ಗುರುವಾರ , ಮಾರ್ಚ್ 23, 2023
28 °C
ಸೆ.15ರಿಂದ 28ರವರೆಗೆ ‘ಕಂದಾಯ ಅದಾಲತ್‌’: ನ್ಯಾಯಾಧೀಶರಾದ ಯಾದವ ವನಮಾಲಾ ಮಾಹಿತಿ

ಸೆ.30ರಂದು ಮೆಗಾ ಲೋಕ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆ.30ರಂದು ‘ಮೆಗಾ ಲೋಕ ಅದಾಲತ್’ ಹಾಗೂ ಎಲ್ಲ ತಾಲ್ಲೂಕುಗಳಲ್ಲಿ ‘ಕಂದಾಯ ಅದಾಲತ್‍’ ಅನ್ನು ಸೆ.15ರಿಂದ ಸೆ.28ರವರೆಗೆ ಆಯೋಜಿಸಲಾಗಿದೆ. ಇತ್ಯರ್ಥಕ್ಕೆ ಬಾಕಿ ಇರುವ ರಾಜಿಯಾಗಬಹುದಾದ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಯಾದವ ವನಮಾಲಾ ಆನಂದರಾವ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮೆಗಾ ಲೋಕ ಅದಾಲತ್‍ನಲ್ಲಿ ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಹಕ್ಕೊತ್ತಾಯಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು (ರಾಜಿಯಾಗದ ಪ್ರಕರಣಗಳನ್ನು ಹೊರತುಪಡಿಸಿ) ಮುಂತಾದ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. 

ವೈವಾಹಿಕ/ ಕುಟುಂಬ ನ್ಯಾಯಾಲಯಗಳ ಪ್ರಕರಣಗಳು, ಭೂ-ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು (ಜಿಲ್ಲಾ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರ), ಸಿವಿಲ್ ಪ್ರಕರಣಗಳು (ಬಾಡಿಗೆ ಅನುಭೋಗದ ಹಕ್ಕುಗಳು, ನಿರ್ಬಂದಾಜ್ಞೆ ಮೊಕದ್ದಮೆಗಳು) ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಾದ ಕಂದಾಯ ಇಲಾಖೆ, ಪುರಸಭೆ, ಪಂಚಾಯಿತಿ, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳು, ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಜೀವನಾಂಶ ಪ್ರಕರಣಗಳನ್ನು ಒಳಗೊಂಡಂತೆ ಕಾನೂನು ಬದ್ಧವಾಗಿ ರಾಜಿ ಸಂಧಾನವಾಗಲು ಅವಕಾಶವಿರುವ ಎಲ್ಲಾ ಪ್ರಕರಣಗಳನ್ನು ಮೆಗಾ ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. 

ಮೇಲ್ಮನವಿಗೆ ಅವಕಾಶವಿಲ್ಲ:

ಪ್ರತಿಯೊಂದು ಲೋಕ ಅದಾಲತ್‍ಗೆ ಪ್ರತ್ಯೇಕವಾಗಿ ಒಬ್ಬರು ನ್ಯಾಯಾಧೀಶರು ಹಾಗೂ ನುರಿತ ನ್ಯಾಯವಾದಿಗಳು ಸಂಧಾನಕಾರರಾಗಿ ಕಾರ್ಯನಿರ್ವಹಿಸುತ್ತಾರೆ. ಲೋಕ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ, ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಇಲ್ಲಿ ಎರಡೂ ಕಡೆಯ ಪಕ್ಷಗಾರರು ತಮ್ಮ ವ್ಯಾಜ್ಯಗಳಿಗೆ ಸೌಹಾರ್ದಯುತವಾಗಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ಅವರ ಅಮ್ಯೂಲವಾದ ಸಮಯ, ಶ್ರಮ ಹಾಗೂ ಹಣದ ಉಳಿತಾಯವಾಗುತ್ತದೆ. ಅಲ್ಲದೇ ಉಭಯ ಪಕ್ಷಗಾರರೇ ಜಯಶಾಲಿಗಳು, ಉಭಯೇತರರಿಗೆ ಸಮ್ಮತ ತೀರ್ಪು ದೊರೆಯುವುದು ಎಂದು ತಿಳಿಸಿದರು. 

ನ್ಯಾಯಾಲಯಕ್ಕೆ ಸಲ್ಲಿಸಿದ್ದ ನ್ಯಾಯಾಲಯದ ಶುಲ್ಕವು ಸಹ ನಿಯಮಾನುಸಾರ ಮರುಪಾವತಿಗೊಳ್ಳುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಮೆಗಾ ಲೋಕ ಅದಾಲತ್‍ನ ಸದುಪಯೋಗವನ್ನು ಪಕ್ಷಗಾರರು ಪಡೆದುಕೊಳ್ಳಬೇಕು ಎಂದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ. ನೀಲರಗಿ, ಉಪಾಧ್ಯಕ್ಷ ವಿ.ವಿ. ಸಪ್ಪಣ್ಣನವರ, ಕಾರ್ಯದರ್ಶಿ ಐ.ಎಸ್. ನಂದಿ, ಸಹ ಕಾರ್ಯದರ್ಶಿ ಎಸ್.ಬಿ. ಸವೂರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಿ.ಆರ್.ಕಿತ್ತೂರಮಠ, ಪಿ.ಜಿ.ಪಾಟೀಲ, ಎ.ಸಿ.ಭರಮಣ್ಣನವರ, ಎ.ಡಿ ಹೊಸಮನಿ, ಅಶ್ವಿನಿ ಕೇಲ್ಕರ ಹಾಗೂ ಎಂ.ಎಂ ಬ್ಯಾಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು