ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಿ: ಎಸ್‌ಎಫ್‌ಐ

Published 1 ಏಪ್ರಿಲ್ 2024, 6:59 IST
Last Updated 1 ಏಪ್ರಿಲ್ 2024, 6:59 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಪ್ರಮೋದ್ ಬಮ್ಮಾನಕಟ್ಟಿಗೆ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ್ ಜರಮಲ್ಲಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಒತ್ತಾಯಿಸಲಾಯಿತು. 

ದೇವಗಿರಿ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

ಹಾವೇರಿಯ ಸರ್ಕಾರಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಪ್ರಮೋದ್ ಬಮ್ಮಾನಕಟ್ಟಿ 2021-22ನೇ ಸಾಲಿಗೆ ದಾಖಲಾತಿ ಪಡೆದುಕೊಂಡಿದ್ದರು. ಪ್ರಥಮ ವರ್ಷ ಮುಗಿದ ನಂತರ 2022-23ನೇ ಸಾಲಿನಲ್ಲಿ ಅನಾರೋಗ್ಯದಿಂದ ದ್ವಿತೀಯ ವರ್ಷ ಕಣ್ಣಿನ ದೃಷ್ಟಿ ಕಡಿಮೆಯಾಗಿ ಶೇ 60 ಇರುವುದರಿಂದ ವೈದ್ಯರ ಸಲಹೆಯ ಮೇರೆಗೆ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಒಂದು ದಿನವೂ ಗೈರು ಹಾಜರಾಗದೆ ಪ್ರತಿನಿತ್ಯ ತರಗತಿಗಳು, ಪ್ರಯೋಗಾಲಯ ಅಭ್ಯಾಸ ಹಾಗೂ ಆಸ್ಪತ್ರೆ ಕರ್ತವ್ಯಕ್ಕೆ ಹಾಜರಾಗಿ ಉತ್ತಮ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಎರಡು ವರ್ಷ ಸುಮ್ಮನಿದ್ದ ಪ್ರಾಂಶುಪಾಲರು ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗೆ ದೃಷ್ಟಿ ದೋಷವಿದೆ ಎಂದು ದೂಷಿಸಿ, ಪ್ರವೇಶ ಪತ್ರ ಬಾರದಂತೆ ನೋಡಿಕೊಂಡಿದ್ದಾರೆ ಎಂದು ಎಸ್‌ಎಫ್‌ಐ ಮುಖಂಡರು ಹೇಳಿದರು. 

ದ್ವಿತೀಯ ಪಿಯುಸಿಯಲ್ಲಿ ಶೇ 75 ಅಂಕ ಗಳಿಸಿದ ವಿದ್ಯಾರ್ಥಿಗೆ 2021-21ನೇ ಸಾಲಿನಲ್ಲಿ ಸರ್ಕಾರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ಮಾಡಿಕೊಂಡ ಪ್ರಾಂಶುಪಾಲರು ದೃಷ್ಟಿದೋಷ ಗೊತ್ತಾದ ಮೇಲೂ ದ್ವಿತೀಯ ವರ್ಷಕ್ಕೆ ಪ್ರವೇಶಾತಿ ಶುಲ್ಕವನ್ನು ಕಟ್ಟಿಸಿಕೊಂಡು ಪರೀಕ್ಷಾ ಪ್ರವೇಶ ಪತ್ರ ನೀಡಿಲ್ಲ. ಆಸ್ಪತ್ರೆಯಲ್ಲಿ ಡ್ಯೂಟಿ ಮಾಡಿದ ಮಾಸಿಕ ಭತ್ಯೆಯೂ (ಸ್ಟೈಫಂಡ್) ಕೊಡದೆ ವಿದ್ಯಾರ್ಥಿ ಭವಿಷ್ಯವನ್ನು ಅತಂತ್ರ ಮಾಡಿ ವಿದ್ಯಾಭ್ಯಾಸದಿಂದ ಹೊರದೂಡುವ ವ್ಯವಸ್ಥೆಯನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ. 

ಮನವಿಪತ್ರ ಸ್ವೀಕರಿಸಿ, ಪ್ರಾಂಶುಪಾಲರು ಹಾಗೂ ಪ್ರಾಚಾರ್ಯರನ್ನು ವಿಚಾರಣೆ ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಚಂದ್ರು ಲಮಾಣಿ, ಮುತ್ತೇಶ ಹರಿಜನ, ಅನಿಲ ಕುಮಾರ್, ವಿದ್ಯಾರ್ಥಿ ಪ್ರಮೋದ್ ಬಮ್ಮಾನಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT