ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಡಾ.ಪಿ. ಶಾಂತ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: DC ಕಚೇರಿಗೆ ಮುತ್ತಿಗೆ

Published 2 ಜುಲೈ 2024, 16:19 IST
Last Updated 2 ಜುಲೈ 2024, 16:19 IST
ಅಕ್ಷರ ಗಾತ್ರ

ಹಾವೇರಿ: ‘ಗರ್ಭಕೋಶದ ಅನಧಿಕೃತ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯ ಡಾ. ಪಿ. ಶಾಂತ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಜೀವನಾಂಶಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮಂಗಳವಾರ ಯತ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮುತ್ತಿಗೆ ಹಾಕಲು ಬಂದಿದ್ದ ಮಹಿಳೆಯರನ್ನು ಪೊಲೀಸರು, ಜಿಲ್ಲಾಧಿಕಾರಿ ಕಚೇರಿ ಎದುರು ತಡೆದು ನಿಲ್ಲಿಸಿದ್ದರು.

‘ವೈದ್ಯ ಡಾ. ಪಿ. ಶಾಂತ ಅವರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದಾಗಿ ನಾವೆಲ್ಲರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ಇದರ ವಿರುದ್ಧ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಇದುವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ಇದನ್ನು ಪ್ರಶ್ನಿಸಲು ಬಂದಿದ್ದೇವೆ’ ಎಂದು ಸಂತ್ರಸ್ತ ಮಹಿಳೆಯರು ಹೇಳಿದರು.

ಸ್ಥಳದಲ್ಲಿದ್ದ ಪೊಲೀಸರು, ‘ಒಳಗಡೆ ಸಭೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಬೇಡಿ. ಸ್ಥಳದಿಂದ ಹೊರಟು ಹೋಗಿ’ ಎಂದು ಕೋರಿದರು.

ಅದಕ್ಕೆ ಒಪ್ಪದ ಕೆಲ ಸಂತ್ರಸ್ತ ಮಹಿಳೆಯರು, ಬ್ಯಾರಿಕೇಡ್‌ಗಳನ್ನು ತಳ್ಳಿ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು.

ಕಚೇರಿಯ ಪ್ರವೇಶ ದ್ವಾರದಿಂದ ಮಹಿಳೆಯರನ್ನು ದೂರಕ್ಕೆ ಸರಿಸಿದ ಪೊಲೀಸರು, ಮುತ್ತಿಗೆ ಯತ್ನ ವಿಫಲಗೊಳಿಸಿದರು. ಬಳಿಕ, ಮಹಿಳೆಯರು ಪ್ರವೇಶ ದ್ವಾರದ ಎದುರು ಕುಳಿತು ಪ್ರತಿಭಟನೆ ಮುಂದುವರಿಸಿದರು.

‘ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರು ಒಬ್ಬೊಬ್ಬರಾಗಿ ತೀರಿಕೊಳ್ಳುತ್ತಿದ್ದಾರೆ. ಈಗಾಗಲೇ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದವರಿಗೆ ಆರೋಗ್ಯದ ಭಯ ಶುರುವಾಗಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ. ಇದಕ್ಕೆಲ್ಲ ಕಾರಣವಾಗಿರುವ ಡಾ. ಪಿ. ಶಾಂತ ವಿರುದ್ಧ ಕ್ರಮ ಕೈಗೊಂಡು ಸೇವೆಯಿಂದ ವಜಾ ಮಾಡಬೇಕು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಮಹಿಳೆಯರು ಒತ್ತಾಯಿಸಿದರು.

ರಾಣೆಬೆನ್ನೂರು ತಾಲ್ಲೂಕು ಸಂತ್ರಸ್ತ ಮಹಿಳೆಯರ ಸಂಘದ ಅಧ್ಯಕ್ಷೆ ಲಲಿತಾ ಲಮಾಣಿ, ಕಾರ್ಯದರ್ಶಿ ಶೈಲಾ ರಂಗರೆಡ್ಡಿ, ವಂದೇ ಮಾತರಂ ಯುವಕ ಸ್ವಸೇವಾ ಸಂಘದ ಅಧ್ಯಕ್ಷ ಜಗದೀಶ್ ಕೆರೂಡಿ ಇದ್ದರು.

‘₹ 5 ಲಕ್ಷ ಕೊಡಿಸುವ ಭರವಸೆ’

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಪ್ರಕಾಶ ಕೋಳಿವಾಡ ‘ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಮಹಿಳೆಯರಿಗೆ ಅನ್ಯಾಯವಾಗಿದೆ. ಅವರು ನಿತ್ಯವೂ ಮನೆ ಬಳಿ ಬಂದು ಕೂರುತ್ತಿದ್ದಾರೆ’ ಎಂದರು. ಸಚಿವ ಶಿವಾನಂದ ಪಾಟೀಲ ‘ಈ ಸಮಸ್ಯೆ ನನ್ನ ಗಮನದಲ್ಲೂ ಇದೆ. ಬೆಂಗಳೂರು ಮಟ್ಟದಲ್ಲಿ ನಾವು–ನೀವೆಲ್ಲ ಸೇರಿ ಮಾತನಾಡಿ ಪರಿಹಾರ ಕೊಡಿಸೋಣ’ ಎಂದರು. ಸಭೆ ಬಳಿಕ ಸಂತ್ರಸ್ತ ಮಹಿಳೆಯರನ್ನು ಭೇಟಿಯಾದ ಸಚಿವ ‘₹ 5 ಲಕ್ಷ ಪರಿಹಾರ ಬೇಕು ಎನ್ನುವುದಾದರೆ ಅದನ್ನು ಕೊಡಿಸಲು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT