‘ಸರಕು’ ವಾಹನದಲ್ಲಿ ಪ್ರಯಾಣಕ್ಕೆ ಕ್ರಮ: ಎಸ್ಪಿ ಕೆ. ಪರಶುರಾಂ

ಶನಿವಾರ, ಮೇ 25, 2019
22 °C
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ

‘ಸರಕು’ ವಾಹನದಲ್ಲಿ ಪ್ರಯಾಣಕ್ಕೆ ಕ್ರಮ: ಎಸ್ಪಿ ಕೆ. ಪರಶುರಾಂ

Published:
Updated:
Prajavani

ಹಾವೇರಿ: ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕೊಂಡೊಯ್ದರೆ, ಪರವಾನಗಿ ರದ್ದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಯಾರನ್ನೂ ಸರಕು ಸಾಗಾಣಿಕೆ ವಾಹನದಲ್ಲಿ ಕರೆದೊಯ್ಯಬಾರದು. ಈ ಕುರಿತು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಪೋಷಕರು, ಕಾರ್ಮಿಕರು, ಚಾಲಕರು, ವಾಹನ ಮಾಲೀಕರು ಸೇರಿದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಮೇ 24ರಂದು ವಿಶೇಷ ಜಾಗೃತಿ ಸಭೆ ನಡೆಸಲಾಗುವುದು ಎಂದರು.

ಸಾರಿಗೆ ಇಲಾಖೆ ಜೊತೆ ಸೇರಿ ಕಾರ್ಯಾಚರಣೆ ನಡೆಸಿ, ವಾಹನಗಳ ಪರವಾನಗಿಗಳನ್ನು ಅಮಾನತು ಅಥವಾ ರದ್ದುಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಇದೇ ರೀತಿಯಾಗಿ ಟ್ರ್ಯಾಕ್ಟರ್‌ಗಳಲ್ಲಿ ಪ್ರಯಾಣ, ರಸ್ತೆ ಮೇಲೆ ಕೃಷಿ ಒಕ್ಕಲು ಮಾಡುವುದರ ವಿರುದ್ಧವೂ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು. ವಿದ್ಯಾರ್ಥಿಗಳನ್ನು ಕರೆದೊಯ್ಯವ ವಾಹನಗಳ ಸುರಕ್ಷತೆ ಬಗ್ಗೆಯೂ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದರು.

ಆಟೊ ಸೇರಿದಂತೆ ಯಾವುದೇ ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು, ಹೆಚ್ಚುವರಿ ಶುಲ್ಕ ವಸೂಲಿ, ಪರವಾನಗಿ (ಡಿಎಲ್) ಇಲ್ಲದೇ ವಾಹನ ಚಲಾಯಿಸುವುದನ್ನು ನಿರ್ಬಂಧಿಸಲಾಗುವುದು ಎಂದರು. 

ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಾಗಿರುವ ಗಾಂಧಿಪುರ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಿಗೆ ಹೆಚ್ಚುವರಿ ಸಾರಿಗೆ ಬಸ್ ಸೇವೆಯನ್ನು ಒದಗಿಸುವಂತೆ ಸೂಚಿಸಲಾಯಿತು. ಖಾಸಗಿ ಕಾಲೇಜು ಆವರಣದಲ್ಲಿ ಪರವಾನಗಿ ಇಲ್ಲದ ವಿದ್ಯಾರ್ಥಿಗಳಿಗೆ ವಾಹನ ತರಲು ಹಾಗೂ ನಿಲ್ಲಿಸಲು ಕಲ್ಪಿಸಬಾರದು ಎಂದರು.

‌ಗಾರ್ಮೆಂಟ್ಸ್ ಫ್ಯಾಕ್ಟರಿ, ಇಟ್ಟಂಗಿ ಭಟ್ಟಿಗಳು, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮತ್ತಿತರೆಡೆಗಳಲ್ಲಿ ಕಾರ್ಮಿಕರನ್ನು ಸರಕು ಸಾಗಾಣಿಕೆ ವಾಹನದಲ್ಲಿ ಕರೆದೊಯ್ಯುವುದನ್ನು ನಿರ್ಭಂಧಿಸುವುದು ಅಗತ್ಯವಾಗಿದೆ. ಈ ಕುರಿತು ಕಾರ್ಮಿಕ ಇಲಾಖೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ನಿಗದಿತ ದಿನಾಂಕದಂದು ಜನರು ಹೆಚ್ಚು ಬಂದು ಹೋಗುತ್ತಾರೆ. ಈ ಬಗ್ಗೆ ಸರ್ವೇ ಮಾಡಿ, ಜನರ ಸುರಕ್ಷಿತ ಪ್ರಯಾಣಕ್ಕಾಗಿ ಒತ್ತು ನೀಡಬೇಕು. ನಿಗದಿತ ದಿನದಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಬೇಕು ಎಂದರು.

ಅನಧಿಕೃತ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವುಗೊಳಿಸುವುದು, ರಸ್ತೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸುವುದು, ರಸ್ತೆ ವಿಭಜಕ ಫಲಕಗಳು, ರಸ್ತೆ ಪ್ರತಿಫಲನ ಅಳವಡಿಸುವ ಕುರಿತು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಸ ಸಂಗ್ರಹಣೆ ವಾಹನಗಳಲ್ಲಿ ಪೌರಕಾರ್ಮಿಕರ ಪ್ರಯಾಣ ನಿರ್ಭಂಧಿಸಲು ಪೌರಾಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು. ನಗರ ವ್ಯಾಪ್ತಿಯೊಳಗೆ ಸಿ.ಸಿ. ಟಿವಿ ಅಳಡಿಸಬೇಕು. ಸಂಚಾರ ಫಲಕ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಹೋಟೆಲ್ ಹಾಗೂ ಡಾಬಾಗಳಲ್ಲಿ ಅನಧಿಕೃತ ಮದ್ಯ ಮಾರಾಟ ಹಾಗೂ ಮದ್ಯ ಸೇವನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಅಪಘಾತದ ಸಂದರ್ಭ ತುರ್ತು ಸ್ಪಂದನೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಕಾಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ ಮತ್ತಿತರ ಇಲಾಖಾ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !