ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿ ಮರೆಯಾದ ‘ಹಾನಗಲ್‌ ಅಣ್ಣಾವ್ರು’ ಸಿ.ಎಂ ಉದಾಸಿ

ಜಿಲ್ಲೆಯಲ್ಲಿ ನೀರವ ಮೌನ: ಅಭಿಮಾನಿಗಳ ಪಾಲಿನ ಕಾಯಂ ಸಿ.ಎಂ.
Last Updated 8 ಜೂನ್ 2021, 16:42 IST
ಅಕ್ಷರ ಗಾತ್ರ

ಹಾನಗಲ್ (ಹಾವೇರಿ): ‘ಅಭಿವೃದ್ಧಿಯ ಹರಿಕಾರ’ ಎಂದೇ ಖ್ಯಾತಿ ಗಳಿಸಿದ್ದ ಹಾನಗಲ್‌ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ. ಉದಾಸಿ (85) ಅವರು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರು ಎಳೆದರು.

ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಅವರಿಗೆ ಎರಡು ವರ್ಷಗಳಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಈ ಹಿಂದೆ ಎರಡು ಬಾರಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿದ್ದರು. ಈಗ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಮ್ಮ ನೆಚ್ಚಿನ ಶಾಸಕರು ಈ ಬಾರಿಯೂ ಗುಣಮುಖರಾಗಿ ಕ್ಷೇತ್ರಕ್ಕೆ ಮರಳುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಸಜ್ಜನಿಕೆಯರಾಜಕಾರಣಿಯಾಗಿದ್ದ ಉದಾಸಿ ಅವರು ಮೌಲ್ಯಾಧಾರಿತ ಹೋರಾಟಗಳ ಮೂಲಕ ರಾಜಕಾರಣದಲ್ಲಿ ವ್ಯಕ್ತಿತ್ವ ರೂಪಿಸಿಕೊಂಡವರು. ಕ್ಷೇತ್ರದ ಜನರ ಮನದಲ್ಲಿ ‘ಅಣ್ಣಾವ್ರು’ ಎಂದೇ ಜನಜನಿತರಾದವರು.

ಹೆಸರಲ್ಲೇ ಸಿ.ಎಂ. ಇದೆ: ಸಿ.ಎಂ. ಉದಾಸಿ ಕೆಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ‘ಅರ್ಹ ನಾಯಕ’ ಎಂದು ಬಿಂಬಿತರಾಗಿದ್ದರು. ನೀವು ಒಮ್ಮೆ ಸಿ.ಎಂ ಆಗಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದಾಗ, ‘ನನ್ನ ಹೆಸರಲ್ಲೇ ಸಿ.ಎಂ ಇದೆ. ನಾನು ಹುಟ್ಟಾ ಸಿ.ಎಂ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದಿಲ್ಲ’ ಎಂದು ಉದಾಸಿ ಹೇಳುತ್ತಿದ್ದರು.

ವ್ಯಾಪಾರದಿಂದ ರಾಜಕೀಯಕ್ಕೆ: ಬಡತನದ ಕಾರಣ ಪ್ರೌಢಶಾಲೆಗೆ ಓದು ನಿಲ್ಲಿಸಿ, ವ್ಯಾಪಾರದಲ್ಲಿ ತೊಡಗಿಕೊಂಡರು. ಕುಶಲಮತಿಯಾಗಿದ್ದ ಸಿ.ಎಂ. ಉದಾಸಿ ಭತ್ತದ ವ್ಯಾಪಾರದಲ್ಲಿ ಬಹುಬೇಗ ಹೆಸರು ಮಾಡಿದರು. ನಂತರ ಮುಂದೆ 1976ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ವಿಜೇತರಾಗಿ ಹಾನಗಲ್‌ ಪುರಸಭೆ ಅಧ್ಯಕ್ಷರಾದರು.

‘ಆನೆ’ ನಡೆದದ್ದೇ ಹಾದಿ: 1983ರಲ್ಲಿ ‘ಆನೆ’ ಚಿನ್ಹೆ ಅಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದ ಸಿ.ಎಂ ಉದಾಸಿ ಅವರಿಗೆ ಗೆಲುವು ಸುಲಭವಿರಲಿಲ್ಲ. ಪ್ರತಿಸ್ಪರ್ಧಿ ಅಂದಿನ ಹಾಲಿ ಶಾಸಕ ಮನೋಹರ ತಹಸೀಲ್ದಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ ಪ್ರಚಾರಕ್ಕಾಗಿ ಖುದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾನಗಲ್‌ಗೆ ಬಂದಿದ್ದರು. ಎಲ್ಲ ಅಡೆತಡೆಗಳನ್ನೂ ಮೀರಿ ಸಿ.ಎಂ.ಉದಾಸಿ ಗೆಲುವಿನ ನಗೆ ಬೀರಿದ್ದರು.

ಜೆ.ಎಚ್‌.ಪಟೇಲರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗುವ ಭಾಗ್ಯ ಕೂಡಿ ಬಂದಿತ್ತು. ಆ ವೇಳೆ ಅಖಂಡ ಧಾರವಾಡ ಜಿಲ್ಲೆಯಿಂದ ಉದಯಿಸಿದ ನೂತನ ಹಾವೇರಿ ಜಿಲ್ಲೆಯ ಪ್ರಥಮ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಆಡಳಿತ ನೀಡಿದರು. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಜವಳಿ, ಸಣ್ಣ ನೀರಾವರಿ ಸಚಿವರಾಗಿ ಕೆಲಸ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದರು.

ಕ್ಷೇತ್ರದಲ್ಲಿ ನೀರವ ಮೌನ: ಅರ್ಧ ಶತಮಾನಕ್ಕೂ ಅಧಿಕ ಕಾಲ ಹಾನಗಲ್‌ ಕ್ಷೇತ್ರದಲ್ಲಿ ನಿರಂತರವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಶಾಸಕ ಸಿ.ಎಂ. ಉದಾಸಿ ಅವರಿಗೆ ಅಪಾರ ಬೆಂಬಲಿಗರು, ಅಭಿಮಾನಿಗಳಿದ್ದಾರೆ. ನಿಧನದ ಸುದ್ದಿ ತಿಳಿದ ಕ್ಷೇತ್ರದ ಜನತೆ ಕಂಬನಿ ಮಿಡಿದಿದ್ದಾರೆ. ಇಲ್ಲಿನ ಗೌಳಿಗಲ್ಲಿಯ ಶಾಸಕರ ಮನೆಗೆ ಅಭಿಮಾನಿಗಳ ದಂಡು ಹರಿದು ಬಂದಿತ್ತು. ಮನೆಯ ಸದಸ್ಯರಿಗೆ ಸಾಂತ್ವನ ಹೇಳಿದರು.

ಜೂನ್‌ 9ರಂದು ಸಂಜೆ 4ಗಂಟೆಗೆ ಹಾನಗಲ್‌ ಪಟ್ಟಣದ ಕುಮಾರೇಶ್ವರ ವಿರಕ್ತಮಠದ ಹಿಂಭಾಗದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮತ್ತು ಕೋವಿಡ್‌ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

9 ಬಾರಿ ಸ್ಪರ್ಧೆ, 6 ಬಾರಿ ಗೆಲುವು: 1983ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಬಾರಿಗೆ ಶಾಸಕರಾದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು.

1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಬಾರಿಗೆ ಶಾಸಕರಾದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರೂ 1994ರ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡು ಜನತಾದಳದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದರು.

1999ರ ಚುನಾವಣೆಯಲ್ಲಿ ಸೋಲುಂಡ ಅವರು, ನಂತರ ಬಿಜೆಪಿಗೆ ಸೇರ್ಪಡೆಗೊಂಡು 2004ರ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡರು. 2008ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ, ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2013ರಲ್ಲಿ ಸೋಲನ್ನು ಅನುಭವಿಸಿದ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡು ಪ್ರಸ್ತುತ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

‘ಹಸನಾದ ರಸ್ತೆ, ಹಸಿರಾದ ಹೊಲ’
ಸಿ.ಎಂ. ಉದಾಸಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರೈತರಿಗೆ ಅಗತ್ಯವಿದ್ದ ನೀರಾವರಿ, ವಿದ್ಯುತ್‌ ವ್ಯವಸ್ಥೆ ಒದಗಿಸಿಕೊಟ್ಟಿದ್ದಾರೆ.

ವರದಾ ನದಿಗೆ ಸುಮಾರು 7 ಏತ ನೀರಾವರಿ ಯೋಜನೆಗಳು ಸ್ಥಾಪನೆಗೊಂಡಿವೆ. ಸಾಕಷ್ಟು ಬ್ಯಾರೇಜ್‌, ಚೆಕ್‌ಡ್ಯಾಂ ನಿರ್ಮಾಣಗೊಂಡಿವೆ. ಇವರ ಕನಸಿನ ಯೋಜನೆಯಾಗಿದ್ದ ₹500 ಕೋಟಿ ವೆಚ್ಚದ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆ ಈಗ ನಿರ್ಮಾಣ ಹಂತದಲ್ಲಿದೆ. ಇದೇ ರೀತಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ವಿತರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿಯೇ ಅಧಿಕ ವಿದ್ಯುತ್‌ ವಿತರಣಾ ಕೇಂದ್ರಗಳನ್ನು ಹಾನಗಲ್‌ನಲ್ಲಿ ನಿರ್ಮಾಣ ಮಾಡಲು ಕಾರಣಕರ್ತರಾದರು.

ಸಿ.ಎಂ. ಉದಾಸಿ ಅವರು ಹೆಚ್ಚು ಬಾರಿಗೆ ‘ಲೋಕೋಪಯೋಗಿ ಸಚಿವ’ರಾಗಿ ಕೆಲಸ ಮಾಡಿದವರು. ಇವರ ಆಡಳಿತ ಅವಧಿಯಲ್ಲಿ ಹಾನಗಲ್‌ ತಾಲ್ಲೂಕಿನ ರಸ್ತೆಗಳು ಸುಧಾರಣೆಗೊಂಡವು. ತಡಸ–ಶಿಕಾರಿಪುರ ಹೆದ್ದಾರಿ ಹಾನಗಲ್‌ ಮಾರ್ಗವಾಗಿ ನಿರ್ಮಾಣಗೊಂಡಿತು. ಹಾನಗಲ್–ಹಾವೇರಿ ರಸ್ತೆ ಸುಸಜ್ಜಿತಗೊಂಡಿತು. ಪ್ರತಿಯೊಂದು ಸರ್ಕಾರಿ ಕಚೇರಿ ಕಟ್ಟಡ ವ್ಯವಸ್ಥಿತವಾಗಿ ನಿರ್ಮಾಣಗೊಂಡವು.

ಹಾನಗಲ್‌ ಕ್ಷೇತ್ರದ ಜನರ ಸಂಕಷ್ಟಕ್ಕೆ ಸಿ.ಎಂ.ಉದಾಸಿ ಸ್ಪಂದಿಸಿದ ಕ್ಷಣ
ಹಾನಗಲ್‌ ಕ್ಷೇತ್ರದ ಜನರ ಸಂಕಷ್ಟಕ್ಕೆ ಸಿ.ಎಂ.ಉದಾಸಿ ಸ್ಪಂದಿಸಿದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT