ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ | ಭಾವೈಕ್ಯದ ವೀರಮಾಹೇಶ್ವರ ಜಾತ್ರೆ

Published 6 ಜನವರಿ 2024, 4:21 IST
Last Updated 6 ಜನವರಿ 2024, 4:21 IST
ಅಕ್ಷರ ಗಾತ್ರ

ರಟ್ಟೀಹಳ್ಳಿ : ತಾಲ್ಲೂಕಿನ ಗಡಿ ಭಾಗದಲ್ಲಿರುವ ಕುಡುಪಲಿ ಗ್ರಾಮದಲ್ಲಿ ಜ.6 ರಿಂದ 12ರವರೆಗೆ ಇತಿಹಾಸ ಪ್ರಸಿದ್ಧ ಹಾಗೂ ಪವಾಡ ಪುರುಷ ವೀರಮಹೇಶ್ವರ ಶಿವಯೋಗಿಗಳ ಬೃಹತ್ ಜಾತ್ರಾ ಮಹೋತ್ಸ ಹಿಂದೂ- ಮುಸ್ಲಿಮರು ಭಾವೈಕ್ಯದಿಂದ ಅದ್ಧೂರಿಯಾಗಿ ಆಚರಿಸುತ್ತಾರೆ.

ಕುಡಪಲಿ ಗ್ರಾಮವು ಶರಣರ ಸುಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದ್ದು, ಕುಮದ್ವತಿ ನದಿ ದಂಡೆಯಲ್ಲಿರುವ ಗ್ರಾಮದ ಆರಾಧ್ಯ ದೈವ. ಸುಮಾರು ವರ್ಷಗಳಿಂದ ಜಾತಿ ಭೇದವಿಲ್ಲದೆ ಅದೇ ವೈಭವವನ್ನು ಉಳಿಸಿ, ಬೆಳಸಿಕೊಂಡು ಬಂದಿದೆ.

ಜಾತ್ರೆಯ ಹಿನ್ನಲೆ

ಸುಮಾರು 150 ವರ್ಷಗಳ ಹಿಂದೆ ಕುಡುಪಲಿ ಗ್ರಾಮದ ಜನರು ದಾವಣಗೇರಿ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚಿಕ್ಕಹೊಲಿಕೆರೆ  ಗ್ರಾಮದಲ್ಲಿ ನಡೆಯುತ್ತಿದ್ದ ವೀರಮಹೇಶ್ವರ ಜಾತ್ರೆಗೆ ಹೋಗಿ ಬರುತ್ತಿದ್ದರು. ಈ ವೇಳೆ ಅಲ್ಲಿ ಜಾತ್ರೆ ಉತ್ಸವ, ಅನ್ನಸಂತರ್ಪಣೆ ಹಾಗೂ ಜಾನುವಾರುಗಳ ಜಾತ್ರೆ ನೆರವೇರುತ್ತಿತ್ತು.

ಕುಡುಪಲಿ ಗ್ರಾಮದಿಂದ ಉತ್ಸವಕ್ಕಾಗಿ ತೆರಳಿದ ಭಕ್ತರು ನಮ್ಮ ಗ್ರಾಮದಲ್ಲಿಯೂ ಶ್ರೀ ವೀರಮಹೇಶ್ವರ ಜಾತ್ರೆಯನ್ನು ಏಕೆ ಮಾಡಬಾರದು ಎಂಬ ಸಂಕಲ್ಪ ಮಾಡಿ ಅಲ್ಲಿಂದ ಒಂದು ಕಲ್ಲಿನ ಮೂರ್ತಿಯನ್ನು ತಂದು ಗ್ರಾಮದಲ್ಲಿ ಹರಿದಿರುವ ಕುಮದ್ವತಿ ನದಿ ದಂಡೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಗ್ರಾಮಕ್ಕೆ ವೀರಮಹೇಶ್ವರನ ಆಗಮನವಾಯಿತು ಎಂಬ ಪ್ರತೀತಿ ಇದೆ.

ಗ್ರಾಮದಲ್ಲಿ 6 ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನೆರವೇರುತ್ತದೆ. ಜಾತ್ರೆ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಪ್ರಸಾದದ ವಿಶೇಷ

ಪ್ರತಿ ವರ್ಷ ಭಕ್ತರಿಗೆ ದೇವರ ಹೆಸರಿನಲ್ಲಿ ಇಲ್ಲಿ ಪ್ರಸಾದ ರೂಪವಾಗಿ ಬಾಳೆಹಣ್ಣು, ಬೆಲ್ಲ, ಅನ್ನ, ಹಾಲು ವಿತರಿಸಲಾಗುತ್ತದೆ. ಈ ಪ್ರಸಾದ ಸ್ವೀಕರಿಸುವುದರಿಂದ ತೊಂದರೆ ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ ಚಿಗೌಡ್ರ.

ಉರುಸ್‌

ಜಾತ್ರೆ ಸಂದರ್ಭದಲ್ಲಿಯೇ ಮೆಹಬೂಬ್‌ ಸುಭ್ಹಾನಿ ಉರುಸ್‌ ಕೂಡಾ ನಡೆಯುತ್ತದೆ. ಈ ಸಂದರ್ಭದಲ್ಲಿ ಶರಣಬಸವೇಶ್ವರ, ದ್ಯಾಮವ್ವ ದೇವಿ, ಆಂಜನೇಯ ಸ್ವಾಮಿ ಪೂಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ.

ಜಾತ್ರಾ ಕಾರ್ಯಕ್ರಮ

ಜ.6 ರಂದು ಆಂಜನೇಯ ಸ್ವಾಮಿ ಕಂಕಣಾರೋಹಣ ಮತ್ತು ಹೂವಿನ ತೇರು 7ರಂದು ಆಂಜನೇಯ ಸ್ವಾಮಿಯ ದೊಡ್ಡ ರಥೋತ್ಸವ 8ರಂದು ಗ್ರಾಮದ ಮಠಾಧೀಶರಿಂದ ವೀರಮಹೇಶ್ವರ ಕತೃ ಗದ್ದಿಗೆಯ ರುದ್ರಾಭಿಷೇಕ. 9 ರಂದು ಗುಗ್ಗಳ ಮಹೋತ್ಸವ ಮತ್ತು ಸಂಜೆ ಧರ್ಮಸಭೆ 10ರಂದು ಬಂಡಿ ಉತ್ಸವ ಮತ್ತು ಎತ್ತುಗಳ ಮೆರವಣಿಗೆ 11ರಂದು ಪಲ್ಲಕ್ಕಿ ಉತ್ಸವ ರಾತ್ರಿ ಪ್ರಸಾದ ವಿತರಣೆ 12ರಂದು ಮೆಹಬೂಬ್‌ ಸುಭ್ಹಾನಿ ಉರುಸ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT