ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಬಯಲಿನಲ್ಲೇ ಮಕ್ಕಳ ಆಟ–ಪಾಠ!

ಅತಿವೃಷ್ಟಿಗೆ ಕುಸಿದು ಬಿದ್ದ ಶಾಲೆಯ ಕೊಠಡಿಗಳು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಲಕ್ಕಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳು ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಶಿಥಿಲಗೊಂಡಿವೆ. ಹೀಗಾಗಿ ಶಾಲೆಯ ಮಕ್ಕಳಿಗೆ ಮರದ ನೆರಳು ಮತ್ತು ದ್ಯಾಮವ್ವನ ಗುಡಿಯೇ ಆಶ್ರಯತಾಣವಾಗಿದೆ.

ಇಲ್ಲಿನ ಮಕ್ಕಳು ನಿತ್ಯ ಮೈದಾನದಲ್ಲಿ, ಹತ್ತಿರದ ದ್ಯಾಮವ್ವನ ಗುಡಿಯ ಆವರಣದಲ್ಲೇ ಆಟ–ಪಾಠ ಮತ್ತು ಊಟವನ್ನು ಮಾಡುತ್ತಿದ್ದಾರೆ. ಒಟ್ಟು ಆರು ಕೊಠಡಿಗಳಲ್ಲಿ ಎರಡು ಕೊಠಡಿ ಮಾತ್ರ ಸುಸ್ಥಿಯಲ್ಲಿವೆ.ಒಂದು ಕೊಠಡಿ ಕಚೇರಿ ಕೆಲಸಕ್ಕಾಗಿ ಮತ್ತು ಇನ್ನೊಂದು ಬಿಸಿಯೂಟದ ಆಹಾರ ಸಾಮಗ್ರಿಗಳ ಸಂಗ್ರಹಕ್ಕಾಗಿ ಬಳಕೆ ಮಾಡಲಾಗುತ್ತಿದೆ.ಇಷ್ಟಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕಡೆ ಗಮನಿಸಿ ಶಾಲಾ ಕಟ್ಟಡಕ್ಕೆ ವ್ಯವಸ್ಥೆ ಕಲ್ಪಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

‘ಲಕ್ಕಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಗಳು ನಡೆಯುತ್ತಿದ್ದು, ಅದರಲ್ಲಿ 132 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಐವರು ಶಿಕ್ಷಕರಿದ್ದಾರೆ.ಮಕ್ಕಳಿಗೆ ಪಾಠ ಮಾಡಲು, ಬಿಸಿಯೂಟ ತಯಾರಿಸಲು ಕೊಠಡಿಗಳಿಲ್ಲದಾಗಿದೆ. ಹೀಗಾಗಿ ನಿತ್ಯ 1ರಿಂದ 3ನೇ ತರಗತಿ ನಲಿಕಲಿ ಮಕ್ಕಳ ಪಾಠವನ್ನು ದ್ಯಾಮವ್ವನ ಗುಡಿಯಲ್ಲಿ ಮಾಡಲಾಗುತ್ತಿದೆ. 4ರಿಂದ 7ನೇ ತರಗತಿ ಮಕ್ಕಳಿಗೆ ಮರದಡಿ ಪಾಠ ಮಾಡಲಾಗುತ್ತಿದೆ. ಮೈದಾನದಲ್ಲಿ ಬಿಸಿಯೂಟ ತಯಾಸಿರಿ ದ್ಯಾಮವ್ವನ ಗುಡಿಯಲ್ಲಿ ಮಕ್ಕಳಿಗೆ ನೀಡಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕ ಜಿ.ಎಂ.ಬೊಮ್ಮನಹಳ್ಳಿ ಹೇಳಿದರು.

ಮೈದಾನದಲ್ಲಿ ಪಾಠ ಬೋಧನೆ ಮಾಡುವಾಗ ಮಕ್ಕಳಲ್ಲಿ ವಿಷಯದಲ್ಲಿ ಏಕಾಗ್ರತೆ ಭಂಗವಾಗುತ್ತದೆ. ಮಳೆ,ಗಾಳಿ,ಚಳಿ ಮತ್ತು ದೂಳಿನಿಂದ ಮಕ್ಕಳಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಗುಡಿಯಲ್ಲಿ ಪಾಠ ಬೋಧನೆ ಮಾಡುವಾಗ ಗುಡಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಅಲ್ಲಿಯೂ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಮೈದಾನದಲ್ಲಿ ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಗಾಳಿಗೆ ದೂಳು, ಕಸಕಡ್ಡಿ ಹಾರಿ ಬಂದು ಅಡುಗೆ ಪದಾರ್ಥದಲ್ಲಿ ಬೀಳುತ್ತಿವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಉಂಟಾಗಬಹುದು ಎಂಬ ಭಯ ಶಿಕ್ಷಕರನ್ನು ಕಾಡುತ್ತಿದೆ.

ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಹಾನಿಯಾದ ಫಲಾನುಭವಿಗಳಿಗೆ ಸರ್ಕಾರ ಪರಿಹಾರ ಧನ ನೀಡುತ್ತಿದೆ. ಆದರೆ, ನಮ್ಮೂರ ಸರ್ಕಾರಿ ಶಾಲಾ ಕಟ್ಟಡಗಳು ಬಿದ್ದು, ನೂರಾರು ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದರೂ ಪರಿಹಾರ ಸಿಕ್ಕಿಲ್ಲ.

‘ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ 5-6 ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣ ಮೇಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ, ಶಾಲಾ ಕಟ್ಟಡ ಕಾಮಗಾರಿ ಆರಂಭಿಸುವ ಮೂಲಕ ಮಕ್ಕಳಿಗೆ ಸಂಪೂರ್ಣ ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮಕ್ಕಳೊಂದಿಗೆ ಗ್ರಾಮಸ್ಥರು ಸೇರಿಕೊಂಡು ಶಿಕ್ಷಣ ಇಲಾಖೆ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಜಾಡಗೇರ ಹೇಳಿದರು.

ನಗರ, ಪಟ್ಟಣಗಳಿಗಿಂತ ನಮ್ಮೂರ ಶಾಲೆ ಶಿಕ್ಷಣದ ಗುಣಮಟ್ಟ ಚನ್ನಾಗಿದೆ. ಆದರೆ ಸರ್ಕಾರ ಶಾಲಾ ಕಟ್ಟಡ, ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯತೆ ತೋರಿದೆ. ಅದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥ ಶಿವಪುತ್ರಪ್ಪ ಗೊರವರ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT