ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ಹಾವೇರಿ: ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಮಂತ್ರೋಡಿ ಗ್ರಾಮದ ಆರೋಪಿ ನಿಂಗರಾಜ ಶಿವಾನಂದ ಹರ್ಲಾಪುರ ಎಂಬಾತನಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹1.51 ಲಕ್ಷ ದಂಡ ವಿಧಿಸಿ ವಿಶೇಷ ಸೆಷನ್ಸ್ ನ್ಯಾಯಾಲಯದ (ಶೀಘ್ರಗತಿ ನ್ಯಾಯಾಲಯ-1) ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ಆದೇಶ ನೀಡಿದ್ದಾರೆ.
ಆರೋಪಿ ನಿಂಗರಾಜ ಶಿವಾನಂದ ಹರ್ಲಾಪುರ ಈತನು ಬಾಲಕಿಯನ್ನು ಮೋಟಾರ್ ಸೈಕಲ್‍ನಲ್ಲಿ ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮದುವೆಯಾಗುತ್ತೇನೆ ಎಂದು ಬಾಲಕಿಯರ ಇಚ್ಛೆಗೆ ವಿರುದ್ಧವಾಗಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಕ್ಕಾಗಿ ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸವಣೂರ ವೃತ್ತ ತನಿಖಾಧಿಕಾರಿ ಸಿಪಿಐ ನಾಗರಾಜ ಎಚ್.ಮೈಲಾರ ಅವರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಬಾಲಕಿಯ ಅಪಹರಣಕ್ಕೆ ದುಷ್ಪ್ರೇರಣೆ ನೀಡಿದ ಆರೋಪಿತರಾದ ಪ್ರಭು ಪರಶುರಾಮ ಕಣವಿಹೊಸೂರ ಹಾಗೂ ಫಕ್ಕೀರವ್ವ ಯಲ್ಲಪ್ಪ ಕಾರಡಗಿ ಇವರಿಗೆ 3 ವರ್ಷಗಳ ಕಾರಾವಾಸ ಶಿಕ್ಷೆ ಮತ್ತು ತಲಾ 20 ಸಾವಿರ ದಂಡ ವಿಧಿಸಿಸಲಾಗಿದೆ.
ದಂಡದ ಹಣದಲ್ಲಿ ನೊಂದ ಬಾಲಕಿಗೆ ₹1.50 ಲಕ್ಷ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಕರ್ನಾಟಕ ಸರ್ಕಾರ ₹4 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ಹಾಗೂ ವಿಜಯಕುಮಾರ ಶಂಕರಗೌಡ ಪಾಟೀಲ ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.