ಮಂಗಳವಾರ, ಆಗಸ್ಟ್ 16, 2022
27 °C
ಹಿರೇಮುಗದೂರು ಗ್ರಾಮ ಪಂಚಾಯಿತಿ ಎದುರು ಮಹಿಳೆಯರ ಪ್ರತಿಭಟನೆ

ಅಕ್ರಮ ಮದ್ಯ ಮಾರಾಟ ತಡೆಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಗ್ರಾಮದ ಎಲ್ಲೆಡೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಖಂಡನೀಯ. ಸಾರಾಯಿ ಕುಡಿತದಿಂದ ಊರಿನ ಕುಟುಂಬಗಳು ಬೀದಿಪಾಲಾಗುತ್ತಿವೆ’ ಎಂದು ಶುಕ್ರವಾರ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. 

ಬಡ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದ್ದು, ಕೂಡಲೇ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಮಹಿಳೆಯರು ಶುಕ್ರವಾರ ಹಿರೇಮುಗದೂರು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ಮಾಡಿ ಪಿಡಿಒ ಶಿವಾನಂದ ಹಡಪದ ಅವರಿಗೆ ಮನವಿ ಸಲ್ಲಿಸಿದರು.

ಊರಿನಲ್ಲಿ ಬಹುತೇಕ ಅಂಗಡಿ, ಮನೆಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಈ ಕುಡಿತದ ಚಟಕ್ಕೆ ದಾಸರಾಗಿದ್ದಾರೆ. ನಿತ್ಯ ಮನೆಗಳಲ್ಲಿ ಪತಿ–ಪತ್ನಿ ನಡುವೆ ಜಗಳಗಳಾಗುತ್ತಿವೆ. ಕುಡಿಯಲು ಹಣ ನೀಡುವಂತೆ ಮಹಿಳೆಯರನ್ನು ಪೀಡಿಸುತ್ತಿದ್ದಾರೆ. ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮಹಿಳಾ ಸಂಘದ ಮುಖ್ಯಸ್ಥೆ ಫಕ್ಕೀರವ್ವ ಹೊಸಮನಿ ಅಳಲು ತೋಡಿಕೊಂಡರು.

ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಕಾಳಿ ಮಾತನಾಡಿ, ‘ಈ ಹಿಂದೆಯೇ ಪೊಲೀಸ್‌, ಅಬಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಈ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಯನ್ನು ಜಿಲ್ಲಾಡಳಿತ ಈ ಕೂಡಲೇ ನಿಲ್ಲಿಸದಿದ್ದರೆ ತೀವ್ರವಾದ ಹೋರಾಟಕ್ಕೆ ಊರಿನ ಜನತೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಫಕ್ಕೀರವ್ವ ಬಸನಾಳ, ಯಲ್ಲವ್ವ ಕಾಳಿ, ನೀಲವ್ವ ತಿಮ್ಮಾಪೂರ, ಸುನಿತಾ ಹೊಸಮನಿ, ಕಲ್ಲವ್ವ ಹೊಸಮನಿ, ಅನಸವ್ವ ಅರಳಳ್ಳಿ, ಗೀತಾ ಹೊಸಮನಿ, ಚನ್ನವ್ವ ಅರಳಳ್ಳಿ ನೇತೃತ್ವ ವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.