ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ನೀಡಲು ಶೀಘ್ರ ಕ್ರಮ ಕೈಗೊಳ್ಳಿ: ಸಂಸದ ಶಿವಕುಮಾರ್ ಉದಾಸಿ

Last Updated 11 ಮೇ 2020, 13:57 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾಸೋಂಕು ಹಿನ್ನೆಲೆಯಲ್ಲಿ ಲಾಕ್‍ಡೌನ್‍ಗೊಳಗಾಗಿ ರೈತರು, ಸ್ವ ಉದ್ಯೋಗಿಗಳು, ಸ್ವ ಸಹಾಯ ಸಂಘಗಳು, ಸಣ್ಣ ವಾಣಿಜ್ಯೋದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಸಾಲ ನೀಡಿಕೆ ಪ್ರಮಾಣದಲ್ಲಿ ಯಾವುದೇ ಕೊರತೆಯಾಗದಂತೆ ನಿಗದಿಗಿಂತ ಗರಿಷ್ಠ ಪ್ರಮಾಣದಲ್ಲಿ ಅರ್ಹರಿಗೆ ಸಾಲ ನೀಡುವ ಕುರಿತು ತ್ವರಿತ ಕ್ರಮವಹಿಸುವಂತೆ ಬ್ಯಾಂಕರ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ಹಿನ್ನೆಲೆಯಲ್ಲಿ ಹೊಸ ಸಾಲ ಯೋಜನೆ ಕುರಿತಂತೆ ಸಭೆ ನಡೆಸಿದರು. ಹೊಸ ಸಾಲ ಯೋಜನೆಯಡಿ ಕೃಷಿ, ಸಣ್ಣ ಉದ್ಯಮಿಗಳು, ವೈಯಕ್ತಿಕ ಸಾಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನ ಯೋಜನೆಗಳು, ಪ್ರೋತ್ಸಾಹದಾಯಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಈ ಯೋಜನೆಗಳ ಬ್ಯಾಂಕ್ ವಹಿವಾಟು ಪ್ರಕ್ರಿಯೆಗೆ ಬಿಸಿನೆಸ್‌ ಕರೆಸ್ಪಾಂಡೆಂಟ್‍ಗಳು ಮನೆ ಬಾಗಿಲಿಗೆ ಚುರುಕಿನಿಂದ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ನಿಯಮ ಸಡಿಲಗೊಳಿಸಿ: ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಅರ್ಜಿ ಹಾಕಿದವರಿಗೆ ಗರಿಷ್ಠ ಪ್ರಮಾಣದಲ್ಲಿ ಮಂಜೂರಾತಿ ನೀಡಬೇಕು. ಸಾಲ ನೀಡುವ ಗುರಿ ಕಡಿಮೆ ಇದೆ ಎಂದು ನಿರಾಕರಿಸಬಾರದು. ವಿಶೇಷ ಸಂದರ್ಭವಾಗಿರುವುದರಿಂದ ನಿಯಮಗಳನ್ನು ಸಡಿಲಗೊಳಿಸಿ ಗರಿಷ್ಠ ಪ್ರಮಾಣದಲ್ಲಿ ಸ್ವ ಉದ್ಯೋಗಾಕಾಂಕ್ಷಿಗಳಿಗೆ ನೀಡಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವರ್ಗಗಳಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಗಳನ್ನು ನೀಡುವಾಗ ಗರಿಷ್ಠ ಪ್ರಮಾಣದಲ್ಲಿ ನೆರವು ಒದಗಿಸಬೇಕು ಎಂದು ಸೂಚನೆ ನೀಡಿದರು.

ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ರೈತರಿಗೆ ಕೋವಿಡ್ ಸಂಕಷ್ಟ ಕಾಲದಲ್ಲಿ ಹೆಚ್ಚು ಜನರಿಗೆ ಕೃಷಿ ಸಾಲ ನೀಡಬೇಕು. ರೈತರು ಸಾಲ ಪಡೆಯಲು ತೊಂದರೆ ಪಡಬಾರದು. ಸಿಬಿಲ್ ದರವನ್ನು ಕೃಷಿ ಕ್ಷೇತ್ರಕ್ಕೆ ಅನ್ವಯಿಸಬಾರದು. ಹೊಸ ಕೃಷಿ ಸಾಲವನ್ನು ತಕ್ಷಣವೇ ನೀಡಬೇಕು. ಎಲ್ಲ ಬ್ಯಾಂಕುಗಳು ಈ ಮಾನದಂಡವನ್ನು ಅನುಸರಿಸುವಂತೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಹೊಸ ಶಾಖೆ ತೆರೆಯಿರಿ:ಕೇಂದ್ರ ಸರ್ಕಾರದ ಜನ್‍ಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳು ಹೆಚ್ಚಾಗಿವೆ. ಕೆಲವಡೆ ಬ್ಯಾಂಕ್‍ಗಳ ಮುಂದೆ ಸಾಲು ಸಾಲು ಗ್ರಾಹಕರು ನಿಲ್ಲುವ ಪರಿಸ್ಥಿತಿ ಇದೆ. ಈ ಕಾರಣದಿಂದ ಅಗತ್ಯವಿದ್ದೆಡೆ ಬ್ಯಾಂಕ್‍ಗಳ ಹೊಸ ಶಾಖೆಗಳು ಹಾಗೂ ಎ.ಟಿ.ಎಂ.ಗಳನ್ನು ಆರಂಭಿಸಲು ಸಂಸದರು ಸೂಚನೆ ನೀಡಿದರು.

ಬೆಳೆವಿಮೆ ಪ್ರಚಾರ ಅಗತ್ಯ:ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆಗೆ ಒಳಪಡುವ ಆಯ್ಕೆಯನ್ನು ರೈತರಿಗೆ ಬಿಡಲಾಗಿದೆ. ಕಡ್ಡಾಯಗೊಳಿಸಲಾಗಿಲ್ಲ. ಆದರೆ ಬೆಳೆವಿಮೆಗೆ ನೋಂದಣಿ ಮಾಡಿಕೊಂಡರೆ ರೈತರಿಗೆ ಅನುಕೂಲವಾಗಲಿದೆ. ವಿಮೆ ಕಂತು ತುಂಬಲು ರೈತರ ಮನವೊಲಿಸಬೇಕು. ಈ ಕುರಿತಂತೆ ಸಾಕಷ್ಟು ಪ್ರಚಾರ ಕೈಗೊಳ್ಳಬೇಕು ಸೂಚನೆ ನೀಡಿದರು.

ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ಹತ್ತಿ ಬೀಜದ ಮಾದರಿಯಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜಕ್ಕೂ ದರ ನಿಗದಿ ಮಾಡಬೇಕು. ಖಾಸಗಿ ಕಂಪನಿಗಳು ರೈತರಿಂದ ಕಡಿಮೆ ದರದಲ್ಲಿ ಬೀಜ ಖರೀದಿಸಿ ಹೆಚ್ಚಿನ ದರದಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಹೊರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT