ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ ಲೋಕಸಭಾ ಚುನಾವಣೆ: ಗೆಲುವಿನ ಓಟ ಮುಂದುವರಿಸಿದ ಬಿಜೆಪಿ

ಬಸವರಾಜ ಬೊಮ್ಮಾಯಿಗೆ 43,513 ಮತಗಳ ಅಂತರದ ಗೆಲುವು: 20 ಸುತ್ತುಗಳಲ್ಲೂ ಮುನ್ನಡೆ
Published 5 ಜೂನ್ 2024, 6:29 IST
Last Updated 5 ಜೂನ್ 2024, 6:29 IST
ಅಕ್ಷರ ಗಾತ್ರ

ಹಾವೇರಿ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು 43,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ (ಒಟ್ಟು 20 ಸುತ್ತು) ಮುನ್ನಡೆ ಕಾಯ್ದುಕೊಂಡ ಬಸವರಾಜ ಬೊಮ್ಮಾಯಿಯವರು 7,05,538 ಮತಗಳನ್ನು ಪಡೆದು, ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ (6,62,025) ಅವರನ್ನು ಮಣಿಸಿದರು. 

ಕಣದಲ್ಲಿ 14 ಅಭ್ಯರ್ಥಿಗಳಿದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಿತು. ಅನುಭವಿ ರಾಜಕಾರಣಿ ಮತ್ತು ಯುವ ರಾಜಕಾರಣಿಯ ನಡುವಿನ ಸ್ಪರ್ಧೆಯಲ್ಲಿ ಬೊಮ್ಮಾಯಿ ಗೆಲುವಿನ ನಗೆ ಬೀರಿದ್ದಾರೆ. ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್‌ ಗ್ಯಾರಂಟಿ ನಡುವೆ ಭಾರಿ ಪೈಪೋಟಿ ನಡೆದು, ಅಂತಿಮವಾಗಿ ಮತದಾರರು ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದ್ದಾರೆ. 

ಸತತ ಗೆಲುವು: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 2009, 2014 ಮತ್ತು 2019ರಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ‘ಹ್ಯಾಟ್ರಿಕ್‌ ಗೆಲುವು‘ ಸಾಧಿಸುವ ಮೂಲಕ ಕಮಲದ ಪಾಳೆಯಕ್ಕೆ ಹಾವೇರಿ ಕ್ಷೇತ್ರ ಭದ್ರಕೋಟೆ ಎನಿಸಿತ್ತು. 2024ರ ಚುನಾವಣೆಯಲ್ಲೂ ಬೊಮ್ಮಾಯಿ ಜಯ ಗಳಿಸುವ ಮೂಲಕ ಬಿಜೆಪಿಯ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.  

ಮೋದಿ ಅಲೆ, ಪಕ್ಷ ಸಂಘಟನೆ, ಹಾವೇರಿ ಜಿಲ್ಲೆಗೆ ನೀಡಿರುವ ನೀರಾವರಿ ಯೋಜನೆಗಳು ಹಾಗೂ ಜಲಸಂಪನ್ಮೂಲ ಮತ್ತು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಈ ನಾಲ್ಕು ಅಂಶಗಳು ಬೊಮ್ಮಾಯಿಗೆ ಗೆಲುವು ತಂದುಕೊಟ್ಟಿವೆ ಎನ್ನಲಾಗುತ್ತಿದೆ. 

ರಾಜಕೀಯದಲ್ಲಿ ಅನುಭವದ ಕೊರತೆ, ಕ್ಷೇತ್ರದ ಮತದಾರರಿಗೆ ಅಪರಿಚಿತ ಮತ್ತು ಪೂರ್ಣ ಪ್ರಮಾಣದಲ್ಲಿ ಕೈಹಿಡಿಯದ ಗ್ಯಾರಂಟಿ ಯೋಜನೆಗಳು ಹಾಗೂ ಪಕ್ಷದ ಮುಖಂಡರ ಒಳೇಟು ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಸೋಲಿಗೆ ಕಾರಣವಾಗಿವೆ ಎಂದು ಮತದಾರರು ವಿಶ್ಲೇಷಿಸುತ್ತಿದ್ದಾರೆ. 

ಜಯ ತಂದುಕೊಡದ ‘ಸಂಖ್ಯಾಬಲ’

ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳು (ಹಿರೇಕೆರೂರು, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಾನಗಲ್‌) ಮತ್ತು ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು (ಗದಗ, ರೋಣ, ಶಿರಹಟ್ಟಿ) ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹಾವೇರಿ ಲೋಕಸಭಾ ಕ್ಷೇತ್ರ ಒಳಗೊಂಡಿದೆ. 7 ಕಾಂಗ್ರೆಸ್‌ ಶಾಸಕರು ಮತ್ತು ಏಕೈಕ ಬಿಜೆಪಿ ಶಾಸಕರಿದ್ದಾರೆ. 7 ಕಾಂಗ್ರೆಸ್‌ ಶಾಸಕರಿದ್ದರೂ ಆನಂದಸ್ವಾಮಿಗೆ ಗೆಲುವನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ. 

ಬಸವರಾಜ ಬೊಮ್ಮಾಯಿಗೆ ಟಿಕೆಟ್‌ ಘೋಷಣೆಯಾದ ಸಂದರ್ಭದಲ್ಲಿ ಗೆಲುವು ಸುಲಭದ ತುತ್ತು ಎಂದು ಬಿಜೆಪಿ ವಲಯದಲ್ಲಿ ಮಾತು ಕೇಳಿಬಂದಿತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ನಾಯಕರ ಅಬ್ಬರ ಪ್ರಚಾರದಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತು. 

ಮಾಜಿ ಶಾಸಕರ ಬೆಂಬಲ

ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ಪ್ರತಿ ಹಳ್ಳಿ–ಹಳ್ಳಿಯಲ್ಲೂ ಚುನಾವಣಾ ಪ್ರಚಾರ ನಡೆಸುತ್ತಾ, ಮತದಾರರ ವಿಶ್ವಾಸ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸಿದರು. ಬಿಜೆಪಿಯ ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ ಬೊಮ್ಮಾಯಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಬೆಂಬಲ ನೀಡಿದರು.

ಗದಗ ಜಿಲ್ಲೆಯ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿಯ ಶಾಸಕ ಚಂದ್ರ ಲಮಾಣಿ, ಮಾಜಿ ಶಾಸಕ ಕಳಕಪ್ಪ ಬಂಡಿ ಹಾಗೂ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಈ ಮೂವರು ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬೊಮ್ಮಾಯಿಗೆ ಗೆಲುವು ತಂದುಕೊಡಲು ನಿರಂತರವಾಗಿ ಶ್ರಮಿಸಿದರು. ಬಿಜೆಪಿ ಮುಖಂಡರ ಸಂಘಟಿತ ಪ್ರಚಾರದಿಂದ ಕ್ಷೇತ್ರದಲ್ಲಿ ಕಮಲ ಅರಳಲು ಕಾರಣವಾಯಿತು ಎಂದು ಕಾರ್ಯಕರ್ತರು ಅನಿಸಿಕೆ ವ್ಯಕ್ತಪಡಿಸಿದರು. 

ಬೊಮ್ಮಾಯಿಗೆ ಕೇಂದ್ರ ಸಚಿವ ಸ್ಥಾನ?

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಲೋಕಸಭಾ ಚುನಾವಣೆಯಲ್ಲಿ ಗೆದ್ದು ನನ್ನ ತಂಡ ಸೇರುವಂತೆ ಶುಭ ಕೋರಿದ್ದರು. ಇದು ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚಿನ ಹುರುಪು ತಂದುಕೊಟ್ಟಿತ್ತು.  ತಂದೆ ಎಸ್‌.ಆರ್‌.ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಕೇಂದ್ರ ರಾಜಕಾರಣಕ್ಕೆ ತೆರಳಿದ್ದರು. ಅಪ್ಪನ ಹಾದಿಯಲ್ಲೇ ಮಗ ಬಸವರಾಜ ಬೊಮ್ಮಾಯಿ ಕೂಡ ಸಿಎಂ ಹುದ್ದೆಗೇರಿದ ನಂತರ ಕೇಂದ್ರ ರಾಜಕಾರಣಕ್ಕೆ ಹೋಗುತ್ತಿದ್ದು ಕೇಂದ್ರ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮುಖಂಡರು ಆಶಾಭಾವ ವ್ಯಕ್ತಪಡಿಸಿದ್ದಾರೆ.

‘ಆನಂದ’ ತಂದುಕೊಡದ ಗ್ಯಾರಂಟಿ

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳೇ ಗೆಲುವಿನ ದಡ ಮುಟ್ಟಿಸುತ್ತವೆ ಎಂದು ಬಲವಾಗಿ ನಂಬಿದ್ದ ಆನಂದಸ್ವಾಮಿ ಗಡ್ಡದೇವರಮಠ ಅವರ ನಂಬಿಕೆ ಮತ್ತು ಕಾಂಗ್ರೆಸ್‌ ನಾಯಕರ ಮಹತ್ವಾಕಾಂಕ್ಷೆ ಹುಸಿಯಾಗಿದೆ.  ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ರಾಜ್ಯದಲ್ಲಿ ಎದುರಿಸಿದ ಮೊದಲ ಚುನಾವಣೆ ಇದಾಗಿತ್ತು. ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು ‘ಕೈ’ ಹಿಡಿದರೆ ಕಾಂಗ್ರೆಸ್‌ಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ನಿರೀಕ್ಷೆ ಹುಸಿಯಾಗಿದೆ. 

ಕುಗ್ಗಿದ ಗೆಲುವಿನ ಅಂತರ!

2009 2014 ಮತ್ತು 2019ರ ಮೂರು ಲೋಕಸಭಾ ಚುನಾವಣೆಗಳಲ್ಲೂ ‘ಹ್ಯಾಟ್ರಿಕ್‌ ಗೆಲುವು‘ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಗೆಲುವಿನ ಅಂತರ ಚುನಾವಣೆಯಿಂದ ಚುನಾವಣೆಗೆ ಹೆಚ್ಚಳವಾಗಿತ್ತು.  2009ರಲ್ಲಿ 87920 2014ರಲ್ಲಿ 87571 ಹಾಗೂ 2019ರಲ್ಲಿ ಬರೋಬ್ಬರಿ 140882 ಮತಗಳ ಅಂತರದಿಂದ ಶಿವಕುಮಾರ ಉದಾಸಿ ಜಯಭೇರಿ ಬಾರಿಸಿದ್ದರು. ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಬಿಜೆಪಿ ಮುಖಂಡರು ಬೀಗಿದ್ದರು. ಆದರೆ ಈ ಬಾರಿ ಕೇವಲ 43513 ಮತಗಳ ಅಂತರದಿಂದ ಬೊಮ್ಮಾಯಿ ಸರಳ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳೇ ಗೆಲುವಿನ ಅಂತರವನ್ನು ಕಡಿಮೆ ಮಾಡಿವೆ ಎಂದು ಕ್ಷೇತ್ರದ ಜನರು ವಿಶ್ಲೇಷಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT