ಬುಧವಾರ, ಆಗಸ್ಟ್ 4, 2021
27 °C
ಐರಣಿಯ ಸಾಲು ಬೆಟ್ಟಗಳು ಮನಮೋಹಕ

ಅವಸಾನದ ಅಂಚಿನಲ್ಲಿ ‘ಐರಣಿ ಕೋಟೆ’: ಕೋಟೆಯನ್ನು ವಶಕ್ಕೆ ಪಡೆದಿದ್ದ ಟಿಪ್ಪು

ಎಸ್‌.ಎಸ್.ನಾಯಕ Updated:

ಅಕ್ಷರ ಗಾತ್ರ : | |

Prajavani

ಕುಮಾರಪಟ್ಟಣ: ಸಿದ್ಧಾರೂಢರು ಹಾಗೂ ಮುಪ್ಪಿನಾರ್ಯ ಸ್ವಾಮೀಜಿ ತಪೋಗೈದ ಪೂಣ್ಯ ಭೂಮಿ (ಮಲ್ಲಿಕಾರ್ಜುನ ಬೆಟ್ಟ), ಹಾವನೂರ ದೇಸಾಯಿ ಅವರನ್ನು ಸ್ಮರಿಸುವ ವೆಂಕಪ್ಪ ದೇಗುಲ, ಹೊಳೆಮಠ, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಗತವೈಭವವನ್ನು ಸಾರಿ ಹೇಳುತ್ತವೆ. ಆದರೆ 17ನೇ ಶತಮಾನದಲ್ಲಿ ಬ್ರಿಟೀಷರು ಆಳಿದ ಕೋಟೆ ಮಾತ್ರ ಅವಸಾನದ ಅಂಚಿನಲ್ಲಿದ್ದು, ಇತಿಹಾಸಪ್ರಿಯರ ಬೇಸರಕ್ಕೆ ಕಾರಣವಾಗಿದೆ.  

ಬ್ರಿಟೀಷರ ಆಳ್ವಿಕೆಯಲ್ಲಿ ಶತ್ರುಗಳಿಂದ ಕೋಟೆಯನ್ನು ರಕ್ಷಿಸಿಕೊಳ್ಳಲು ಐರಣಿ ಗ್ರಾಮದ ಸಾಲು ಬೆಟ್ಟಗಳು ಅಭೇದ್ಯ ಕೋಟೆಯಂತಿದ್ದವು. ಇರಾನ್‌ ದೇಶದಿಂದ ಬಟ್ಟೆ ವ್ಯಾಪಾರಿಗಳು ಸವಣೂರು ನವಾಬನ ಅನುಮತಿ ಪಡೆದು ನದಿ ತೀರದಲ್ಲಿ ನೆಲೆಯೂರಿದರು. ಇದೇ ಸ್ಥಳ 'ಇರಾನಿ'ಯಾಗಿ ಮುಂದೆ ʼಐರಣಿʼ ಎಂಬ ಹೆಸರು ಬಂದಿರಬಹುದು ಎಂದು ಹವ್ಯಾಸಿ ಸಂಶೋಧಕ ಪ್ರಮೋದ ನಲವಾಗಲ ಅಭಿಪ್ರಾಯಪಡುತ್ತಾರೆ. 

ಪೌರಾಣಿಕೆ ಹಿನ್ನೆಲೆಯಲ್ಲಿ ಮೊಂಡುಗೈ ಹನುಮಂತಗೌಡ ದೇಸಾಯಿಯವರ ಆನೆಗಳು ಇಲ್ಲಿ ಬರುತ್ತಿದ್ದರಿಂದ ಐರಾವತ ಕ್ಷೇತ್ರ ‘ಐರಣಿ’ ಎಂದಾಗಿರಬಹುದು. ಇದುವರೆಗೂ ಯಾವುದೇ ಶಾಸನ ದೊರೆತಿಲ್ಲ. 

ಕೋಟೆ ಮುಂಭಾಗದ ದಾರಿಯಲ್ಲಿ ವಾರಕ್ಕೊಮ್ಮೆ (ಶನಿವಾರ) ಸಂತೆ ನಡೆಯುತ್ತಿತ್ತು. ಇದನ್ನು ಸಂತೆಯ ದಾರಿಯೆಂದೇ ಈಗಲೂ ಗುರುತಿಸುತ್ತಾರೆ. ಇಲ್ಲಿನ ಕುರುಬರು ನೇಯುತ್ತಿದ್ದ ಗುಣಮಟ್ಟದ ಕಂಬಳಿಗಳು ಹೆಚ್ಚು ಜನಪ್ರಿಯವಾಗಿದ್ದವು. ಭೀಕರ ಬರಗಾಲ ಉಂಟಾಗಿದ್ದರಿಂದ ಊರು ಬಿಟ್ಟು ಹೋಗಿರಬಹುದು ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಿಂಗಪ್ಪ ಕಳ್ಳಿಮನಿ.

ಟಿಪ್ಪು ಸುಲ್ತಾನ್ 1790ರಲ್ಲಿ ಈ ಕೋಟೆಯನ್ನು ವಶಕ್ಕೆ ಪಡೆದನು. ಟಿಪ್ಪು ಮತ್ತು ಬ್ರಿಟೀಷರ ಮಧ್ಯೆ ಜರುಗಿದ ಕಾಳಗದಲ್ಲಿ ಬ್ರಿಟಿಷರು ಸೋಲು ಅನುಭವಿಸಿದರು. ಈ ಕಾರಣ ಟಿಪ್ಪೂ ಸುಲ್ತಾನ 'ಚೆನ್ನಾಪುರದಲ್ಲಿ' ಜಮಾಲ ಷಾವಲಿ ದರ್ಗಾದ ಜೂಡಿದಾರರಿಗೆ ಗ್ರಾಮವನ್ನು ದಾನ ನೀಡಿ ಕನ್ನಡದಲ್ಲಿ ಶಾಸನ ಬರೆಸುತ್ತಾನೆ. 

ಬ್ರಿಟಿಷರಿಗೆ ಸಿಂಹಸ್ವಪ್ನ:

ಇದೇ ಕೋಟೆಯನ್ನು ಸೌತ್ ಇಂಡಿಯನ್ ರೆಬೆಲಿಯನ್ ಚನ್ನಗಿರಿಯ ಮರಾಠರ ವಂಶಸ್ಥ ಧೊಂಡಿಯಾ ವಾಘ ಟಿಪ್ಪುವಿನ ಸೇನೆಯಲ್ಲಿ ಸೇನಾಧಿಕಾರಿ ಆಗಿದ್ದನು. ಟಿಪ್ಪುವಿನ ನಂತರ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಐರಣಿ ಕೋಟೆ ವಶಕ್ಕೆ ಪಡೆದು, ಹಲವು ವರ್ಷಗಳ ಕಾಲ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡುತ್ತಾನೆ.

ಬ್ರಿಟಿಷ್ ಸರ್ಕಾರ ವಾಘನನ್ನು ಸೆರೆ ಹಿಡಿಯಲು ಸಿ.ವೆಲ್ಲೆಸ್ಲಿ, ನಂತರ ಲಾರ್ಡ್‌ ವೆಲ್ಲಿಂಗ್ಟನ್‌ರನ್ನು ನೇಮಿಸಿತು. 1800 ಜೂನ್‌ 20ರಂದು ಮಾಹಿತಿ ತಿಳಿದ ವಾಘನ ಸೈನಿಕರು ಕೋಟೆ ತ್ಯಜಿಸಿದ ಮರುದಿನ ಬ್ರಿಟಿಷರ ಸೇನೆ ಕೋಟೆ ವಶಕ್ಕೆ ಪಡೆಯಿತು ಎನ್ನುತ್ತಾರೆ ಇತಿಹಾಸಕಾರರು.

ಹನುಮ ಭಕ್ತ:

ಧೊಂಡಿಯಾ ವಾಘ ಮತ್ತು ಆತನ ಸಹಚರರನ್ನು ತುಂಗಭದ್ರಾ ಹಾಗೂ ವರದಾ ನದಿಯ ಆಚೆಗೆ ಗಡಿಪಾರು ಮಾಡಲಾಗುತ್ತದೆ. ಧೊಂಡಿಯಾ ವಾಘ ಹನುಮನ ಭಕ್ತನಾಗಿದ್ದರಿಂದ ಕದರಮಂಡಲಗಿ ಕಾಂತೇಶನ ಪಾದಕ್ಕೆ ತನ್ನ ಬಲಗೈ ಖಡ್ಗವನ್ನು ಅರ್ಪಿಸುತ್ತಾನೆ. ಈಗಲೂ ದೇವಸ್ಥಾನದಲ್ಲಿ ಖಡ್ಗವನ್ನು ನೋಡಬಹುದು. ಬ್ರಿಟೀಷರ ಕುಟಿಲ ತಂತ್ರದಿಂದ ವಾಘನನ್ನು ಬ್ರಿಟಿಷರು ಸೆರೆಹಿಡಿದು 1800 ಸೆ.19ರಂದು ಕೋಣಗಲ್ ಎಂಬಲ್ಲಿ ಕೊಲ್ಲುತ್ತಾರೆ ಎಂಬ ಕಟುಸತ್ಯವನ್ನು ಇತಿಹಾಸಕಾರ ಪ್ರಮೋದ್ ಬಿಚ್ಚಿಡುತ್ತಾರೆ.

ಕೋಟೆ ಜಾಗ ಒತ್ತುವರಿಯಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಶಿಥಿಲಗೊಂಡಿರುವ ಕೋಟೆಗೆ ಕಾಯಕಲ್ಪ ನೀಡಬೇಕು. ಪ್ರೇಕ್ಷಣೀಯ ಸ್ಥಳವನ್ನಾಗಿ ನಿರ್ಮಿಸಲು ಮುಂದಾಗಬೇಕು ಎಂದು ಗ್ರಾಮದ ಮುಖಂಡರಾದ ಟಿ.ಸಿ.ಪಾಟೀಲ, ರುದ್ರಪ್ಪ ಅರಿವಿ, ಆಂಜನೇಯ ನಾಗೇನಹಳ್ಳಿ ಹಾಗೂ ಪ್ರವೀಣ್‌ ಸುಣಗಾರ ಒತ್ತಾಯಿಸುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು