ಶನಿವಾರ, ಜೂನ್ 25, 2022
21 °C
ಹಾವೇರಿ ನಗರದಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆಗೆ ಅಧಿಸೂಚನೆ

ಹಾವೇರಿ ನಗರ: ಏಕಮುಖ ಸಂಚಾರ, ನಿಶ್ಯಬ್ದ ವಲಯ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸಾರ್ವಜನಿಕರ ಹಿತದೃಷ್ಟಿಯಿಂದ ಹಾವೇರಿ ನಗರ ವ್ಯಾಪ್ತಿಯಲ್ಲಿ ಏಕಮುಖ ವಾಹನ ಸಂಚಾರ ಮಾರ್ಗಗಳು, ವಾಹನ ನಿಲುಗಡೆಗೆ ಸ್ಥಳಗಳು, ನಿಶ್ಯಬ್ದ ವಲಯಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಕಿರಿದಾದ ರಸ್ತೆಗಳು, ರಸ್ತೆಬದಿಯಲ್ಲಿ ಫುಟ್‍ಪಾತ್‌ ಇಲ್ಲದೇ ಇರುವುದರಿಂದ ಪಾದಚಾರಿಗಳು ನಡೆದಾಡಲು ಅನಾನುಕೂಲತೆಯನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ನಗರ ವ್ಯಾಪ್ತಿಯಲ್ಲಿ ಪರ್ಯಾಯ ವಾಹನ ನಿಲುಗಡೆ ಮಾಡಲು ಹಾವೇರಿ ಎಂ.ಜಿ.ರಸ್ತೆಯಲ್ಲಿ ಸೂರ್ಯ ಬೇಕರಿಯಿಂದ (ಲಕ್ಕಿ ಸೂಪರ್ ಮಾರ್ಕೆಟ್‍ದಿಂದ) ಹುಕ್ಕೇರಿಮಠದವರೆಗೆ 2 ಕಿ.ಮೀ ಹಾಗೂ ಎಂ.ಜಿ. ರಸ್ತೆಯ ಗಾಂಧಿ ವೃತ್ತದಿಂದ ಪಿ.ಬಿ. ರಸ್ತೆಯ ಸಿದ್ದಪ್ಪ ವೃತ್ತ ಕೂಡು ರಸ್ತೆ, ಸಿದ್ದಪ್ಪ ವೃತ್ತದಿಂದ ಗಾಂಧಿ ವೃತ್ತದವರೆಗೆ 200 ಮೀಟರ್ ಪ್ರದೇಶದಲ್ಲಿ ವಾಹನ ನಿಲುಗಡೆ ಸ್ಥಳವಾಗಿ ಗುರುತಿಸಲಾಗಿದೆ.

ವಾರದಲ್ಲಿ ಮೂರು ದಿನ ರಸ್ತೆಯ ಎಡಬದಿಯಲ್ಲಿ ಹಾಗೂ ನಾಲ್ಕು ದಿನ ರಸ್ತೆಯ ಬಲಬದಿಯಲ್ಲಿ ವಾಹನ ನಿಲುಗಡೆಗೆ ಅಧಿಸೂಚಿಸಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಲಾಗಿದೆ.

ಏಕಮುಖ ಸಂಚಾರ:

ಎಂ.ಜಿ. ರಸ್ತೆಯಲ್ಲಿ ಲಕ್ಕಿ ಸೂಪರ್ ಮಾರ್ಕೆಟ್ ಕಡೆಯಿಂದ ಗಾಂಧಿ ವೃತ್ತದವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಗಾಂಧಿ ವೃತ್ತದಿಂದ ಸೂಪರ್ ಮಾರ್ಕೆಟ್ ಕಡೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಂ.ಜಿ. ರಸ್ತೆ ಗಾಂಧಿ ವೃತ್ತದಿಂದ ಪಿ.ಬಿ.ರಸ್ತೆಯ ಸಿದ್ದಪ್ಪ ವೃತ್ತ ಕೂಡು ರಸ್ತೆಯಲ್ಲಿ ಸಿದ್ದಪ್ಪ ವೃತ್ತದಿಂದ ಗಾಂಧಿ ವೃತ್ತದ ಕಡೆ ಏಖಮುಖ ಸಂಚಾರ ಹಾಗೂ ಗಾಂಧಿ ವೃತ್ತದಿಂದ ಸಿದ್ದಪ್ಪ ವೃತ್ತದ ಕಡೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ನಿಶ್ಯಬ್ದ ವಲಯ:

ಹಳೆ ಪಿಬಿ ರಸ್ತೆಯ ಶಿವಾಜಿನಗರ 1ನೇ ಕ್ರಾಸ್‍ನಿಂದ ಶಿವಾ ದರ್ಶಿನಿ ಹೋಟೆಲ್ ಹಾಗೂ ಕಾಗಿನೆಲೆ ಕ್ರಾಸ್‍ನಿಂದ ಹೆಸ್ಕಾಂ ಕಚೇರಿವರೆಗೆ ನಿಶ್ಯಬ್ದ ವಲಯ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಭಾರಿ ವಾಹನಗಳ ಲೋಡಿಂಗ್ ಅವಧಿ:

ನಗರದ ಎಂ.ಜಿ. ರಸ್ತೆಯ ಗ್ರಾಮ ದೇವತೆಯ ಪಾದಗಟ್ಟಿಯಿಂದ ಹುಕ್ಕೇರಿಮಠದವರೆಗೆ, ಅಕ್ಕಿಪೇಟೆ ರಸ್ತೆಯ ಹೇರೂರು ಅಂಗಡಿ ಕ್ರಾಸ್‍ನಿಂದ ಗುತ್ತಲ ರಸ್ತೆ ಹಾಗೂ ಹಳೆ ತರಕಾರಿ ಮಾರ್ಕೆ ರಸ್ತೆಯ ಅಂಕಾಲರ ಸ್ಟೋರ್ ಕ್ರಾಸ್‍ದಿಂದ ಗುತ್ತಲ್ ರಸ್ತೆವರೆಗೆ ಭಾರಿ ಸರಕು ವಾಹನಗಳ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ 11ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8ರವರೆಗೆ ನಿಷೇಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು