ಮಂಗಳವಾರ, ಆಗಸ್ಟ್ 16, 2022
21 °C
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರರಿಂದ ಪ್ರತಿಭಟನೆ

ಬಸ್‌ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬೆಂಗಳೂರಿನಲ್ಲಿ ಬಂಧಿಸಿರುವ ಸಾರಿಗೆ ಸಂಸ್ಥೆ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಶುಕ್ರವಾರ ನಗರದಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. 

ಕರ್ತವ್ಯಕ್ಕೆ ಬಂದಿದ್ದ ನೌಕರರು ಹಾವೇರಿ ಬಸ್‌ ನಿಲ್ದಾಣದಲ್ಲಿ ಸಮಾಗಮಾಗೊಂಡು, ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಧರಣಿ ಕುಳಿತರು. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ ಸ್ಥಳಕ್ಕೆ ಬಂದು, ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ತೆರಳಲು ಸೂಚನೆ ನೀಡಿದರೂ, ಪ್ರತಿಭಟನಾಕಾರರು ಜಗ್ಗಲಿಲ್ಲ. 

ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ವೇತನ ತಾರತಮ್ಯ ಸರಿಪಡಿಸಬೇಕು, ಹಿರಿಯ ಅಧಿಕಾರಿಗಳ ಕಿರುಕುಳವನ್ನು ತಪ್ಪಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯವನ್ನು ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. 

ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಬೆಳಿಗ್ಗೆಯಿಂದ ಸಂಜೆವರೆಗೆ ಘೋಷಣೆ ಕೂಗುತ್ತಾ ಧರಣಿ ನಡೆಸಿದರು. ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. 

ಕಂಗಾಲಾದ ಪ್ರಯಾಣಿಕರು

ವಿವಿಧ ಊರುಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಸಾರಿಗೆ ನೌಕರರ ದಿಢೀರ್‌ ಪ್ರತಿಭಟನೆಯಿಂದ ಕಂಗಾಲಾದರು. ಬಸ್‌ ಸಂಚಾರ ರದ್ದುಗೊಂಡಿದ್ದರಿಂದ ಊರು ತಲುಪಲು ಅಕ್ಷರಶಃ ಪರದಾಡಿದರು. ಹಸುಗೂಸುಗಳೊಂದಿಗೆ ಬಂದಿದ್ದ ತಾಯಂದಿರು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರು ದಿಕ್ಕು ಕಾಣದೆ ನಗರ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದರು. 

ದುಪ್ಪಟ್ಟು ದರ

ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ಸ್ಥಗಿತಗೊಂಡ ಕಾರಣ, ಟೆಂಪೋ ಟ್ರ್ಯಾಕ್ಸ್‌, ಖಾಸಗಿ ಮಿನಿ ಬಸ್‌ಗಳು ದುಪ್ಪಟ್ಟು ದರ ವಿಧಿಸಿ ಪ್ರಯಾಣಿಕರನ್ನು ಹುಬ್ಬಳ್ಳಿ, ರಾಣೆಬೆನ್ನೂರು, ಹಾನಗಲ್‌ ಕಡೆ ಕರೆದೊಯ್ದರು. ಹಾವೇರಿಯಿಂದ ಹುಬ್ಬಳ್ಳಿಗೆ ₹150, ರಾಣೆಬೆನ್ನೂರಿಗೆ ₹80 ದರ ವಿಧಿಸಿದ್ದರು. ಪ್ರಯಾಣಿಕರು ಬೇರೆ ಮಾರ್ಗವಿಲ್ಲದೆ ಕೇಳಿದಷ್ಟು ಹಣ ನೀಡಿ ಪ್ರಯಾಣಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.