ಶುಕ್ರವಾರ, ಜನವರಿ 22, 2021
24 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಅಧ್ಯಕ್ಷ ಏಕನಾಥ ಬಾನುವಳ್ಳಿ ಸೂಚನೆ

ನೀರಿನ ಘಟಕ ದುರಸ್ತಿಗೆ ಕ್ರಮವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶುದ್ಧ ನೀರಿನ ಘಟಕಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ, ಹಲವಾರು ಘಟಕಗಳು ಸ್ಥಗಿತಗೊಂಡಿರುವ ದೂರುಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಏಕನಾಥ ಬಾನುವಳ್ಳಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಗಳ ನಿರ್ವಹಣೆಯಲ್ಲಿರುವ 117 ಘಟಕಗಳ ನಿರ್ವಹಣೆಯನ್ನು ಸೊಸೈಟಿಗಳು ಮಾಡಬಹುದು ಇಲ್ಲವಾದಲ್ಲಿ ಮುಚ್ಚಳಿಕೆ ಪತ್ರ ಬರೆದು ಇಲಾಖೆಗೆ ಹಸ್ತಾಂತರಿಸಬಹುದು. ಈ ಕುರಿತು ಸೊಸೈಟಿಗಳಿಗೆ ಪತ್ರ ಬರೆಯಲು ತಿಳಿಸಿದರು.

32 ಘಟಕಗಳ ದುರಸ್ತಿ ಬಾಕಿ: ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಷನ್ ಮಾತನಾಡಿ, ‘ಜಿಲ್ಲೆಯಲ್ಲಿ 772 ಶುದ್ಧ ನೀರಿನ ಘಟಕಗಳ ಸ್ಥಿತಿಗತಿ ಮಾಹಿತಿ ನೀಡಲು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಘಟಕಗಳು ಹಲವಾರು ಕಾರಣಗಳಿಂದ ಸ್ಥಗಿತಗೊಂಡಿರಬಹುದು. ಸಮಸ್ಯೆಗಳ ಮಾಹಿತಿ ನೀಡಲು ಈಗಾಗಲೇ ಸಹಾಯವಾಣಿ ನೀಡಲಾಗಿದೆ. 32 ಘಟಕಗಳನ್ನು ಮಾತ್ರ ಸರಿಪಡಿಸಬೇಕಾಗಿದೆ’ ಎಂದರು. 

ಸೆನ್ಸಾರ್‌ ಅಳವಡಿಸಲು ಕ್ರಮ: ‘ರಾಜ್ಯದಲ್ಲಿಯೇ ಜಿಲ್ಲೆಯ ಕುಡಿಯುವ ನೀರಿನ ಘಟಕಗಳ ಪರಿಸ್ಥಿತಿ ಚೆನ್ನಾಗಿದೆ. ಈಗಿರುವ ಸಮಸ್ಯೆಗಳ ನಿವಾರಣೆಗೆ ಸ್ವಲ್ಪ ಕಾಲಾವಕಾಶ ಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಒಂದು ಸೆನ್ಸಾರ್‌ ಅಳವಡಿಸಿದರೆ ದುರಸ್ತಿ ಬಗ್ಗೆ ಕೂಡಲೇ ಮಾಹಿತಿ ದೊರೆಯುತ್ತದೆ’ ಎಂದು ತಿಳಿಸಿದರು.

ಎಸಿಬಿ ತನಿಖೆಗೆ ಆಗ್ರಹ: ಭೂಸ್ವಾಧೀನ ಪರಿಹಾರ ಹಣ ರೈತರಿಗೆ ಜಮೆ ಕುರಿತು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಸತಿ ಗೃಹ ನಿರ್ಮಾಣ, ಅಕಾಲಿಕೆ ಮಳೆಯಿಂದ ಹಾಳಾದ ಜೋಳ, ಕಡ್ಲಿ, ಕುಸುಬಿ ಬೆಳೆ ಸಮೀಕ್ಷೆ, ಬೆಳೆಹಾನಿ ಇನ್‍ಫುಟ್ ಸಬ್ಸಿಡಿ ಹಣ ದುರುಪಯೋಗಪಡಿಸಿಕೊಂಡವರನ್ನು ಎಸಿಬಿಗೆ ತನಿಖೆಗೆ ಒಳಪಡಿಸಲು, ಜಿಲ್ಲಾ ಪಂಚಾಯಿತಿ ರಸ್ತೆಗಳಲ್ಲಿ ಹಾಗೂ ಪಿ.ಡಬ್ಲ್ಯೂ.ಡಿ ರಸ್ತೆ ಬದಿಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳಿಂದ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಕುರಿತು ಸಭೆಯ ಗಮನ ಸೆಳೆದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ‘ಬೆಳೆಹಾನಿ ಪರಿಹಾರಧನ ದುರುಪಯೋಗಪಡಿಸಿಕೊಂಡವರ ವಿರುದ್ಧ ಎಸಿಬಿ ತನಿಖೆ ನಡೆದಿದೆ. ಎಷ್ಟು ಹಣ ಯಾವ ಖಾತೆಯಿಂದ ಯಾರಿಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಜಲಾನಯನ ಯೋಜನೆಗೆ ₹4.85 ಕೋಟಿ ಅನುದಾನ ಮಂಜೂರಾಗಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಪಂಚಾಯಿತಿ 4010.07 ಕಿ.ಮೀ ರಸ್ತೆ, ಕ್ರೀಡಾ ಇಲಾಖೆ ಕಾಮಗಾರಿ ಬದಲಾವಣೆ, ರಾಣೆಬೆನ್ನೂರುನಲ್ಲಿ ಐ.ಟಿ.ಐ. ಕಾಲೇಜಿಗೆ 1.2 ಎಕರೆ ಜಾಗಕ್ಕೆ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಟಾಕನಗೌಡ ಪಾಟೀಲ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಮರಾಪೂರ, ಜಿ.ಪಂ. ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು