ಸೋಮವಾರ, ನವೆಂಬರ್ 23, 2020
22 °C

‘ಹೆಣ್ಣು ಭ್ರೂಣಹತ್ಯೆ ತಡೆಗಟ್ಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ, ಬಾಲ್ಯವಿವಾಹ ಪದ್ಧತಿ ನಿರ್ಮೂಲನೆ ಮಾಡುವ ಮೂಲಕ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಹೆಣ್ಣು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಹಿರೇಕೆರೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯಕುಮಾರ ಎಂ. ಹೇಳಿದರು.

ಹಂಸಭಾವಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಹಂಸಭಾವಿ ಹೋಬಳಿ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರಿಗೆ ‘ಪೊಕ್ಸೋ ಕಾಯ್ದೆ-2012 ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ-2006’ ಕುರಿತು ಒಂದು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹತ್ತಿರದ ಪೊಲೀಸ್ ಠಾಣೆ ಅಥವಾ ಮಕ್ಕಳ ಉಚಿತ ಸಹಾಯವಾಣಿ 1098ಕ್ಕೆ ಕರೆ ಮಾಡಬೇಕು. ಮಕ್ಕಳ ಮತ್ತು ಮಹಿಳೆಯರ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಲು ಹೊಸದಾಗಿ ಜಿಲ್ಲೆಯಾದ್ಯಂತ ಪೈಲಟ್ ಯೋಜನೆಗಾಗಿ 24x7 ಸಹಾಯವಾಣಿ 112ನ್ನು ಆರಂಭಿಸಲಾಗಿದೆ. ಈ ಸಂಖ್ಯೆಗೂ ಸಹ ಕರೆ ಮಾಡಬಹುದು ಎಂದು ತಿಳಿಸಿದರು.

ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಬಸವರಾಜಪ್ಪ ಮಲ್ಲಜ್ಜೆರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ) ಮಂಗಳಾ ಅಳಗುಂಡಿ ಅವರು ಪೋಕ್ಸೊ ಕಾಯ್ದೆ-2012 ಕುರಿತು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮುತ್ತುರಾಜ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಕುರಿತು ಉಪನ್ಯಾಸ ನೀಡಿದರು. ಸರೋಜಾ ತಳವಾರ, ರಾಘವೇಂದ್ರ ಶಿರೂರ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.