ಮಂಗಳವಾರ, ಮಾರ್ಚ್ 9, 2021
26 °C
ಶಿವಬಸವ ಮತ್ತು ಶಿವಲಿಂಗ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಅಲಂಕಾರ; ದರ್ಶನ ಪಡೆದ ಭಕ್ತರು

ನಮ್ಮೂರ ಜಾತ್ರೆ: ಮನಸೆಳೆದ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ‘ಮರಿ ಕಲ್ಯಾಣ’ ಖ್ಯಾತಿಯ ಹುಕ್ಕೇರಿಮಠದ ‘ನಮ್ಮೂರ ಜಾತ್ರೆ’ ಅಂಗವಾಗಿ ಭಾನುವಾರ ನಡೆದ ಉಭಯಶ್ರೀಗಳ ಭಾವಚಿತ್ರಗಳ ಭವ್ಯ ಮೆರವಣಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.  

ಶಿವಬಸವ ಸ್ವಾಮೀಜಿ ಮತ್ತು ಶಿವಲಿಂಗ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಮೂರು ದಿನಗಳಿಂದ ವೈಭವವಾಗಿ ನಡೆದ ಜಾತ್ರೆ ಭಾನುವಾರ ಮುಕ್ತಾಯವಾಯಿತು. 

ಹುಕ್ಕೇರಿಮಠದ ಬಳಿ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವಶ್ರೀ, ಕೂಡಲದ ಗುರುಮಹೇಶ್ವರ ಶ್ರೀಗಳು, ಮಾದನಹಿಪ್ಪರಗಿಯ ಶಿವಲಿಂಗ ಶ್ರೀಗಳು, ಗುಡ್ಡದ ಆನ್ವೇರಿಯ ಶಿವಯೋಗಿ ಶಿವಾಚಾರ್ಯಶ್ರೀ, ರಾವೂರಿನ ಸಿದ್ಧಲಿಂಗದೇವರು ಸೇರಿದಂತೆ ಹಲವಾರು ಮಠಾಧೀಶರು ಉಭಯ ಶ್ರೀಗಳ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಮಹಾಮಂಗಳಾರತಿ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀಮಠದಿಂದ ಆರಂಭವಾದ ಮೆರವಣಿಗೆಯು ಕೊರೊನಾ ಹಿನ್ನೆಲೆಯಲ್ಲಿ ಹುಕ್ಕೇರಿಮಠದ ಮುಂಭಾಗದವರೆಗೆ ಮಾತ್ರ ಸಂಚರಿಸಿತು. ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು ಗಮನಸೆಳೆದವು. ಈ ಬಾರಿ ಮೆರವಣಿಗೆ ಸರಳವಾಗಿ ನಡೆಯುತ್ತದೆ ಎಂದು ಶ್ರೀಮಠ ತಿಳಿಸಿದ್ದರೂ, ಪ್ರತಿ ವರ್ಷದಂತೆ ಸಾವಿರಾರು ಜನರು ಮಠದ ಆವರಣದಲ್ಲಿ ನೆರೆದು ಉಭಯಶ್ರೀಗಳ ಭಾವಚಿತ್ರಗಳ ದರ್ಶನ ಪಡೆದರು. 

ಗದ್ದುಗೆಗೆ ವಿಶೇಷ ಅಲಂಕಾರ:

ಹುಕ್ಕೇರಿಮಠದ ಆವರಣದಲ್ಲಿ ಶಿವಬಸವ ಸ್ವಾಮೀಜಿ ಮತ್ತು ಶಿವಲಿಂಗ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು. ಬೆಳಿಗ್ಗೆ 8 ಗಂಟೆಗೆ ಉಭಯಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿತು. ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ ನಡೆಯಿತು. 

ತರಹೇವಾರಿ ಅಂಗಡಿಗಳು:

ಎಂ.ಜಿ.ರಸ್ತೆಯ ಎರಡೂ ಬದಿ ಹಾಗೂ ಮಠದ ಆವರಣದ ಒಳಗಡೆ ಮತ್ತು ಹೊರಗಡೆ ತರಹೇವಾರಿ ಅಂಗಡಿಗಳು ತೆರೆದಿದ್ದವು. ಐಸ್‌ಕ್ರೀಂ, ಬೋಂಡಾ, ಬಜ್ಜಿ, ಮಿರ್ಚಿ, ಮಂಡಕ್ಕಿ, ಕಡ್ಲೆಪುರಿ ಮಾರಾಟ ಭರ್ಜರಿಯಾಗಿ ನಡೆಯಿತು. ಬಳೆ, ಮಣಿಸರ, ಮೆಹಂದಿ, ಕಿವಿಯೋಲೆ, ಉಂಗುರ ಮುಂತಾದವನ್ನು ಕೊಳ್ಳಲು ಹೆಣ್ಣುಮಕ್ಕಳು ಮುಗಿಬಿದ್ದಿದ್ದರು. ಬಲೂನು, ಪೀಪಿ ಹಾಗೂ ಆಟಿಕೆಗಳನ್ನು ಖರೀದಿಸಿದ ಮಕ್ಕಳು ಸಂಭ್ರಮಿಸಿದರು. ಮಠದ ಒಳಗಡೆ ರುದ್ರಾಕ್ಷಿ ಸರ, ಕಪ್ಪು ದಾರ, ಶಿವದಾರ, ವಿಭೂತಿ, ಕುಂಕುಮ, ಅರಿಸಿನ ಮುಂತಾದವನ್ನು ಮಾರಾಟ ಮಾಡಲಾಯಿತು. 

ನಗರದಲ್ಲಿ ಉತ್ಸವದ ಮೆರವಣಿಗೆ ಸಂಚರಿಸದಿದ್ದರೂ ಬೀದಿಗಳನ್ನು ಸ್ವಚ್ಛ ಮಾಡಿ,ತಳಿರು ತೋರಣ ಕಟ್ಟಿದ್ದರು. ಮನೆಯ ಮುಂಭಾಗ ರಂಗೋಲಿ ಹಾಕಿ, ದೀಪಗಳನ್ನು ಹಚ್ಚಿದ್ದು ಕಂಡುಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು