ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಗಳ ಸ್ಥಿತಿಗತಿ; ಸರ್ಕಾರಕ್ಕೆ ಶೀಘ್ರ ವರದಿ: ಕೆ.ರವೀಂದ್ರಶೆಟ್ಟಿ

ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ನಿಗಮದ ಅಧ್ಯಕ್ಷ
Last Updated 16 ಆಗಸ್ಟ್ 2021, 15:30 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದಾರೆ. ವಸತಿ ಸೇರಿದಂತೆ ಈ ಜನಾಂಗಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸುವುದು ಅಗತ್ಯವಾಗಿದೆ. ಇವರ ಜೀವನ ಸ್ಥಿತಿಗತಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರಶೆಟ್ಟಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈಗಾಗಲೇ ರಾಜ್ಯದ 19 ಜಿಲ್ಲೆಗಳಿಗೆ ಭೇಟಿ ನೀಡಿ ಜನಾಂಗದ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಪ್ರವರ್ಗ 1ಕ್ಕೆ ಸೇರುವ ಈ ಜನಾಂಗದಲ್ಲಿ 46 ಜಾತಿಗಳು ಬರುತ್ತವೆ. ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆಯಿದ್ದು, ಈ ಸಮುದಾಯಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು.

ಸಿಕ್ಕಿದ್ದು ಕೇವಲ ₹5 ಕೋಟಿ:ಅಲೆಮಾರಿ ಜನಾಂಗದವರಿಗೆ ಕೌಶಲಾಭಿವೃದ್ಧಿ ಹಾಗೂ ವಿವಿಧ ಯೋಜನೆಯಡಿ ನೆರವು ಒದಗಿಸಲು ಸರ್ಕಾರಕ್ಕೆ ₹250 ಕೋಟಿ ಅನುದಾನ ಕೇಳಲಾಗಿತ್ತು. ಈ ಪೈಕಿ ₹5 ಕೋಟಿ ಮಾತ್ರ ನಿಗಮಕ್ಕೆ ಅನುದಾನ ಸಿಕ್ಕಿದೆ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

ಕನಿಷ್ಠ ಗುಡಿಸಲು, ಜೋಪಡಿಯೂ ಇಲ್ಲದೆ ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ಅಲೆಮಾರಿ ಜನಾಂಗದವರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಳೆದ ವರ್ಷ ಉಳಿದ ₹7 ಕೋಟಿ ಸೇರಿದಂತೆ ಒಟ್ಟು ₹12.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕ್ರಿಯಾಯೋಜನೆ ರೂಪಿಸಲಾಗಿದೆ. ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಸಹಾಯ ಸಂಘಗಳ ಆರ್ಥಿಕ ನೆರವು, ಅರಿವು ಶೈಕ್ಷಣಿಕ ಸಾಲ ಯೋಜನೆ, ಕೌಶಲ ತರಬೇತಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಕಲಾ ಉತ್ಸವ:ಅಲೆಮಾರಿ ಜನಾಂಗದ ವಿಶಿಷ್ಟ ಸಂಸ್ಕೃತಿ ಮತ್ತು ಕಲೆಗಳ ಕುರಿತು ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕಲಾ ಉತ್ಸವ ನಡೆಸುವ ಉದ್ದೇಶವಿದೆ.ಕೋವಿಡ್ ಸೋಂಕು ಇಳಿಮುಖವಾದ ನಂತರ ಸಮಾವೇಶ ನಡೆಸಲಾಗುವುದು. ಅಲೆಮಾರಿಗಳ ಕುಲಕಸುಬು ಮತ್ತು ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದರು.

750 ಮಂದಿಗೆ ಹೊಲಿಗೆ ಯಂತ್ರ ವಿತರಣೆ

ಮೊದಲ ಬಾರಿಗೆ ಅಲೆಮಾರಿ ಮತ್ತು ಅರೆಅಲೆಮಾರಿ ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಕಲ್ಪಿಸುವ ಹಿನ್ನೆಲೆಯಲ್ಲಿ ಕೌಶಲ ತರಬೇತಿ ಕಾರ್ಯಕ್ರಮವನ್ನು ರೂಪಿಸಿದ್ದು, ₹1.25 ಕೋಟಿ ಕಾಯ್ದಿರಿಸಲಾಗಿದೆ. ಟೇಲರಿಂಗ್, ಬ್ಯೂಟಿಷಿಯನ್‌ ತರಬೇತಿ ನೀಡುವ ಜತೆಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುತ್ತೇವೆ. ರಾಜ್ಯದ 750 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದುರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ನಿಗಮದ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ತಿಳಿಸಿದರು.

ನಿಗಮದ ವ್ಯವಸ್ಥಾಪಕ ಮಹಾದೇವ ಮಳಲಿ, ಗೊಲ್ಲ ಸಮುದಾಯದ ಅಧ್ಯಕ್ಷ ಸಿ.ಎಂ. ತಂಗೋಡರ, ನಾಗರಾಜ, ಅಲೆಮಾರಿ ಸಮಾಜದ ಶೆಟ್ಟಿ ವಿಭೂತಿ, ಹುಲ್ಲಪ್ಪ ಜಾಡರ, ಅಶೋಕ ಬಸ್ತಿ, ಯಾದವ ಜನಾಂಗದ ಅಧ್ಯಕ್ಷ ಚಂದ್ರಶೇಖರ ಗೌಡರ, ಸತೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT