ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಅರಿವು ಅವಶ್ಯ: ಕೂಡಲಶ್ರೀ

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ
Published 25 ಮೇ 2024, 14:12 IST
Last Updated 25 ಮೇ 2024, 14:12 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಗ್ರಾಮೀಣ ಜೀವನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ. ಅದರಿಂದ ಭವಿಷ್ಯದ ಭದ್ರತೆ ಕಾಣಲು ಸಾಧ್ಯವಿದೆ. ಹೀಗಾಗಿ ಶಾಲಾ, ಕಾಲೇಜುಗಳ ಹಂತದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದು ಕೂಡಲದ ಗುರುಮಹೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಚಂದಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಬರಿ ಓದು, ಬರಹ ಮತ್ತು ಹೆಚ್ಚಿನ ಅಂಕ ಗಳಿಸುವುದು ಕಲಿಸುವುದರ ಜತೆಗೆ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವ ಜ್ಞಾನವನ್ನು ನೀಡುವುದು ಮುಖ್ಯವಾಗಿದೆ. ಶಾಲೆ, ಕಾಲೇಜಿನ ತರಗತಿ ಬಿಟ್ಟು ಪಠ್ಯೇತರ ಚಟುವಟಿಕೆಗಳ ಮೂಲಕ ಸಾಮಾನ್ಯ ಜ್ಞಾನ ನೀಡುವುದು ಅವಶ್ಯವಾಗಿದೆ. ಸರ್ಕಾರ ಹಮ್ಮಿಕೊಂಡ ಈ ಯೋಜನೆ ಉತ್ತಮವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಬಿರ ಏರ್ಪಡಿಸುವ ಮೂಲಕ ಅಲ್ಲಿನ ಸ್ವಚ್ಛತೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ನಿತ್ಯದ ಬದುಕಿನ ಬಗ್ಗೆ ಜ್ಞಾನ ನೀಡುವ ಮಾರ್ಗದರ್ಶಿ ಕಾಯಕ ಉತ್ತಮವಾಗಿದೆ’ ಎಂದರು.

ಪ್ರಭಂಜನ್ ಇಂಡಸ್ಟ್ರೀಸ್ ಮುಖ್ಯಸ್ಥ ರಾಘವೇಂದ್ರ ಮೇಲಗಿರಿ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸುಗಳನ್ನು ಹೊಂದಬೇಕು. ಅವುಗಳ ಈಡೇರಿಕೆಗಾಗಿ ನಿತ್ಯ ಶ್ರಮವಹಿಸಬೇಕು. ನಿಷ್ಠೆ, ಪ್ರಾಮಾಣಿಕ ಯತ್ನ ಮತ್ತು ಛಲವಿದ್ದರೆ ಕನಸು ಈಡೇರಲು ಸಾಧ್ಯವಿದೆ.  ಉದ್ಯೋಗಿಯಾಗುವುದರ ಜತೆಗೆ ಉದ್ಯಮಿಯಾಗುವ ಚಿಂತನೆ ಮಾಡಬೇಕು. ತಂದೆತಾಯಿ ಗೌರವಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.

ಪ್ರಾಚಾರ್ಯ ಪ್ರೊ.ಚಂದ್ರಾನಾಯ್ಕ ಎಂ. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್.ಯೋಜನಾಧಿಕಾರಿಗಳಾದ ನಿಂಗಪ್ಪ ಕಲಕೋಟಿ, ಮಂಜುನಾಥ ನಾಯ್ಕ, ಗ್ರಾಪಂ. ಅಧ್ಯಕ್ಷೆ ಸಾವಿತ್ರಿ ಒಂಟೆತ್ತಿನವರ, ಉಪಾಧ್ಯಕ್ಷೆ ಸುನಂದವ್ವ ಕಮ್ಮಾರ, ಪಿಡಿಒ ರಾಜಶೇಖರ ಬಿ. ರೈತ ಮುಖಂಡ ಮುತ್ತಣ್ಣ ಗುಡಿಗೇರಿ, ಪಂಚಾಕ್ಷರಯ್ಯ ಹಿರೇಮಠ, ಮಾರುತಿ ಕಲಾಲ, ಉಪನ್ಯಾಸಕರಾದ ಉಮೇಶ ಕರ್ಜಗಿ, ವಿಜಯ ಗುಡಿಗೇರಿ, ಮಹದೇವಪ್ಪ ಸಣ್ಣಬಸಪ್ಪನವರ, ಮಹೇಶ ಡಮನಾಳ ಸೇರಿದಂತೆ ಗ್ರಾ.ಪಂ. ಸದಸ್ಯರು, ಕಾಲೇಜಿನ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT