ಮಂಗಳವಾರ, ಡಿಸೆಂಬರ್ 1, 2020
26 °C
ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ

ಪ್ರತಿ ಗ್ರಾ.ಪಂ.ನಲ್ಲಿ ‘ಮಣ್ಣು ಆರೋಗ್ಯ ಕೇಂದ್ರ’ ಆರಂಭಿಸಲು ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ರಾಜ್ಯದಲ್ಲಿ ಪ್ರಸ್ತುತ 247 ಮಣ್ಣು ಆರೋಗ್ಯ ಕೇಂದ್ರಗಳಿವೆ. ಇದರ ಜತೆಗೆ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲೂ ‘ಮಣ್ಣು ಆರೋಗ್ಯ ಕೇಂದ್ರ’ ತೆರೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. 

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬಿತ್ತನೆಗೂ ಮುನ್ನ ಮಣ್ಣು ಪರೀಕ್ಷೆ ಮಾಡಿಸುವುದರಿಂದ ಮಣ್ಣಿನಲ್ಲಿ ಯಾವ ಅಂಶ ಕೊರತೆಯಿದೆ ಎಂಬುದನ್ನು ಮೊದಲೇ ಪತ್ತೆ ಹಚ್ಚಿ, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಗೆ ಪ್ರಧಾನಿ ಮೋದಿ ಅವರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದರು. 

ಸಿಎಫ್‌ಟಿಆರ್‌ಐನಲ್ಲಿ ತರಬೇತಿ: ಮೈಸೂರಿನ ‘ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ’ (CFTRI)ದಲ್ಲಿ ಪ್ರತಿ ತಿಂಗಳು ತಾಲ್ಲೂಕಿಗೆ ಒಬ್ಬ ರೈತನಿಗೆ ‘ಆಹಾರ ಸಂಸ್ಕರಣೆ ಮತ್ತು ಪ್ಯಾಕಿಂಗ್‌’ ಬಗ್ಗೆ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ. ತರಬೇತಿ ಪಡೆದ ರೈತರು ಪ್ರತಿ ತಾಲ್ಲೂಕಿನಲ್ಲಿ ‘ಆಹಾರ ಸಂಸ್ಕರಣೆ ಘಟಕ’ ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು. 

ರಾಜ್ಯದಲ್ಲಿ ಖಾಲಿಯಿರುವ ಉಗ್ರಾಣಗಳನ್ನು ‘ಶೀತಲೀಕರಣ ಘಟಕ’ವನ್ನಾಗಿ ಪರಿವರ್ತನೆ ಮಾಡಲು ಸಹಕಾರ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಇದರಿಂದ ಕೃಷಿ ಉತ್ಪನ್ನಗಳನ್ನು ಬಹುಕಾಲ ಕೆಡದಂತೆ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

149 ಅಂಗಡಿ ಪರವನಾಗಿ ರದ್ದು: ಯೂರಿಯಾ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ರಾಜ್ಯದ ವಿವಿಧ ಜಿಲ್ಲೆಗಳ 149 ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಿದ್ದೇವೆ. ವಿವಿಧ ಕಂಪನಿಗಳಿಂದ ರೈತರಿಗೆ ವಿತರಿಸಿದ ಬೀಜಗಳು ಕಳಪೆ ಎಂಬುದು ವರದಿಯಿಂದ ದೃಢಪಟ್ಟಿದೆ. ಈ ಎಲ್ಲ ಕಳಪೆ ಬೀಜಗಳನ್ನು ಕಾಂಪೋಸ್ಟ್‌ ಗೊಬ್ಬರಕ್ಕೆ ಬಳಸಲಾಗುವುದು ಎಂದರು. ‌

ಕಳಪೆ ಬೀಜಗಳು ಬಂದಿದ್ದು ಆಂಧ್ರಪ್ರದೇಶದಿಂದ ಎಂಬುದನ್ನು ಪತ್ತೆ ಹಚ್ಚಿದ್ದು, ತನಿಖೆ ಮುಕ್ತಾಯ ಹಂತಕ್ಕೆ ಬಂದಿದೆ. ಕೆಲವರು ಲಾಭ ಮಾಡಿಕೊಳ್ಳಲು ಮಾಡಿದ ಕೃತ್ಯದಿಂದ ಸುಮಾರು 10ರಿಂದ 15 ಲಕ್ಷ  ರೈತರಿಗೆ ಅನ್ಯಾಯವಾಗಿದೆ ಎಂದು ಹೇಳಿದರು. 

ಬೆಳೆ ಸಮೀಕ್ಷೆ ಶೇ 100ರಷ್ಟು ಸಾಧನೆ: ಭೂಮಿ ತಂತ್ರಾಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 2.10 ಕೋಟಿ ತಾಕುಗಳನ್ನು ಸಮೀಕ್ಷೆ ಮಾಡುವ ಗುರಿ ಹೊಂದಿದ್ದೆವು. ರೈತರಿಂದ ಶೇ 46ರಷ್ಟು ಬೆಳೆ ಸಮೀಕ್ಷೆ ನಡೆದಿದ್ದು, ಉಳಿದ ತಾಕುಗಳನ್ನು ಪಿ.ಆರ್‌.ಗಳಿಂದ ಮಾಡಿಸಿದ್ದೇವೆ. ಒಟ್ಟಾರೆ ಶೇ 100ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

 

‘ಸಿದ್ದರಾಮಯ್ಯ ಬೇನಾಮಿ ಮನೆಯಲ್ಲೇ ಇರಬೇಕಿತ್ತು’

ಹಾವೇರಿ: ‘ನಾವು 16 ಮಂದಿ ರಾಜೀನಾಮೆ ನೀಡಿ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕಾರಣದಿಂದಲೇ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಅವರೇ ಸಿ.ಎಂ.ಆಗಿ ಮುಂದುವರಿದಿದ್ದರೆ, ಸಿದ್ದರಾಮಯ್ಯ ‘ಬೇನಾಮಿ ಮನೆ’ಯಲ್ಲೇ ಇರಬೇಕಾಗುತ್ತಿತ್ತು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದರು. 

ಬಿಎಸ್‌ವೈ ಅಧಿಕಾರಾವಧಿ ಮುಗಿದರೆ ಪಕ್ಷಾಂತರ ಮಾಡಿದವರ ಸ್ಥಿತಿ ನಾಯಿಪಾಡಾಗುತ್ತದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಈ ರೀಟಿ ಟಾಂಗ್‌ ನೀಡಿದರು. 

ಮನುಷ್ಯರನ್ನು ನಾಯಿ, ಬಂಡೆ, ಹುಲಿ, ಟಗರುಗಳಿಗೆ ಹೋಲಿಸುವುದು ಯಾವ ಸಂಸ್ಕೃತಿ. ಸಿದ್ದರಾಮಯ್ಯ ಅವರು ಘನತೆಗೆ ತಕ್ಕ ಮಾತನಾಡಬೇಕು. ನಾಯಿಗಳಿಗೆ ನಿಯತ್ತು ಜಾಸ್ತಿ. ಒಳ್ಳೆಯ ನಾಯಿ ಸಾಕಿದ್ದರೆ ಅವರಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ವಿಪಕ್ಷ ಸ್ಥಾನ ಅಲುಗಾಡುವ ಭಯ ಅವರನ್ನು ಕಾಡುತ್ತಿದೆ ಎಂದು ಟೀಕಿಸಿದರು. 

ಡಿ.ಕೆ.ಶಿವಕುಮಾರ್‌ ಅವರು ನಮ್ಮನ್ನು ಸಮಾಧಿಯಾಗ್ತಾರೆ ಎಂದು ಕುಹಕದ ಮಾತುಗಳನ್ನಾಡಿದ್ದರು. ರಾಜಕೀಯವಾಗಿ ಸಮಾಧಿ ಮಾಡೋದು, ಜೀವಂತವಾಗಿ ಸಮಾಧಿ ಮಾಡೋದು ದೌರ್ಜನ್ಯವಲ್ಲದೆ ಮತ್ತೇನು ಎಂದು ಹರಿಹಾಯ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು