ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕುಶಲ ಕೂಲಿಕಾರ್ಮಿಕರಿಗೆ ಕೌಶಲ ತರಬೇತಿ, ಸ್ವಾವಲಂಬಿ ಬದುಕಿಗಾಗಿ ಹೈನುಗಾರಿಕೆ

ಸ್ವಾವಲಂಬಿ ಬದುಕಿಗಾಗಿ ಹೈನುಗಾರಿಕೆ ಟ್ರೈನಿಂಗ್‌; ಎರೆಹುಳು ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ
Last Updated 7 ಜನವರಿ 2022, 15:41 IST
ಅಕ್ಷರ ಗಾತ್ರ

ಹಾವೇರಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 100 ಮಾನವ ದಿನಗಳನ್ನು ಪೂರೈಸಿರುವ ಅಕುಶಲ ಕೂಲಿ ಕಾರ್ಮಿಕರು ಕೌಶಲ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವತ್ತ ದೃಢ ಹೆಜ್ಜೆ ಇಟ್ಟಿದ್ದಾರೆ.

ಕೃಷಿಯ ಉಪಕಸುಬಾದ ಹೈನುಗಾರಿಕೆ ಮತ್ತು ‘ರೈತನ ಮಿತ್ರ’ ಎನಿಸಿರುವ ಎರೆಹುಳು ಗೊಬ್ಬರ ತಯಾರಿಕೆ ಬಗ್ಗೆ ಉಚಿತವಾಗಿ 10 ದಿನಗಳ ತರಬೇತಿ ನೀಡಿ, ಸ್ವ–ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುತ್ತಿದೆ ಹಾವೇರಿ ತಾಲ್ಲೂಕಿನ ದೇವಗಿರಿಯ ಬ್ಯಾಂಕ್‌ ಆಫ್‌ ಬರೋಡಾದ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ (ಆರ್‌ಸೆಟಿ).

ನರೇಗಾ ಯೋಜನೆಯ ‘ಉನ್ನತಿ ತಂಡ’ದ ಆಯ್ದ 29 ಕೂಲಿ ಕಾರ್ಮಿಕರು ತರಬೇತಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 6 ಮಹಿಳೆಯರು ಮತ್ತು 23 ಪುರುಷರು ಇದ್ದಾರೆ. ಎಲ್ಲರಿಗೂ ಉಚಿತ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಾಯೋಗಿಕ ತರಬೇತಿಗೆ ಒತ್ತು:

‘ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಗೆ ಒತ್ತು ನೀಡಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಧಾನಗಳನ್ನು ಪರಿಚಯಿಸಿ, ಕೂಲಿ ಕಾರ್ಮಿಕರು ಆರ್ಥಿಕವಾಗಿ ಪ್ರಗತಿ ಸಾಧಿಸಲು ಕೌಶಲ ತರಬೇತಿ ನೀಡುತ್ತಿದ್ದೇವೆ. ದೇಸಿ ಹಸುಗಳ ಸಂರಕ್ಷಣೆಗೂ ಒತ್ತು ನೀಡಿದ್ದೇವೆ’ ಎನ್ನುತ್ತಾರೆ ಆರ್‌ಸೆಟಿ ಸಂಸ್ಥೆಯ ತರಬೇತುದಾರರಾದ ಮಂಜುಳಾ ಜೆ.

‘ಪಶುಗಳಿಗೆ ತಗಲುವ ರೋಗಗಳ ಹತೋಟಿ, ಮುನ್ನೆಚ್ಚರಿಕಾ ಕ್ರಮಗಳು, ಕೃತಕ ಗರ್ಭಧಾರಣೆ, ಪೌಷ್ಟಿಕ ಆಹಾರ, ಅಜೋಲಾ ಮೇವು ಬಳಕೆ, ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ, ಸಾವಯವ ಕೃಷಿ, ಜೀವಾಮೃತ ಮತ್ತು ಬೀಜಾಮೃತ ಮಾಹಿತಿ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡುತ್ತಿದ್ದೇವೆ’ ಎಂದು ಆರ್‌ಸೆಟಿ ಸಂಸ್ಥೆಯ ತರಬೇತುದಾರರಾದ ಶಾಂತಾ ಎಂ. ಮಾಹಿತಿ ನೀಡಿದರು.

60 ಬ್ಯಾಚ್‌ಗಳಿಗೆ ತರಬೇತಿ

‘ಸಮಯದ ನಿರ್ವಹಣೆ, ಬೇಸಿಕ್‌ ಇಂಗ್ಲಿಷ್‌, ಬೇಸಿಕ್‌ ಕಂಪ್ಯೂಟರ್‌, ಬ್ಯಾಂಕ್‌ ಕಾರ್ಯನಿರ್ವಹಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವ ಬಗ್ಗೆಯೂ ತಿಳಿವಳಿಕೆ ನೀಡುತ್ತಿದ್ದೇವೆ. ವರ್ಷಕ್ಕೆ 5 ಬ್ಯಾಚ್‌ಗಳಂತೆ, ಆರ್‌ಸೆಟಿಯಿಂದ 60ಕ್ಕೂ ಹೆಚ್ಚು ಬ್ಯಾಚ್‌ಗಳಿಗೆ ಹೈನುಗಾರಿಕೆ ತರಬೇತಿ ನೀಡಿದ್ದೇವೆ. ನಮ್ಮಲ್ಲಿ ತರಬೇತಿ ಪಡೆದವರು ಯಶಸ್ಸು ಗಳಿಸಿದ್ದಾರೆ’ ಎಂದು ಆರ್‌ಸೆಟಿ ನಿರ್ದೇಶಕ ಸಜಿತ್‌ ಎಸ್‌. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT