ಸಿದ್ದು ಆರ್.ಜಿ.ಹಳ್ಳಿ
ಹಾವೇರಿ: ಬಡಮಕ್ಕಳ ಪಾಲಿಗೆ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ, ಮೂಲಸೌಕರ್ಯ ಕೊರತೆ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಾಲಾ ಕೊಠಡಿಗಳ ದುರಸ್ತಿ ಮತ್ತು ನಿರ್ಮಾಣದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇದರಿಂದ ಸೋರುವ ಮತ್ತು ಕುಸಿಯುವ ಕಟ್ಟಡಗಳಲ್ಲಿ ಮಕ್ಕಳ ಕಲಿಕೆ ಸಾಗುತ್ತಿದೆ.
ಮಳೆ-ಗಾಳಿಗೆ ಹೆಂಚು– ತಗಡು ಹಾರಿ ಹೋಗಿರುವುದು, ಗೋಡೆಗಳು ಬಿರುಕು ಬಿಟ್ಟಿರುವುದು, ಚಾವಣಿಯ ಸಿಮೆಂಟ್ ಉದುರುತ್ತಿರುವುದು, ಕಾಂಪೌಂಡ್ ಹಾಳಾಗಿರುವುದು, ಮಳೆ ಬಂದರೆ ಕಟ್ಟಡ ಸೋರುತ್ತಿರುವುದು... ಹೀಗೆ ಜಿಲ್ಲೆಯಲ್ಲಿ ನೂರಾರು ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಮಳೆಗಾಲ ಬಂದರೂ ಕೊಠಡಿಗಳ ದುರಸ್ತಿ ಮತ್ತು ಮರು ನಿರ್ಮಾಣ ಕಾರ್ಯ ಪೂರ್ಣಗೊಳ್ಳದಿರುವುದು ಪೋಷಕರಲ್ಲಿ ತೀವ್ರ ಆತಂಕ ತಂದಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಸುಮಾರು 1.60 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 1,160 ಪ್ರಾಥಮಿಕ ಹಾಗೂ 141 ಪ್ರೌಢಶಾಲೆಗಳು ಸೇರಿದಂತೆ 1301 ಶಾಲೆಗಳಿವೆ. ಇವುಗಳಲ್ಲಿ ಒಟ್ಟು 7,761 ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಕೆಲವು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ತರಗತಿ ಕೊಠಡಿಗಳ ಕೊರತೆ ಎದುರಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ತೊಡಕಾಗಿದೆ.
ಶಿಥಿಲಾವಸ್ಥೆಯಲ್ಲಿ ಕೊಠಡಿ: ಜಿಲ್ಲೆಯ 7,761 ತರಗತಿ ಕೊಠಡಿಗಳ ಪೈಕಿ 5,196 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ ಸುಮಾರು ಎರಡೂವರೆ ಸಾವಿರ ಕೊಠಡಿಗಳು ಸಣ್ಣಪುಟ್ಟ ದುರಸ್ತಿ, ದೊಡ್ಡ ಮಟ್ಟದ ರಿಪೇರಿಗೆ ಕಾಯುತ್ತಿವೆ. ಅವುಗಳಲ್ಲಿ ಕಳೆದ ವರ್ಷ ಎನ್‌ಡಿಆರ್‌ಎಫ್, ವಿವೇಕ ಯೋಜನೆ, ಜಿಪಂ ಸೇರಿದಂತೆ ವಿವಿಧ ಯೋಜನೆಗಳಲ್ಲಿ 960 ಶಾಲೆಗಳಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಮಳೆಗಾಲ ಆರಂಭವಾಗಿದ್ದರೂ ಇನ್ನೂ ಶಾಲೆಗಳ ದುರಸ್ತಿ ಕಾಮಗಾರಿ ಮುಗಿಯದ ಕಾರಣ ಕೊಠಡಿಗಳ ಕೊರತೆ ಕಾಡುತ್ತಿದೆ. ಎರಡು ಮೂರು ತರಗತಿಗಳ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುವ ದೃಶ್ಯಗಳು ಕಂಡು ಬರುತ್ತಿವೆ. ಇನ್ನೂ ಕೆಲವು ಕಡೆ ಕೊಠಡಿಗಳ ಕೊರತೆಯಿಂದ ಶಾಲೆಗಳ ಆವರಣದಲ್ಲಿ ಮತ್ತು ಸಮುದಾಯ ಭವನ, ದೇವಸ್ಥಾನಗಳ ಪ್ರಾಂಗಣದಲ್ಲಿ ಪಾಠ ಮಾಡಬೇಕಾದ ದುಸ್ಥಿತಿ ಎದುರಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಕಟ್ಟಿದ ವರ್ಷದಿಂದಲೇ ಬಿರುಕು ಬಿಟ್ಟು ಅವು ಕೂಡ ಸೋರುವಂತಾಗಿವೆ. ಕೆಲವು ಶಾಲೆಗಳಲ್ಲಿ ಸಿಮೆಂಟ್ ತುಣುಕುಗಳು ಮಕ್ಕಳ ತಲೆಮೇಲೆ ಬೀಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಅಂಥ ಅಪಾಯಕಾರಿ ಕಟ್ಟಡಗಳಲ್ಲೇ ಅನಿವಾರ್ಯವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.
250 ಕೊಠಡಿಗಳಿಗೆ ಬೇಡಿಕೆ:2023-24ನೇ ಶೈಕ್ಷಣಿಕ ಸಾಲಿಗೆ 250 ಕೊಠಡಿ ನಿರ್ಮಾಣಕ್ಕೆ, 350 ಶಾಲೆಗಳ 600 ಕೊಠಡಿ ದುರಸ್ತಿಗೆ ಶಿಕ್ಷಣ ಇಲಾಖೆ ಪ್ರಸ್ತಾವ ಸಲ್ಲಿಸಿದೆ. 638 ಶಾಲೆಗಳಿಗೆ ಬೆಂಚ್, ಡೆಸ್ಕ್ ಸೇರಿದಂತೆ 5000 ಪೀಠೋಪಕರಣ ಅಗತ್ಯವಿದೆ. 250 ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 250 ಅಡುಗೆ ಕೋಣೆ ನಿರ್ಮಾಣಕ್ಕೂ ಹಾವೇರಿ ಶಿಕ್ಷಣ ಇಲಾಖೆಯಿಂದ ಬೇಡಿಕೆ ಇಡಲಾಗಿದೆ.
ಮೂಲಸೌಕರ್ಯಕ್ಕೆ ಆಗ್ರಹ: ‘ಸರ್ಕಾರಿ ಶಾಲೆಗಳಿಗೆ ತರಗತಿ ಕೊಠಡಿಗಳು, ಶೌಚಾಲಯ, ಪೀಠೋಪಕರಣ, ಪಾಠೋಪಕರಣ, ಆಟದ ಮೈದಾನ, ಶುದ್ಧ ಕುಡಿಯವ ನೀರು ಸೌಲಭ್ಯಗಳನ್ನು ಕಲ್ಪಿಸಬೇಕು ಮತ್ತು ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ನೇಮಿಸಿದರೆ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಕೊಟ್ಟು ಓದಿಸಲು ಬಡ ಮಧ್ಯಮ ವರ್ಗದ ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಒತ್ತಾಯಿಸಿದ್ದಾರೆ.
ಸಣ್ಣಪುಟ್ಟ ದುರಸ್ತಿ ಮರು ನಿರ್ಮಾಣ ಮಾಡಬೇಕಾದ ಕೊಠಡಿಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಶಿಥಿಲಾವಸ್ಥೆ ಇರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿದ್ದೇನೆಜಗದೀಶ್ವರ ಡಿಡಿಪಿಐ ಹಾವೇರಿ
ಸಣ್ಣಪುಟ್ಟ ದುರಸ್ತಿ ಮರು ನಿರ್ಮಾಣ ಮಾಡಬೇಕಾದ ಕೊಠಡಿಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಶಿಥಿಲಾವಸ್ಥೆ ಇರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿದ್ದೇನೆ – ಜಗದೀಶ್ವರ ಡಿಡಿಪಿಐ ಹಾವೇರಿ
ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ! 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ ಪ್ರವಾಹದಿಂದ ಹಾವೇರಿ ಜಿಲ್ಲೆಯ ನೂರಾರು ಶಾಲೆಗಳಿಗೆ ಹಾನಿಯಾಗಿತ್ತು. ಎನ್‌ಡಿಆರ್‌ಎಫ್ ಯೋಜನೆಯಲ್ಲಿ ₹13.3 ಕೋಟಿ ಅನುದಾನ ಮಂಜೂರಾಗಿದ್ದು 339 ಶಾಲೆಗಳಲ್ಲಿ 753 ಕೊಠಡಿಗಳ ಕಾಮಗಾರಿಯನ್ನು ಪಿ.ಆರ್.ಇ.ಡಿ ಕೈಗೆತ್ತಿಕೊಂಡಿದೆ. ಇದುವರೆಗೆ ಒಂದು ಕೊಠಡಿಯ ದುರಸ್ತಿ ಕಾರ್ಯವೂ ಪೂರ್ಣಗೊಂಡಿಲ್ಲ. 2022–23ನೇ ಸಾಲಿಗೆ 155 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ತುರ್ತು ಕೊಠಡಿ ದುರಸ್ತಿ/ನಿರ್ಮಾಣ ಕಾಮಗಾರಿಯನ್ನು ಪಿಆರ್‌ಇಡಿಗೆ ವಹಿಸಲಾಗಿದೆ. ₹1.80 ಕೋಟಿ ವೆಚ್ಚದಲ್ಲಿ ಇದುವರೆಗೆ 14 ಕೊಠಡಿಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಉಳಿದವು ತಳಪಾಯ ಮತ್ತು ಲಿಂಟಲ್ ಹಂತದಲ್ಲಿವೆ. ರಾಜ್ಯವಲಯ ಮುಂದುವರಿದ ವಿವೇಕ ಯೋಜನೆಯಡಿ ₹21 ಕೋಟಿ ವೆಚ್ಚದಲ್ಲಿ 147 ಶಾಲೆಗಳ 197 ಕೊಠಡಿಗಳ ನಿರ್ಮಾಣದ ಜವಾಬ್ದಾರಿಯನ್ನು ಪಿ.ಆರ್.ಇ.ಡಿ ಮತ್ತು ಕೆ.ಆರ್.ಐ.ಡಿ.ಎಲ್‌ಗೆ ವಹಿಸಲಾಗಿದೆ. 129 ಕೊಠಡಿಗಳು ತಳಪಾಯ 27 ಕೊಠಡಿಗಳು ಲಿಂಟಲ್ ಮತ್ತು 37 ಕೊಠಡಿಗಳು ಚಾವಣಿ ಹಂತದಲ್ಲಿವೆ. ಇನ್ನೂ ಒಂದು ಕೊಠಡಿಯೂ ಪೂರ್ಣಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.