ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ: ನಗರಸಭೆಯಿಂದ ನೋಟಿಸ್‌

ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ತಡೆಯಾಜ್ಞೆ: ಪ್ರಕರಣದ ವಿಚಾರಣೆ ಡಿ.10ಕ್ಕೆ
Last Updated 7 ನವೆಂಬರ್ 2020, 13:41 IST
ಅಕ್ಷರ ಗಾತ್ರ

ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ನಗರ, ಮಂಜುನಾಥ ನಗರ, ಇಜಾರಿಲಕಮಾಪುರದಲ್ಲಿ ಹಾದು ಹೋಗಿರುವ ರಾಜಕಾಲುವೆ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿರುವವರು ಒಂದು ವಾರದೊಳಗೆ ತೆರವುಗೊಳಿಸಬೇಕು ಎಂದು ನಗರಸಭೆ ಪೌರಾಯುಕ್ತರು ನೋಟಿಸ್‌ ಜಾರಿಗೊಳಿಸಿದ್ದಾರೆ.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಭೀಮಪ್ಪ ಶೇಖಪ್ಪ ಲಮಾಣಿ ಸೇರಿದಂತೆ ಇತರರಿಗೆ ನೋಟಿಸ್‌ ನೀಡಲಾಗಿದೆ. ರಾಜಕಾಲುವೆ ಜಾಗದಲ್ಲಿ ಕಟ್ಟಡ ನಿರ್ಮಿಸಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ತೊಂದರೆಯಾಗಿ, ಸಾರ್ವಜನಿಕರ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ತಿಳಿಸಲಾಗಿದೆ.

1 ಗುಂಟೆ 9 ಆಣೆಯ ಒತ್ತುವರಿ ಜಾಗವನ್ನು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಪುರಸಭೆ ಅಧಿನಿಯಮ 1964ರ ಪ್ರಕಾರ ತೆರವುಗೊಳಿಸಲಾಗುವುದು. ತಮ್ಮ ಆಸ್ತಿ–ಪಾಸ್ತಿಗೆ ಯಾವುದೇ ರೀತಿ ಹಾನಿ ಉಂಟಾದಲ್ಲಿ ತಾವೇ ಜವಾಬ್ದಾರರಾಗಿರುತ್ತೀರಿ. ತೆರವುಗೊಳಿಸಿದ ವೆಚ್ಚವನ್ನು ತಮ್ಮಿಂದ ವಸೂಲಿ ಮಾಡಲಾಗುವುದು. ಒಂದು ವೇಳೆ ವೆಚ್ಚ ಭರಿಸದೇ ಇದ್ದಲ್ಲಿ ನಿಮ್ಮ ಆಸ್ತಿ ಮೇಲೆ ಭೂಜಾ ದಾಖಲಿಸಲಾಗುವುದು ಎಂದು ಪೌರಾಯುಕ್ತರು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ದ್ವೇಷದ ಆರೋಪ:ಇಜಾರಿಲಕಮಾಪುರ ಗ್ರಾಮದ ಸರ್ವೆ ನಂ.27ರಲ್ಲಿ ನಿವೇಶನಗಳನ್ನು ಖರೀದಿಸಿ, ನಿಯಮಾನುಸಾರ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಮನೆಗಳನ್ನು ಕಟ್ಟಿದ್ದೇವೆ. ರಾಜಕೀಯ ದ್ವೇಷವನ್ನು ಸಾಧಿಸಲು ಮತ್ತು ಹೆಸರನ್ನು ತೇಜೋವಧೆ ಮಾಡುವ ದುರುದ್ದೇಶದಿಂದ ನೋಟಿಸ್ ಕೊಡಿಸಲಾಗಿದೆ. ಈ ನೋಟಿಸ್‌ ಕಾನೂನುಬಾಹಿರವಾಗಿದ್ದು, ರದ್ದುಪಡಿಸಬೇಕು ಎಂದು ರುದ್ರಪ್ಪ ಲಮಾಣಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ತಡೆಯಾಜ್ಞೆ:ರುದ್ರಪ್ಪ ಲಮಾಣಿ ಸಲ್ಲಿಸಿರುವ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಪ್ರಶ್ನಿತ ನೋಟಿಸ್‌ಗೆ ಯಾವುದೇ ಉಲ್ಲೇಖವಿರುವುದಿಲ್ಲ. ರಾಜಕಾಲುವೆಯು ಸರ್ಕಾರಿ ‘ಬ’ ಖರಾಬು ಜಮೀನಾಗಿದ್ದು, ಅಳತೆ ಮಾಡಿದ ಬಗ್ಗೆ ಮಾಹಿತಿಯಾಗಲೀ, ಯಾವ ನಿಯಮದಡಿ ಹಾಗೂ ಯಾರ ಆದೇಶದ ಮೇರೆಗೆ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವುದರ ಕುರಿತು ನೋಟಿಸ್‌ನಲ್ಲಿ ವಿವರಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಇಜಾರಿಲಕಮಾಪುರದ ಸರ್ವೆ ನಂ.27, ಪ್ಲಾಟ್‌ ನಂ.67 ಹಾಗೂ 50ಕ್ಕೆ ಸಂಬಂಧಿಸಿದಂತೆ, ಪೌರಾಯುಕ್ತರು ನೀಡಿದ ನೋಟಿಸ್‌ಗೆ ಮುಂದಿನ ಆದೇಶ ಆಗುವವರೆಗೆ ಪ್ರಾದೇಶಿಕ ಆಯುಕ್ತರು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಡಿ.10ರಂದು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT