ಬುಧವಾರ, ಸೆಪ್ಟೆಂಬರ್ 29, 2021
20 °C
ಮಾಸ್ಕ್ ತಯಾರಿಸಿ ಉಚಿತ ವಿತರಣೆ

ಇಳಿವಯಸ್ಸಿನಲ್ಲೂ ಸೇವೆಯ ಹಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ವಿದ್ಯಾನಗರ ಪಶ್ಚಿಮ ಬಡಾವಣೆಯ ನಿವಾಸಿ 80 ವರ್ಷದ ಪದ್ಮಾವತಿಬಾಯಿ ನಾಡಿಗೇರ ಅವರು ಹೊಲಿಗೆ ಯಂತ್ರದ ಮೂಲಕ ಮಾಸ್ಕ್‌ (ಮುಖಗವಸು) ತಯಾರಿಸಿ, ಬಡವರಿಗೆ ಉಚಿತವಾಗಿ ವಿತರಿಸುವ ಸೇವೆ ಮಾಡುತ್ತಿದ್ದಾರೆ.  

ಮಾರುಕಟ್ಟೆಯಲ್ಲಿ ಮಾಸ್ಕ್ ತೀವ್ರ ಅಭಾವ ಇದ್ದ ಕಾರಣ, ಅಗಡಿ ಆನಂದವನಮಠದ ಗುರುದತ್ತ ಸ್ವಾಮೀಜಿ ಅವರು ಮಾಸ್ಕ್‌ ತಯಾರಿಸಿಕೊಡಲು ಕೋರಿದ್ದರು. ಹೀಗಾಗಿ ನಿತ್ಯ 35ರಂತೆ ಒಟ್ಟು 300 ಮಾಸ್ಕ್‌ಗಳನ್ನು ಪದ್ಮಾವತಿಬಾಯಿ ಉಚಿತವಾಗಿ ಹೊಲಿದು ಕೊಟ್ಟಿದ್ದಾರೆ. ಈ ಮಾಸ್ಕ್‌ಗಳನ್ನು ಬಡವರಿಗೆ ಮತ್ತು ಮಠದಲ್ಲಿ ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 

‘ಮಾರ್ಚ್‌ 27ರಿಂದ ಮಾಸ್ಕ್‌ ತಯಾರಿಸುತ್ತಿದ್ದು, ಕಾರ್ಮಿಕರಿಗೆ, ನಿರ್ಗತಿಕರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಲಾಕ್‌ಡೌನ್‌ ಮುಗಿಯುವವರೆಗೂ ಈ ಸೇವೆ ನಿರಂತರವಾಗಿ ಮುಂದುವರಿಯುತ್ತದೆ. ಸುಡುಗಾಡು ಸಿದ್ಧ ಕುಟುಂಬಗಳಿಗೆ, ಕುರಿ ಮೇಯಿಸುವವರಿಗೆ ಉಚಿತವಾಗಿ 70 ಮಾಸ್ಕ್‌ ಅನ್ನು ಕೊಟ್ಟಿದ್ದೇವೆ. ಅಷ್ಟೇ ಅಲ್ಲದೆ, 3 ಸಾವಿರ ಪೇಪರ್‌ ಪ್ಲೇಟ್‌ಗಳನ್ನು ತಯಾರಿಸಿ, ಬಡವರಿಗೆ ಉಚಿತವಾಗಿ ಊಟ ಹಂಚುವ ಸಂಘ–ಸಂಸ್ಥೆಗಳಿಗೆ ನೀಡಿದ್ದೇವೆ’ ಎಂದು ಪದ್ಮಾವತಿ ಬಾಯಿಯವರ ಪುತ್ರ ಪುಂಡಲೀಕ ನಾಡಿಗೇರ ಹೇಳಿದರು.  

‘ನನ್ನ ಪತಿ ದಾನ ಧರ್ಮ ಮಾಡುತ್ತಿದ್ದರು. ಅವರ ಗುಣ ನನ್ನ ಮಕ್ಕಳಿಗೂ ಬಂದಿದೆ. ಟೇಲರಿಂಗ್‌ ವೃತ್ತಿ ಮಾಡಿಯೇ ನನ್ನ ಮಕ್ಕಳನ್ನು ಸಾಕಿ ಬೆಳೆಸಿದ್ದೇನೆ. ಈಗ ಮಕ್ಕಳು ಸ್ವಂತ ಉದ್ಯಮ ನಡೆಸುತ್ತಾ ಚೆನ್ನಾಗಿದ್ದಾರೆ. ಹೊಲಿಗೆ ವೃತ್ತಿ ಬಿಟ್ಟು 20 ವರ್ಷ ಆಗಿತ್ತು. ಮಾರುಕಟ್ಟೆಯಲ್ಲಿ ಮಾಸ್ಕ್‌ ಸಿಗುತ್ತಿಲ್ಲ ಎಂಬ ಕಾರಣದಿಂದ ಉಚಿತವಾಗಿ ಮಾಸ್ಕ್ ಹೊಲಿದು ಕೊಡಲು ಮುಂದಾದೆ. ಬಡವರಿಗೆ ನನ್ನದೊಂದು ಅಳಿಲು ಸೇವೆ’ ಎಂದು ಪದ್ಮಾವತಿಬಾಯಿ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು