ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಸನಕಟ್ಟೆ ಕೆರೆ ಜಾಲಿ ಮರಗಳ ಕಟಾವು: ಪಕ್ಷಿಧಾಮದಲ್ಲಿ ಹಕ್ಕಿಗಳ ಚಿಲಿಪಿಲಿ ಕಣ್ಮರೆ

ಆಶ್ರಯ ಕಳೆದುಕೊಂಡ ವಲಸೆ ಪಕ್ಷಿಗಳು
Last Updated 16 ಸೆಪ್ಟೆಂಬರ್ 2021, 21:00 IST
ಅಕ್ಷರ ಗಾತ್ರ

ದೂಪದಹಳ್ಳಿ (ಹಂಸಭಾವಿ):ಮುಂಗಾರು ಪ್ರಾರಂಭವಾಗಿ ಜುಲೈ ತಿಂಗಳ ಹೊತ್ತಿಗೆ ಅಲ್ಲಿ ಸಾವಿರಾರು ವಲಸೆ ಹಕ್ಕಿಗಳ ಚಿಲಿಪಿಲಿ ಸದ್ದು ಹಾಗೂ ಪಕ್ಷಿಪ್ರಿಯರ ದಂಡು ಕಂಡು ಬರುತ್ತಿತ್ತು. ಆದರೆ, ಈ ಬಾರಿ ಅಲ್ಲಿ ಪಕ್ಷಿಗಳು ಕಣ್ಮರೆಯಾಗಿ ನೀರವ ಮೌನ ಆವರಿಸಿದೆ.

ಹಿರೇಕೆರೂರು ತಾಲ್ಲೂಕಿನ ದೂಪದಹಳ್ಳಿಯ ಅಗಸನಕಟ್ಟೆ ಕೆರೆಯ ಕರುಣಾಜನಕ ಕತೆ ಇದು.ಹಾವೇರಿ ಸಮೀಪದ ಹೆಗ್ಗೇರಿ ಕೆರೆ, ಗುತ್ತಲ ಸಮೀಪದ ದೊಡ್ಡಕೆರೆ, ಅಕ್ಕಿಆಲೂರಿನ ಈಶ್ವರ ಕೆರೆಯಂತೆಯೇ ದೂಪದಹಳ್ಳಿಯ ಅಗಸನಕಟ್ಟೆ ಕೆರೆಗೂ ಸಾವಿರಾರು ವಲಸೆ ಪಕ್ಷಿಗಳು ಬರುತ್ತಿದ್ದವು. ನೂರಾರು ಕಿ.ಮೀ. ದೂರದಿಂದ ಬಂದು ತಮ್ಮ ಸಂತಾನ ವೃದ್ಧಿಸಿಕೊಂಡು ಹೋಗುವ ಪ್ರಕ್ರಿಯೆ 2009ರಿಂದಲೂ ನಿರಂತರವಾಗಿ ನಡೆಯುತ್ತಿತ್ತು.

ಮರಗಳಿಗೆ ಕೊಡಲಿ ಪೆಟ್ಟು:

ಈ ಕೆರೆಯ ಇನ್ನೊಂದು ಬದಿಯ ದಡವು ಯತ್ತಿನಹಳ್ಳಿಯ ಗಡಿಗೆ ಸೇರಿದ್ದು, ಅಲ್ಲಿನ ರೈತರು ಕೆರೆಯನ್ನು ಒತ್ತುವರಿ ಮಾಡಿದ್ದಲ್ಲದೇ ಪಕ್ಷಿಗಳಿಗೆ ಆಶ್ರಯವಾಗಿದ್ದ ಜಾಲಿಯ ಮರಗಳನ್ನು ಕಳೆದ ಬೇಸಿಗೆಯಲ್ಲಿ ತೆರವುಗೊಳಿಸಿದ್ದಾರೆ. ಹೀಗಾಗಿ ಈ ಮಳೆಗಾಲದಲ್ಲಿ ಕೆರೆ ನೀರಿನಿಂದ ಭರ್ತಿಯಾಗಿದ್ದರೂ ಜಾಲಿ ಮರಗಳಿಲ್ಲದ ಕಾರಣ ಪಕ್ಷಿಗಳು ವಲಸೆ ಬಂದಿಲ್ಲ ಎಂದು ಗ್ರಾಮದ ಯುವಕ ವಿಜಯ್ ದಾನಮ್ಮನವರ ಬೇಸರ ವ್ಯಕ್ತಪಡಿಸಿದರು.

ಈ ವಲಸೆ ಪಕ್ಷಿಗಳು ಜುಲೈ ತಿಂಗಳಿಗೆ ಆಗಮಿಸಿ ಕೆರೆಯಲ್ಲಿ ನೀರು ಖಾಲಿಯಾಗುವ ಹೊತ್ತಿಗೆ (ಫೆಬ್ರುವರಿ) ಮತ್ತೆ ಬೇರೆಡೆ ವಲಸೆ ಹೋಗುತ್ತಿದ್ದ ಪ್ರಕ್ರಿಯೆ ಪ್ರತಿ ವರ್ಷವೂ ನಡೆದಿತ್ತು. ಇದನ್ನು ಶಾಶ್ವತ ಪಕ್ಷಿಧಾಮವನ್ನಾಗಿ ಮಾಡಿ ಇದನ್ನು ಪ್ರವಾಸಿತಾಣವನ್ನಾಗಿ ಮಾಡಬೇಕೆನ್ನುವ ಹೆಬ್ಬಯಕೆ ಪಕ್ಷಿಪ್ರಿಯರಲ್ಲಿ ಒಡಮೂಡಿತ್ತು.

ಹೀಗಾಗಿ ಈ ಕೆರೆಯನ್ನು 2020ರಲ್ಲಿ ಜಲಾಮೃತ ನರೇಗಾ ಯೋಜನೆಯಡಿಯಲ್ಲಿ ಹೂಳೆತ್ತಲಾಗಿತ್ತು. ಅಲ್ಲದೇ ತಾಲ್ಲೂಕಿನ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ 'ಮಡ್ಲೂರ ಏತ ನೀರಾವರಿ' ಯೋಜನೆಯಿಂದ ಈ ಕೆರೆಗೆ ನೀರು ತುಂಬಿಸಿ ವರ್ಷವಿಡೀ ನೀರು ನಿಲ್ಲುವಂತೆ ಮಾಡಿ ಪಕ್ಷಿಗಳು ಬೇರೆಡೆ ವಲಸೆ ಹೋಗದಂತೆ ಮಾಡುವ ತಯಾರಿ ನಡೆದಿತ್ತು. ಆದರೆ ಈಗ ಪಕ್ಷಿಗಳು ನೆಲೆ ಕಳೆದುಕೊಂಡಿರುವುದು ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸಿದೆ ಎಂದು ಗ್ರಾಮದ ಶಿಕ್ಷಕ ನಾಗಪ್ಪ ಹೆಗ್ಗೇರಿ 'ಪ್ರಜಾವಾಣಿ'ಗೆ ತಿಳಿಸಿದರು.

ದೇಶಿ-ವಿದೇಶಿ ಹಕ್ಕಿಗಳ ಕಲರವ:

ಈ ಕೆರೆಯಲ್ಲಿ ದೇಸಿ ಹಕ್ಕಿಗಳಾದ ಬಾತುಕೋಳಿ, ಬೆಳ್ಳಕ್ಕಿ, ಹೆಬ್ಬಾತು, ಗಿಡುಗ, ಕೊಕ್ಕರೆ, ಕೃಷ್ಣವಾಹನ, ಚಿಟಗುಬ್ಬಿ, ಗುಣಮಣಕ, ನೀರುಕಾಗೆ, ಕಾಮನ್ ಮೈನಾ, ಕುಂಡೆಕುಸುಕ, ನೀರುಕೋಳಿ, ಕಾಜಾಣ, ಜೇನು ಹಿಡುಕ, ನೀಲಕಂಠ, ಕಿಂಗ್‌ ಫಿಶರ್ ಹಾಗೂ ವಿದೇಶಿ ಹಕ್ಕಿಗಳಾದ ಡ್ವಾರ್ಪ್‌ ಕ್ಯಾಸನೋರಿ, ಕ್ರೈಸೆಡ್ ಗಾನ್, ಕ್ಯಾಲಿಪೋರ್ನಿಯಾ ಬುರ್ಲಿ, ಆಸ್ಟ್ರಿಚ್ ಸಿಪಾಯಿ, ಹಮ್ಮಿಂಗ್ ಬರ್ಡ್, ಒಂಟಿಕಾಲಿನ ಕೊಕ್ಕರೆ ಸೇರಿದಂತೆ ಇನ್ನೂ ಅನೇಕ ಜಾತಿಯ ಹಕ್ಕಿಗಳು ಇಲ್ಲಿ ಸಂತಾನೋತ್ಪತ್ತಿಗಾಗಿ ಬರುತ್ತಿದ್ದವು.

ಅಗಸನಕಟ್ಟೆ ಕೆರೆಯನ್ನು ಕೂಡಲೇ ಸರ್ವೆ ಮಾಡಿಸಿ, ಒತ್ತುವರಿ ತೆರವುಗೊಳಿಸಬೇಕು. ಪಕ್ಷಿಧಾಮ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಈ ಕೆರೆಯಲ್ಲಿ ಪಕ್ಷಿಗಳ ಕಲರವ ಮತ್ತೆ ಕೇಳಿಬರಲಿ ಎಂಬ ಉದ್ದೇಶದಿಂದ 200 ಜಾಲಿ ಸಸಿಗಳನ್ನು ನರೇಗಾ ಯೋಜನೆಯಡಿ ಒದಗಿಸಲಾಗುವುದು
- ಹೇಮಗಿರಿ ಅಣಜಿ, ತಾಲ್ಲೂಕು ವಲಯ ಅರಣ್ಯಾಧಿಕಾರಿ

ದೂಪದಹಳ್ಳಿಯ ಅಗಸನಕಟ್ಟೆ ಕೆರೆಯ ಅಭಿವೃದ್ದಿಗೆ ಅಗತ್ಯವಾದ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳುತ್ತೇವೆ
- ಶಹನಾಬಿ ಕಲಕೋಟಿ. ಗ್ರಾ.ಪಂ. ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT