ಶುಕ್ರವಾರ, ಮಾರ್ಚ್ 31, 2023
31 °C
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಓಎಂಆರ್‌ ಶೀಟ್‌ ಬಳಕೆ ಬಗ್ಗೆ ತರಬೇತಿ: ಜಿಲ್ಲಾ ಮಟ್ಟದಲ್ಲಿ ‘ಪೂರ್ವಭಾವಿ ಪರೀಕ್ಷೆ’

ಹಾವೇರಿ: ಜಿಲ್ಲೆಗೆ ‘ಎ’ ಗ್ರೇಡ್‌ ಪಡೆಯಲು ಸಕಲ ಸಿದ್ಧತೆ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಹಾವೇರಿ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥಿತವಾಗಿ ಮತ್ತು ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ. ಈ ಬಾರಿ ಜಿಲ್ಲೆಯು ‘ಎ’ ಗ್ರೇಡ್‌ ಪಡೆಯಲೇಬೇಕು ಎಂದು ವಿನೂತನ ಕ್ರಮಗಳನ್ನು ಕೈಗೊಂಡಿದೆ. 

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 2018ರಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲಿ 25ನೇ ಸ್ಥಾನ ಗಳಿಸಿತ್ತು. 2019ರಲ್ಲಿ 19ನೇ ಸ್ಥಾನಕ್ಕೆ ಏರಿಕೆಯಾಗಿತ್ತು. ಆದರೆ, 2020ರಲ್ಲಿ ಜಿಲ್ಲೆಗಳಿಗೆ ‘ಗ್ರೇಡ್‌ವಾರು ಫಲಿತಾಂಶ’ ನೀಡಿದ ಪರಿಣಾಮ ‘ಸಿ’ ಗ್ರೇಡ್‌ ಸಿಕ್ಕಿತ್ತು. ಇದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ತೀವ್ರ ನಿರಾಸೆಗೊಂಡಿದ್ದರು. 

ಜಿಲ್ಲೆಯಲ್ಲಿ 405 ಪ್ರೌಢಶಾಲೆಗಳಿದ್ದು, 21,848 ಹೊಸ ಪರೀಕ್ಷಾರ್ಥಿಗಳು ಹಾಗೂ 2,241 ಖಾಸಗಿ ಮತ್ತು ಪುನರಾವರ್ತಿತ ಪರೀಕ್ಷಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 

ಕೊರೊನಾ ಸೋಂಕು ಹಿನ್ನೆಲೆಯಲ್ಲಿ, ಈ ವರ್ಷ 6 ದಿನಗಳ ಬದಲಾಗಿ ಎರಡೇ ದಿನ ಪರೀಕ್ಷೆ ನಡೆಯುತ್ತಿದೆ. ಜತೆಗೆ ಪರೀಕ್ಷಾ ವಿಧಾನದಲ್ಲೂ ಬದಲಾವಣೆಯಾಗಿದೆ. ‘ಬಹು ಆಯ್ಕೆ ಪ್ರಶ್ನೆ’ ಮಾದರಿಯಲ್ಲಿ ವಿಷಯವಾರು ಗರಿಷ್ಠ 40 ಅಂಕಗಳಿಗೆ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಒಂದೇ ದಿನ 3 ವಿಷಯಗಳ ಪರೀಕ್ಷೆ ಬರೆಯಬೇಕಿರುವುದರಿಂದ, 3 ವರ್ಣಗಳ ಓಎಂಆರ್‌ ಶೀಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.  

ಪೂರ್ವಭಾವಿ ಪರೀಕ್ಷೆ: ಜಿಲ್ಲೆಯ 24,089 ವಿದ್ಯಾರ್ಥಿಗಳ ಕಲಿಕೆಯ ದೃಢೀಕರಣಕ್ಕಾಗಿ ಹಾಗೂ ‘ಹೊಸ ಪರೀಕ್ಷಾ ಕ್ರಮ’ಕ್ಕೆ ಅಣಿಗೊಳಿಸಲು ಜಿಲ್ಲಾ ಮಟ್ಟದ ‘ಪೂರ್ವಭಾವಿ ಪರೀಕ್ಷೆ’ಯನ್ನು ಜುಲೈ 5 ಮತ್ತು ಜುಲೈ 8ರಂದು ಹಮ್ಮಿಕೊಳ್ಳಲಾಗಿದೆ. ಓಎಂಆರ್‌ ಶೀಟ್‌ನಲ್ಲಿ ತಪ್ಪಿಲ್ಲದಂತೆ ಉತ್ತರಗಳನ್ನು ಗುರುತು (ಶೇಡ್‌) ಮಾಡುವ ಬಗ್ಗೆ ರೂಢಿ ಮಾಡಿಸಲು ಜಿಲ್ಲಾಡಳಿತದ ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕರ ಮೂಲಕ ಓಎಂಆರ್‌ ಶೀಟ್‌ ವಿತರಿಸಲಾಗಿದೆ. 

‘ಪರೀಕ್ಷಾ ಮಂಡಳಿಯ ಮಾದರಿಯಲ್ಲೇ ಪ್ರಶ್ನೆಪತ್ರಿಕೆಗಳನ್ನು ವೇಳಾಪಟ್ಟಿ ಪ್ರಕಾರ ಮುಖ್ಯಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಹಾಗೂ ವಿಷಯ ಶಿಕ್ಷಕರ ಗುಂಪುಗಳಿಗೆ ಜಿಲ್ಲಾ ಕಚೇರಿಯಿಂದ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಓಎಂಆರ್‌ ಶೀಟ್‌ಗಳಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ. ಉತ್ತರ ಪತ್ರಿಕೆಗಳನ್ನು ಶಾಲಾ ಹಂತದಲ್ಲಿ ವಿಷಯ ಶಿಕ್ಷಕರು ಪರಿಶೀಲಿಸಿ, ಓಎಂಆರ್‌ ಶೀಟ್‌ನಲ್ಲಿ ಶೇಡ್‌ ಮಾಡುವಲ್ಲಿ ಆಗಿರುವ ದೋಷಗಳನ್ನು ಪತ್ತೆ ಹಚ್ಚಿ, ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಜತೆಗೆ ಅಂಕಗಳನ್ನು ನೀಡಿ, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲಿದ್ದಾರೆ’ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಮಂಜಪ್ಪ ಆರ್‌. ತಿಳಿಸಿದರು.

‘ಸಿಲಬಸ್‌’ ಪೂರ್ಣ:

‘ಡಿಸೆಂಬರ್‌ ಆರಂಭದಿಂದಲೇ ಆನ್‌ಲೈನ್‌ ತರಗತಿಗಳನ್ನು ನಡೆಸಿ, ಏಪ್ರಿಲ್‌ ವೇಳೆಗೆ ಪೂರ್ಣ ಪಠ್ಯಗಳನ್ನು ಬೋಧಿಸಿದ್ದೇವೆ. ಜತೆಗೆ ನಿರಂತರವಾಗಿ ಆನ್‌ಲೈನ್‌ ಕ್ವಿಜ್‌, ಸಂವಾದಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆ ನೀಡಿದ್ದೇವೆ. ಕಳೆದ ಬಾರಿ ಇದ್ದ 75 ಪರೀಕ್ಷಾ ಕೇಂದ್ರಗಳನ್ನು, ಈ ಬಾರಿ 155ಕ್ಕೆ ಏರಿಕೆ ಮಾಡಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ 3 ಸಾವಿರ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ಮಾಹಿತಿ ನೀಡಿದರು. 

‘ಮಕ್ಳಳಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಬರೆಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್‌, ಆಶಾ ಕಾರ್ಯಕರ್ತೆ ಮತ್ತು ಅರೋಗ್ಯ ಸಹಾಯಕರು ಇದ್ದು, ಥರ್ಮಾ ಮೀಟರ್‌, ಪಲ್ಸ್‌ ಆಕ್ಸಿ ಮೀಟರ್‌ ಮೂಲಕ ತಪಾಸಣೆ ಮಾಡಲಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

***

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಜಿಲ್ಲಾಡಳಿತದಿಂದ ಗರಿಷ್ಠ ಆದ್ಯತೆ ನೀಡಲಾಗಿದೆ. ಮಾಸ್ಕ್‌, ಸ್ಯಾನಿಟೈಸರ್‌, ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ

– ಮೊಹಮ್ಮದ್‌ ರೋಶನ್‌, ಸಿಇಒ, ಜಿಲ್ಲಾ ಪಂಚಾಯಿತಿ

***

ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾಗಬಾರದು ಹಾಗೂ ಎಲ್ಲರೂ ಉತ್ತೀರ್ಣರಾಗಬೇಕು ಎಂದು ಸಕಲ ಪ್ರಯತ್ನ ನಡೆಸಿದ್ದೇವೆ

– ಅಂದಾನಪ್ಪ ವಡಗೇರಿ, ಡಿಡಿಪಿಐ

ಪರೀಕ್ಷಾ ಸಿಬ್ಬಂದಿ ಅಂಕಿಅಂಶ

4,764 ಕೊಠಡಿ ಮೇಲ್ವಿಚಾರಕರ ಸಂಖ್ಯೆ

2,371 ಅಗತ್ಯ ಇರುವ ಇತರ ಸಿಬ್ಬಂದಿ

7,135 ಒಟ್ಟು ಪರೀಕ್ಷಾ ಸಿಬ್ಬಂದಿ 

 

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ವಿವರ

ತಾಲ್ಲೂಕು;ಪರೀಕ್ಷಾ ಕೇಂದ್ರ;ವಿದ್ಯಾರ್ಥಿಗಳ ಸಂಖ್ಯೆ

ಬ್ಯಾಡಗಿ;14;2,286

ಹಾನಗಲ್‌;29;3,931

ಹಾವೇರಿ;29;4,191

ಹಿರೇಕೆರೂರ;18;3,282

ರಾಣೆಬೆನ್ನೂರು;28;4,568

ಸವಣೂರು;17;2,465

ಶಿಗ್ಗಾವಿ;20;3,366

ಒಟ್ಟು;155;24,089

ಯಾವಾಗ, ಯಾವ ಪರೀಕ್ಷೆ?

ಜುಲೈ 19, ಸೋಮವಾರ: ಗಣಿತ, ವಿಜ್ಞಾನ, ಸಮಾಜ ವಿಜ್ಞಾನ
ಜುಲೈ 22, ಗುರುವಾರ: ಭಾಷಾ ವಿಷಯಗಳು
ಪ್ರಥಮ ಭಾಷೆ: ಕನ್ನಡ, ಇಂಗ್ಲಿಷ್‌, ಉರ್ದು
ದ್ವಿತೀಯ ಭಾಷೆ: ಇಂಗ್ಲಿಷ್‌, ಕನ್ನಡ
ತೃತೀಯ ಭಾಷೆ: ಹಿಂದಿ, ಇಂಗ್ಲಿಷ್‌

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು