ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳವಳ್ಳಿ | ಹದಗೆಟ್ಟ ರಸ್ತೆಯಲ್ಲಿ ಸಂಚಾರದ ಸರ್ಕಸ್‌

Published 31 ಜುಲೈ 2023, 4:30 IST
Last Updated 31 ಜುಲೈ 2023, 4:30 IST
ಅಕ್ಷರ ಗಾತ್ರ

ಮಾಲತೇಶ ಆರ್.

ತಿಳವಳ್ಳಿ: ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು, ಅಲ್ಲಲ್ಲಿ ಚದುರಿ ಬಿದ್ದ ಕಲ್ಲುಗಳು, ಕೆಸರಿನಿಂದ ಆವೃತವಾಗಿರುವ ರಸ್ತೆ, ಈ ರಸ್ತೆಯಲ್ಲಿ ಒಂದು ಸಲ ಸಂಚರಿಸಿದರೆ ನರಕಯಾತನೆಯ ಅನುಭವ. ಈ ದೃಶ್ಯಗಳು ಕಂಡು ಬಂದಿದ್ದು ತಿಳವಳ್ಳಿಯ ಹರ್ಡೀಕರ್‌ ಬಡಾವಣೆಯಿಂದ ಹಾವೇರಿ ಮತ್ತು ಬ್ಯಾಡಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ.

ಈ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ದುಃಸ್ಥಿತಿ ಕಂಡು ಹಿಡಿಶಾಪ ಹಾಕುತ್ತಿದ್ದಾರೆ. ಕನಿಷ್ಠ ಪಕ್ಷ ತಗ್ಗು ಗುಂಡಿಗಳಲ್ಲಿ ಒಂದಷ್ಟು ಮಣ್ಣು ಹಾಕಿ ಮುಚ್ಚಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸವು ನಡೆದಿದೆಯಾದರೂ ಅದು ಸರಿಯಾಗಿ ಕಲ್ಲು ಮಣ್ಣು ಹಾಕಲಾಗಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ. 

ರಸ್ತೆ ಮೇಲೆ ಸರ್ಕಸ್‌

ಇನ್ನು ದ್ವಿಚಕ್ರ ವಾಹನ ಸವಾರರ ಪ್ರಯಾಣವಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನಿತ್ಯ ಸರ್ಕಸ್ ಮಾಡುತ್ತಾ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ದಶಕಗಳಿಂದ ಈ ಭಾಗಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದರೂ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೇ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚರಂಡಿ ನೀರು ರಸ್ತೆ ಮೇಲೆ

ಈ ರಸ್ತೆ ಹದಗೆಡಲು ಮೂಲ ಕಾರಣ ಚರಂಡಿ ವ್ಯವಸ್ಥೆ. ಹರ್ಡೀಕರ್ ವೃತ್ತದಿಂದ ದೊಡ್ಡಕೆರೆವರೆಗೂ ನಿರ್ಮಿಸಿದ ಚರಂಡಿಯನ್ನು ಅಲ್ಲಿ ವಾಸಿಸುವ ಜನರು ಮತ್ತು ವ್ಯಾಪಾರಸ್ಥರು ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿಯುವ ಕಾರಣ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ.

ಇದರಿಂದ ಬೇಸತ್ತ ಸಾರ್ವಜನಿಕರು ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದರು. ಬಳಿಕ ಪಂಚಾಯ್ತಿಯವರು ಒಂದು ಕಡೆಯ ಚರಂಡಿಯನ್ನು ಜೆಸಿಬಿ ಮೂಲಕ ತೆಗೆಸಿದ ಚರಂಡಿಯನ್ನು ಮತ್ತೆ ಮುಚ್ಚಲಾಗಿದೆ. ಇನ್ನೊಂದು ಬದಿಯಲ್ಲೂ ಚರಂಡಿ ಇಲ್ಲದೇ ಇರುವುದರಿಂದ ಮತ್ತೆ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳು ಬಿದ್ದು ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

ವಾಹನ ಸವಾರರಿಗೆ ಸಂಕಷ್ಟ:

ಪ್ರತಿದಿನ ಶಾಲಾ ವಾಹನಗಳು, ಬಸ್ಸುಗಳು, ಶಾಲಾ– ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಾಗಿರುವುದರಿಂದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸುವುದೇ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ. ಜೀವವನ್ನು ಮುಷ್ಠಿಯಲ್ಲಿಟ್ಟುಕೊಂಡು ಪ್ರಯಾಣಿಸುವಂತೆ ಆಗಿದೆ. ಮಳೆಗಾಲವಾದ್ದರಿಂದ ಭಾರಿ ಗಾತ್ರದ ವಾಹನಗಳು ಗುಂಡಿಗಳನ್ನು ನೋಡದೇ ವೇಗವಾಗಿ ಚಲಿಸುತ್ತಿರುತ್ತವೆ. ಇದರಿಂದ ರಸ್ತೆ ಗುಂಡಿಗಳಲ್ಲಿ ನಿಂತ ನೀರು ಪಾದಚಾರಿಗಳಿಗೆ ಸಿಡಿಯುತ್ತಿರುವುದರಿಂದ ಸಾರ್ವಜನಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇದಲ್ಲದೇ ತಿಳವಳ್ಳಿ ಹಾನಗಲ್‌ ರಸ್ತೆ, ತಿಳವಳ್ಳಿ ಕೂಸನೂರು ರಸ್ತೆ, ತಿಳವಳ್ಳಿ ಹಂಸಭಾವಿ ರಸ್ತೆಗಳು ಸಹ ಹಾಳಾಗಿವೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಗ್ಗು ಗುಂಡಿಗಳಿಂದ ಕುಡಿದ ರಸ್ತೆಯನ್ನು ಹೊಸದಾಗಿ ಡಾಂಬರೀಕರಣ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಏನಂತಾರೆ?

ಈಗಾಗಲೇ ರಸ್ತೆ ಕಾಮಗಾರಿಯನ್ನು ಆರಂಭಿಸುವಂತೆ ಕಳೆದ ವರ್ಷ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗಿತ್ತು. ಆಗ ಜಲ್ಲಿ ಕಲ್ಲುಗಳನ್ನು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಈಗ ಮತ್ತೆ ರಸ್ತೆಯ ತುಂಬಾ ತಗ್ಗು– ಗುಂಡಿಗಳು ಬಿದ್ದು ರಸ್ತೆಯ ತುಂಭಾ ಕೆಸರು ಆವರಿಸುತ್ತಿರುವುದರಿಂದ ನಮಗೆ ಇಲ್ಲಿ ವ್ಯಾಪಾರ ಮಾಡಲು ಆಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯವರು ಬೇಗ ರಸ್ತೆ ಕೆಲಸ ಆರಂಭಿಸಬೇಕು ಎಂದು ವ್ಯಾಪಾರಿ ರೇಣುಕಾಚಾರಿ ಬಡಿಗೇರ ಹೇಳಿದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹಾಗೂ ಟೆಂಡರ್‌ದಾರರು ಮಳೆ ನಿಂತ ಮೇಲೆ ರಸ್ತೆ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಮಳೆ ನಿಂತ ಮೇಲೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ವ್ಯಾಪರಸ್ಥರು ಹಾಗೂ ಗ್ರಾಮಸ್ಥರು ಸೇರಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ವ್ಯಾಪಾರಿ ಶಿವಲಿಂಗಶೆಟ್ಟಿ ಉಡಗಣಿ ತಿಳಿಸಿದರು.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ತಿಳವಳ್ಳಿ ಗಡಿ ಭಾಗದಿಂದ ಚಿಕೌಂಶಿ ಗ್ರಾಮದವರೆಗೆ ಸುಮಾರು 15 ಕಿ.ಮೀ. ರಸ್ತೆ ಕಾಮಗಾರಿಯು ₹23 ಕೋಟಿಗೆ ಟೆಂಡರ್ ಪ್ರಕ್ರಿಯೆಯು ಮುಗಿದು ಚಿಕೌಂಶಿ ಗ್ರಾಮದಿಂದ ರಸ್ತೆ ಕಾಮಗಾರಿ ಕೆಲಸ ಆರಂಭವಾಗಿದೆ. ತಿಳವಳ್ಳಿ ಭಾಗದಲ್ಲಿ ಸಿಡಿ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಸಿಡಿ ಕೆಲಸ ಮುಗಿದ ತಕ್ಷಣ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಹಾನಗಲ್‌ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಎಮ್.ಎಸ್.ಅಕ್ಕೂರ ತಿಳಿಸಿದರು.

ತಿಳವಳ್ಳಿ ಹಂಸಭಾವಿ ಹಾಗೂ ರಾಣೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿರುವುದು
ತಿಳವಳ್ಳಿ ಹಂಸಭಾವಿ ಹಾಗೂ ರಾಣೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT