು.

‘ಜುಲೈ 8ರಂದು ದೈಹಿಕ ಪರೀಕ್ಷೆ ನಡೆಯಬೇಕಿತ್ತು. ಆದರೆ ಕ್ರೀಡಾಂಗಣದಲ್ಲಿ ಕೆಸರು ಹೆಚ್ಚಿತ್ತು. ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕೆಲದಿನ ಕಾದರೂ ಕೆಸರು ಕಡಿಮೆಯಾಗಲಿಲ್ಲ. ಅಭ್ಯರ್ಥಿಗಳನ್ನು ಕಾಯಿಸಬಾರದೆಂದು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು. ಸಿಂಥೆಟಿಕ್ ಟ್ರ್ಯಾಕ್ ಇದ್ದಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT