ಬಾವಾಪೂರ (ಹಂಸಭಾವಿ): ಗ್ರಾಮದಲ್ಲಿ ಭಾನುವಾರ ಲಂಬಾಣಿ ಜನಾಂಗದವರಿಂದ ಮೊಹರಂ ಹಬ್ಬ ಶ್ರದ್ಧೆಯಿಂದ ನಡೆಯಿತು.
ಈ ಗ್ರಾಮದಲ್ಲಿ 200 ಲಂಬಾಣಿ ಕುಟುಂಬಗಳಿವೆ. ಇಲ್ಲಿ ಬೇರೆ ಯಾವುದೇ ಜಾತಿಯ ಜನರಿಲ್ಲ. ಲಂಬಾಣಿ ಕುಟುಂಬಗಳು ಪಕ್ಕದ ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಗ್ರಾಮದಿಂದ ವಲಸೆ ಬಂದಿದ್ದು, ವಲಸೆ ಬರುವಾಗ ಅಲ್ಲಿ ಆಚರಿಸುತ್ತಿದ್ದ ಭಾವೈಕ್ಯದ ಹಬ್ಬಗಳನ್ನು ಇಲ್ಲೂ ಮುಂದುವರಿಸಿಕೊಂಡು ಬಂದಿದ್ದಾರೆ.
ಪೂಜಾ ವಿಧಿ-ವಿಧಾಗಳನ್ನು ನೆರವೇರಿಸಲು ಅಕ್ಕಿಆಲೂರಿನ ಮೌಲ್ವಿಯೊಬ್ಬರನ್ನು ನೇಮಿಸಲಾಗುತ್ತದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಕಮಲೆಪ್ಪ ನಾಯ್ಕ.
ಇಲ್ಲಿನ ಜನತೆ ಕೂಲಿಯನ್ನೇ ಆಶ್ರಯಿಸಿ ಜೀವನ ಮಾಡುತ್ತಿದ್ದು, ಮೊಹರಂ ಹಬ್ಬದ ಸಂದರ್ಭದಲ್ಲಿ 9 ದಿನಗಳ ಕಾಲ ಎಲ್ಲರೂ ತಮ್ಮ ಕೆಲಸಗಳನ್ನು ಬದಿಗಿಟ್ಟು, ಅಲೈ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.
ಹಬ್ಬದ ದಿನ ಗ್ರಾಮದ ಹೆಣ್ಣು ಮಕ್ಕಳು ಲಂಬಾಣಿ ಹಾಡು ಹೇಳುತ್ತ ‘ಮೋಡಿ ಕಾರ್’ ಆಡುತ್ತಾರೆ. ನಂತರ ಅಲೈ ದೇವರನ್ನು ಗ್ರಾಮದ ಮನೆ-ಮನೆಗೂ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಪೂಜೆ ಮಾಡಲಾಗುತ್ತದೆ. ಅದೇ ದಿನ ರಾತ್ರಿ ಗ್ರಾಮದ ಆಚೆ ರಾತ್ರಿ 12 ಕ್ಕೆ ದೇವರ ಮೈತೊಳೆದು ಮೂರು ದಿನದ ನಂತರ ಜರ್ಕಾ ಮಾಡಲಾಗುತ್ತದೆ. ಅಲ್ಲಾ ದೇವರು ನಮಗೆ ಸಾಕಷ್ಟು ಒಳಿತು ಮಾಡಿದ್ದಾನೆ. ಪಿರು ಎಂಬುದು ಅಲ್ಲಾ ದೇವರ ಹೆಸರು. ಹೀಗಾಗಿ ನಮ್ಮಲ್ಲಿ ಮಕ್ಕಳಿಗೆ ಪೀರಪ್ಪ, ಪೀರು ಎಂದು ನಾಮಕರಣ ಮಾಡುವುದು ರೂಢಿಯಲ್ಲಿ ಬಂದಿದೆ ಎನ್ನುತ್ತಾರೆ ಗ್ರಾಮದ ಲಕ್ಷ್ಮಪ್ಪ ಪೂಜಾರ.
ನಮ್ಮ ಗ್ರಾಮದಲ್ಲಿ ಬೇರೆ ಯಾವ ದೇವರಿಗೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಬ್ಬ ಮಾಡುವುದಿಲ್ಲ. ಇಲ್ಲಿ ಅಲ್ಲಾ ದೇವರಿಗಾಗಿಯೇ ದರ್ಗಾ ನಿರ್ಮಾಣ ಮಾಡಿದ್ದೇವೆ. ಈ ಹಬ್ಬ ವೀಕ್ಷಣೆ ಮಾಡಲು ಸುತ್ತಲಿನ ಗ್ರಾಮಸ್ಥರು ಬರುತ್ತಾರೆ ಎಂದು ಪೀರಪ್ಪ ಲಮಾಣಿ ‘ಪ್ರಜಾವಾಣಿʼಗೆ ತಿಳಿಸಿದರು.
ಈ ಗ್ರಾಮದ ಬಂಜಾರ ಜನರು ನಮ್ಮ ಹಬ್ಬಗಳನ್ನು ನಮಗಿಂತಲೂ ಭಕ್ತಿ, ಶ್ರದ್ಧೆಯಿಂದ ಆಚರಣೆ ಮಾಡುತ್ತಿದ್ದು, ಇವರ ದೈವೀಭಕ್ತಿ ವಿಶೇಷವಾಗಿದೆ ಎಂದು ಮೌಲ್ವಿ ಮಲೀಕ್ ಜಾನ್ ಮುಲ್ಲಾ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.