ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕನ ನಾಡಿನಲ್ಲಿ ಕನ್ನಡದ ನಗಾರಿ

ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ: ಕನ್ನಡದ ಕಂಪು ಬೀರಿದ ಕಲಾತಂಡಗಳು
Last Updated 6 ಜನವರಿ 2023, 20:48 IST
ಅಕ್ಷರ ಗಾತ್ರ

ಹಾವೇರಿ: ‌‘ಏಲಕ್ಕಿ ಕಂಪಿನ ನಗರಿ’ಯಲ್ಲಿ ಕನ್ನಡದ ಕಂಪು ಸೂಸುತ್ತಾ, ಕನ್ನಡಿಗರ ಎದೆಯಲ್ಲಿ ಸುಪ್ತವಾಗಿರುವ ಕನ್ನಡಾಭಿಮಾನವನ್ನು ಪುಟಿದೇಳಿಸುತ್ತಾ, ಸಾಮರಸ್ಯದ ಭಾವ– ಕನ್ನಡಿಗರ ಜೀವ ಎಂಬುದನ್ನು ಮನದಟ್ಟು ಮಾಡುತ್ತಾ ನಗರದ ರಾಜಬೀದಿಯಲ್ಲಿ ಗಜಗಾಂಭೀರ್ಯದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಥ ಸಾಗಿತು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ನಗರದ ಪುರಸಿದ್ಧೇಶ್ವರ ದೇವಸ್ಥಾನದ ಮುಂಭಾಗ ಶುಕ್ರವಾರ ಬೆಳಿಗ್ಗೆ 7.30ಕ್ಕೆ ‘ಕನ್ನಡ ರಥ’ದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.

ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡರು ಅಲ್ಲಿ ನೆರೆದಿದ್ದ ಕನ್ನಡಿಗರಿಗೆ ಕೈ ಮುಗಿದು ನಮಿಸಿ, ‘ಅರಮನೆ ದರ್ಬಾರ್‌’ ಮಾದರಿಯಲ್ಲಿ ಸಿದ್ಧಪಡಿಸಿದ್ದ ವಿಶೇಷ ರಥದಲ್ಲಿ ಹಸನ್ಮುಖಿಯಾಗಿ ಆಸೀನರಾದರು. ಮೆರವಣಿಗೆಯುದ್ದಕ್ಕೂ ಜನಸಮೂಹದತ್ತ ಕೈಬೀಸುತ್ತಾ ಮುಗುಳ್ನಕ್ಕರು. ಪುಟ್ಟ ಮಕ್ಕಳಿಬ್ಬರು ರಥವನ್ನೇರಿ ಸಮ್ಮೇಳನಾಧ್ಯಕ್ಷರಿಗೆ ಸಾಥ್‌ ನೀಡಿದರು.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇಗುಲದಿಂದ ತಂದಿದ್ದ ದೀಪವನ್ನು ಕನ್ನಡ ರಥದಲ್ಲಿ ಮೆರವಣಿಗೆ ಮಾಡಿ, ಅದೇ ಜ್ಯೋತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಿದ್ದು ವೈಶಿಷ್ಟ್ಯಪೂರ್ಣವಾಗಿತ್ತು.

ಕನ್ನಡ ಬಾವುಟ ಹಿಡಿದ ಸ್ಥಳೀಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ನಡೆಯುವ ಮೂಲಕ 6 ಕಿ.ಮೀ. ಉದ್ದದ ಮೆರವಣಿಗೆ ಮಾರ್ಗಕ್ಕೆ ದಿಕ್ಸೂಚಿಯಾದರು. ಅವರ ಹಿಂದೆ ವೈವಿಧ್ಯಮಯ ಕಲಾತಂಡಗಳು ಮೆರವಣಿಗೆಗೆ ಕಲಾಶ್ರೀಮಂತಿಕೆ ತಂದುಕೊಟ್ಟವು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಥವನ್ನು ಭುವನೇಶ್ವರಿ ದೇವಿಯ ಕನ್ನಡ ರಥ ಹಿಂಬಾಲಿಸಿತು. ರಾಜ್ಯದ 31 ಜಿಲ್ಲೆಗಳ ಕಸಾಪ ಜಿಲ್ಲಾ ಘಟಕಗಳ ಅಧ್ಯಕ್ಷರ 12 ಸಾರೋಟುಗಳು ಮೆರವಣಿಗೆಯಲ್ಲಿ ಸಾಗಿದ್ದು ಈ ಸಮ್ಮೇಳನದ ವಿಶೇಷ.

ಧರೆಗಿಳಿದ ಗಂಧರ್ವ ಲೋಕ: ಕರಗ, ಕಂಸಾಳೆ, ಪುರವಂತಿಕೆ, ಸಮಾಳ, ಡೊಳ್ಳು ಕುಣಿತ, ಝಾಂಜ್‌ ಮೇಳ, ಖಾಸಾ ಬೇಡರ ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಹಾಲಕ್ಕಿಸುಗ್ಗಿ, ಹಗಲುವೇಷ, ಗೊರವರ ಕುಣಿತ, ಕರಡಿ ಮಜಲು, ಭಜನಾ ತಂಡ, ಕೀಲು ಕುದುರೆ, ನಂದಿಕೋಲು ಹಾಗೂ ಗಾರುಡಿ ಗೊಂಬೆ ಕಲಾವಿದರ ಪ್ರದರ್ಶನಗಳು ಗಂಧರ್ವ ಲೋಕವೇ ಧರೆಗಿಳಿದಿದೆಯೇನೋ ಎಂಬಂತೆ ನೋಡುಗರಿಗೆ ಭಾಸವಾಯಿತು.

ಕೊಂಬು ಕಹಳೆ, ಚೆಂಡೆ, ಕರಡಿ ವಾದ್ಯ, ತಮಟೆ, ಡೊಳ್ಳು, ಖಣಿ ಹಲಿಗೆಯ ಸದ್ದು ದಾರಿಯುದ್ದಕ್ಕೂ ಕನ್ನಡದ ಡಿಂಡಿಮವನ್ನು ಬಾರಿಸಿತು. ಚಿಲಿಪಿಲಿ ಗೊಂಬೆ, ಮೋಜು ಗೊಂಬೆ, ಪಟ ಕುಣಿತ, ಕರಡಿ ವೇಷ, ಮರಗಾಲು ಕುಣಿತಗಳು ಮಕ್ಕಳಿಗೆ ಮುದ ನೀಡಿದವು.

ನಾರಿಶಕ್ತಿ ಪ್ರದರ್ಶನ: ಉಡುಪಿಯ ಚೆಂಡೆ ವಾದನ, ಜೋಗತಿ ನೃತ್ಯ, ಮಹಿಳಾ ವೀರಗಾಸೆ, ಭಜನೆ, ಡೊಳ್ಳು ಕುಣಿತ, ದೇವಿ ನೃತ್ಯ, ಲಂಬಾಣಿ ನೃತ್ಯಗಳ ಮೂಲಕ ಮಹಿಳಾ ಕಲಾವಿದರು ‘ನಾರಿಶಕ್ತಿ’ ಪ್ರದರ್ಶಿಸಿದರು. ಸಮ್ಮೇಳನಾಧ್ಯಕ್ಷರ ಭಾವಚಿತ್ರವನ್ನೊಳಗೊಂಡ ಛತ್ರಿ, ಚಾಮರಗಳು ಮೆರವಣಿಗೆಗೆ ರಾಜವೈಭವದ ಕಳೆ ತಂದುಕೊಟ್ಟವು. ಮೆರವಣಿಗೆ ಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸೆಲ್ಫಿ, ವಿಡಿಯೊ ಮಾಡುತ್ತ ಸಂಭ್ರಮಿಸಿದರು. ನಿಗದಿತ ಸಮಯದಂತೆ ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ವೇದಿಕೆಯನ್ನು ಮೆರವಣಿಗೆ ತಲುಪಿತು.

ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಶಿವರಾಮ ಹೆಬ್ಬಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್‌, ಶಾಸಕ ನೆಹರು ಓಲೇಕಾರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.

ಮೆರವಣಿಗೆಯಲ್ಲಿ ಅಪಸ್ವರ

‘ಹಾವೇರಿ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ 6 ಕಿ.ಮೀ.ದೂರದ ಸಮ್ಮೇಳನದ ವೇದಿಕೆ ತಲುಪಲು 3 ಗಂಟೆ ಮೀಸಲಿಟ್ಟಿದ್ದರೂ, ತರಾತುರಿಯಲ್ಲಿ ಮೆರವಣಿಗೆಯನ್ನು ಕರೆದೊಯ್ಯುವ ಮೂಲಕ ಜನರಿಗೆ ನಿರಾಸೆ ಉಂಟು ಮಾಡಿದ್ದಾರೆ. ಕಲಾವಿದರು ಕಲಾಪ್ರದರ್ಶನ ನೀಡಲು ಅವಕಾಶ ನೀಡಲಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹೊಸಮನಿ ಸಿದ್ದಪ್ಪ ವೃತ್ತದವರೆಗೂ ಲಯಬದ್ಧವಾಗಿ ಸಾಗಿದ ಮೆರವಣಿಗೆ, ಸೂತ್ರ ಹರಿದ ಗಾಳಿಪಟದಂತೆ ಕಲಾತಂಡಗಳು ಚದುರಿ ಹೋದವು. ಮೆರವಣಿಗೆಯನ್ನು ಸಮನ್ವಯತೆಯಿಂದ ಕರೆದೊಯ್ಯಬೇಕಾದ ಸೂತ್ರದಾರರ ಕೊರತೆ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT