ನರೇಗಾ ಅನುದಾನ ಬಳಕೆ; ಸಾವಸಗಿ ಗ್ರಾ.ಪಂ ಸಾಧನೆ

7

ನರೇಗಾ ಅನುದಾನ ಬಳಕೆ; ಸಾವಸಗಿ ಗ್ರಾ.ಪಂ ಸಾಧನೆ

Published:
Updated:
Deccan Herald

ಹಾನಗಲ್: ನರೇಗಾ ಯೋಜನೆ ಅಡಿ ₹ 26 ಲಕ್ಷದ ಮೊತ್ತದಲ್ಲಿ ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ತಾಲ್ಲೂಕಿನ ಸಾವಸಗಿ ಗ್ರಾಮ ಪಂಚಾಯ್ತಿ ಸಾಧನೆ ಮಾಡಿದೆ.

ಶಾಲಾ ಕಂಪೌಂಡ್‌, ಗೇಟ್‌ ನಿರ್ಮಾಣ, ರೈತ ಸಂಪರ್ಕದ ರಸ್ತೆಗಳ ಸುಧಾರಣೆ, ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ 6 ಕೆರೆಗಳ ಹೂಳು ತೆಗೆಯಲಾಗಿದೆ. ಕೆರೆಗಳ ಹೂಳೆತ್ತುವ ಕಾರ್ಯಕ್ಕಾಗಿ ಸ್ಥಳೀಯರಿಗೆ ಸುಮಾರು ₹ 15 ಲಕ್ಷದ ಕೂಲಿ ಪಾವತಿ ಮಾಡಲಾಗಿದೆ.

ಸಾವಸಗಿ ಗ್ರಾಮದಲ್ಲಿ ಬಳಗೇರಿ ಕೆರೆಯನ್ನು ₹ 3.74 ಲಕ್ಷದಲ್ಲಿ, ಡೊಳ್ಳಿನಕಟ್ಟಿ ಕೆರೆಯನ್ನು ₹ 3.25 ಲಕ್ಷದಲ್ಲಿ, ಉಳ್ಳಿಕೆರೆಯನ್ನು ₹ 4.46 ಲಕ್ಷದಲ್ಲಿ, ಯಲ್ಲಮ್ಮನ ಕೆರೆಯನ್ನು ₹ 4.37 ಲಕ್ಷದಲ್ಲಿ ಹೂಳು ತೆಗೆಯಲಾಗಿದೆ. ಇನ್ನೆರಡು ಕೆರೆಗಳ ಅಭಿವೃದ್ಧಿ ಕಾರ್ಯವು ಪ್ರಗತಿಯಲ್ಲಿದೆ.

ಇದರಿಂದ ಗ್ರಾಮದ ಜೀವಜಲ ಎನ್ನಿಸಿಕೊಂಡ ಕೆರೆಗಳಲ್ಲಿ ನೀರು ಸಂಗ್ರಹಣೆ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ಸಾರ್ಥಕತೆಯನ್ನು ಸಾವಸಗಿ ಗ್ರಾಮ ಪಂಚಾಯ್ತಿ ಹೊಂದಿದೆ, ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ‘ನಮ್ಮ ಹೊಲ–ನಮ್ಮ ದಾರಿ’ ಯೋಜನೆಯಡಿ ರೈತ ಸಂಪರ್ಕದ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ. ಹದಗೆಟ್ಟಿದ್ದ ಈ ರಸ್ತೆಯನ್ನು ₹98 ಸಾವಿರದಲ್ಲಿ ಸುಧಾರಣೆ ಮಾಡಲಾಗಿದೆ. ಇದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ₹ 4 ಲಕ್ಷದಲ್ಲಿ ಕಂಪೌಂಡ್‌ ನಿರ್ಮಿಸಲಾಗಿದೆ, ‘ಈ ಎಲ್ಲ ಕಾಮಗಾರಿಗಳನ್ನು ಕಳೆದ 6 ತಿಂಗಳ ಅವಧಿಯಲ್ಲಿ ಮಾಡಲಾಗಿದೆ, ಗ್ರಾಮೀಣಾಭಿವೃದ್ಧಿಗೆ ಎನ್‌ಆರ್‌ಇಜಿ ಅನುದಾನವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರ ಸಹಕಾರ ಈ ಸಾಧನೆಗೆ ಕಾರಣ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಲೇಹಾಬಾನು ನಜೀರ್‌ಅಹ್ಮದ್‌ ಮುಲ್ಲಾ ‘ಪ್ರಜಾವಾಣಿ’ಗೆ ಹೇಳಿದರು.

ಶಾಸಕ ಉದಾಸಿ ವೀಕ್ಷಣೆ: ಸಾವಸಗಿ ಗ್ರಾಮದಲ್ಲಿನ ಎನ್‌ಆರ್‌ಇಜಿ ಕಾಮಗಾರಿಗಳನ್ನು ಶುಕ್ರವಾರ ಶಾಸಕ ಸಿ,ಎಂ.ಉದಾಸಿ ಪರಿಶೀಲಿಸಿದರು. ರೈತ ಸಂಪರ್ಕದ ರಸ್ತೆಯ ಕಾಮಗಾರಿಯ ಗುಣಮಟ್ಟವನ್ನು ಮೆಚ್ಚಿಕೊಂಡರು.

‘ಎನ್‌ಆರ್‌ಇಜಿ ಅಡಿಯಲ್ಲಿ ಮೂಲ ಸೌಲಭ್ಯಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಈಗ ಉತ್ತಮ ಅವಕಾಶ ಒದಗಿದೆ. ಶೇ80 ಸಾಮಗ್ರಿ, ಯಂತ್ರ ಬಳಕೆ, ಶೇ20 ರಷ್ಟು ಮಾನವ ಶಕ್ತಿ ಉಪಯೋಗದ ಕ್ರಿಯಾ ಯೋಜನೆಯು ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳಿಗೆ ವೇಗ ನೀಡಲು ಸಹಕಾರ ಆಗಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಬೂದಿಹಾಳ, ತಾ.ಪಂ ಇಓ ಶಶಿಧರ.ಎಂ.ಜಿ, ಎನ್‌ಆರ್‌ಇಜಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಅಭಿವೃದ್ಧಿ ಅಧಿಕಾರಿ ಎಫ್‌.ವಿ.ಸಾತನಹಳ್ಳಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !