ಸೋಮವಾರ, ಜುಲೈ 26, 2021
26 °C
ಮೊಳಕೆ ಸಮಸ್ಯೆ: ಕೃಷಿ ಅಧಿಕಾರಿಗಳೊಂದಿಗೆ ಸಚಿವ ಬಿ.ಸಿ.ಪಾಟೀಲ ತುರ್ತು ಸಭೆ

ಸೋಯಾ ಬದಲು ಪರ್ಯಾಯ ಬೆಳೆಗೆ ಕೃಷಿ ಸಚಿವರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮೊಳಕೆ ಸಮಸ್ಯೆ ಎದುರಾಗಿರುವ ಕಾರಣ ಸೋಯಾಬಿನ್ ಬಿತ್ತನೆ ಬದಲು ಪರ್ಯಾಯ ಬೆಳೆ ಬೆಳೆಯಿರಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ರೈತರಿಗೆ ಸಲಹೆ ನೀಡಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮುಂಗಾರು ಸೋಯಾಬಿನ್‌ ಬಿತ್ತನೆ ಮೊಳಕೆ ಸಮಸ್ಯೆ ಹಿನ್ನೆಲೆಯಲ್ಲಿ ಕೃಷಿ ವಿವಿ ತಜ್ಞರು ಹಾಗೂ ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರ ತುರ್ತು ಸಭೆ ನಡೆಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪರ್ಯಾಯ ಕ್ರಮಗಳ ಕುರಿತು ಚರ್ಚಿಸಿದರು.

ಮೊಳಕೆ ಸಮಸ್ಯೆ ಇದ್ದರೆ ರೈತರಿಗೆ ಕಂಪನಿ ಹಾಗೂ ಪೂರೈಕೆದಾರರಿಂದ ಹೆಚ್ಚುವರಿ ಬೀಜ ಹಾಗೂ ಬಿತ್ತನೆ ವೆಚ್ಚವನ್ನು ಭರಿಸಬೇಕು. ಮೊಳಕೆ ಸಮಸ್ಯೆ ಕಂಡು ಬಂದರೂ ಸೋಯಾ ಬಿತ್ತನೆಗೆ ಶಿಫಾರಸು ಮಾಡುವ ಬದಲು ಮೆಕ್ಕೆಜೋಳ, ಶೇಂಗಾ, ಜೋಳದಂತಹ ಪರ್ಯಾಯ ಬೆಳೆಗೆ ರೈತರಿಗೆ ಮನವೊಲಿಸಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆಗುವ ನಷ್ಟ ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಚೀನಾ ದೇಶದ ಬೆಳೆ ಸೋಯಾ:

ಮೂಲತಃ ಸೋಯಾಬಿನ್ ಚೀನಾ ದೇಶದ ಬೆಳೆಯಾಗಿದೆ. ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಿಂದ ಹಾಗೂ ಕರ್ನಾಟಕ ಕೆಓಎಫ್‌ ಬೀಜ ನಿಗಮ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಬೀಜ ತರಿಸಲಾಗಿದೆ. ಕೆಲವೆಡೆ ಎತ್ತಿನ ಉಳಿಮೆ ಬಿತ್ತನೆ ಮಾಡಿದ ಕಡೆ ಉತ್ತಮ ಮೊಳಕೆ ಕಂಡುಬರುತ್ತದೆ. ಟ್ರ್ಯಾಕ್ಟರ್ ಮೂಲಕ ಆಳವಾದ ಉಳುಮೆ ಮಾಡಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆ ಇದೆ ಎಂದು ಮಾಹಿತಿ ನೀಡಿದರು.

ಮೊಳಕೆ ಪ್ರಮಾಣ ಶೇ 65:

ಸೋಯಾಬಿತ್ತನೆ ಬೀಜ ಪೂರೈಕೆಯಾಗುವುದು ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಿಂದ. ಬಿತ್ತನೆ ಬೀಜ ಸಂಸ್ಕರಿಸುವ ಸಂದರ್ಭದಲ್ಲಿ ಪ್ರವಾಹ ಉಂಟಾದ ಕಾರಣ ಕೇಂದ್ರ ಸರ್ಕಾರ ಸೋಯಾಬಿನ್ ಮೊಳಕೆಯೊಡೆಯುವ ಪ್ರಮಾಣ ಶೇ 65 ಎಂದು ಘೋಷಿಸಿದೆ. ಆದರೆ ಕೆಲವಡೆ ಉತ್ತಮ ಪ್ರಮಾಣದಲ್ಲಿ ಮೊಳಕೆಯೊಡೆದರೆ ಕೆಲವೆಡೆ ಶೇ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೊಳಕೆ ಬಂದಿದೆ. ರೈತರು ಪರ್ಯಾಯ ಬೀಜ ಕೇಳುತ್ತಿದ್ದಾರೆ. ಬಿತ್ತನೆ ವೆಚ್ಚವನ್ನು ತುಂಬಿಕೊಡಲು ಕೇಳುತ್ತಿದ್ದಾರೆ ಎಂದು ವಿವರಿಸಿದರು.

ಹಾವೇರಿ ಜಿಲ್ಲೆಯಲ್ಲಿ 8064 ಕ್ವಿಂಟಲ್ ಬೀಜ ಸರಬರಾಜಾಗಿದ್ದು, 7410 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಈ ಪೈಕಿ 1401 ಕ್ವಿಂಟಲ್ ಬೀಜವನ್ನು ರೈತರು ಹಿಂತಿರುಗಿಸಿದ್ದಾರೆ. 1434 ರೈತರ 942 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ ಎಂದು ತಿಳಿಸಿದರು. 

ಶಾಸಕ ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ರಮೇಶ ದೇಸಾಯಿ, ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಮಹದೇವ ಛಟ್ಟಿ, ಕೃಷಿ ಇಲಾಖೆ ಅಪರ ನಿರ್ದೇಶಕರಾದ ವೆಂಕಟರಾಮರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಹನುಮನಮಟ್ಟಿಯ ಹಿರಿಯ ವಿಜ್ಞಾನಿ ಡಾ.ಅಶೋಕ ಪಿ. ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು