ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರ: ಕೊಕ್ಕೊ ಕ್ರೀಡೆಯಲ್ಲಿ ಮಿಂಚಿದ ಪ್ರತಿಭೆ

‘ಖೇಲೋ ಇಂಡಿಯಾ’ದಲ್ಲಿ ಕಂಚಿನ ಪದಕ ಸಾಧನೆ: ಅನನ್ಯ ಕ್ರೀಡಾಸಾಧಕ ಚಂದ್ರಶೇಖರ
Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಹಿರೇಕೆರೂರ: ರಟ್ಟೀಹಳ್ಳಿ ಪಟ್ಟಣದ ನಿವಾಸಿ, ಸ್ಥಳೀಯ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಓದುತ್ತಿರುವ ಚಂದ್ರಶೇಖರ ಅಡ್ಮನಿ ಅವರು ಕೊಕ್ಕೊ ಆಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮೂಲಕ ಉತ್ತಮ ಕ್ರೀಡಾಪಟು ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

ಕೆಂಜೋಡಪ್ಪ-ನೀಲಮ್ಮ ದಂಪತಿ ಪುತ್ರರಾದ ಚಂದ್ರಶೇಖರ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣವನ್ನು ರಟ್ಟೀಹಳ್ಳಿಯಲ್ಲಿಯೇ ಮುಗಿಸಿದ್ದಾರೆ. ಬಾಲ್ಯದಿಂದಲೇ ಕೊಕ್ಕೊ ಆಟದ ಬಗ್ಗೆ ಹೆಚ್ಚು ಪ್ರೀತಿ ಬೆಳೆಸಿಕೊಂಡಿದ್ದ ಇವರ ಆಟಕ್ಕೆ ಪಾಲಕರು ಹಾಗೂ ಸ್ಥಳೀಯ ಹೊಯ್ಸಳ ಸ್ಪೋರ್ಟ್ಸ್‌ ಕ್ಲಬ್ ಪ್ರಮುಖರು ಬೆಂಬಲವಾಗಿ ನಿಂತ ಪರಿಣಾಮ ಆಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ.

2020ರ ಜನವರಿ ತಿಂಗಳಲ್ಲಿ ಅಸ್ಸಾಂನಲ್ಲಿ ಕೇಂದ್ರ ಸರ್ಕಾರದ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಆಯೋಜಿಸಿದ್ದ 'ಖೇಲೋ ಇಂಡಿಯಾ' ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಇವರ ತಂಡ 3ನೇ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದೆ. ಈ ಸಾಧನೆಗೆ ಕ್ರೀಡಾಭಿಮಾನಿಗಳು ಇವರನ್ನು ಅಭಿನಂದಿಸಿದ್ದಾರೆ.

2017ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ ನಡೆದ 5ನೇ ಜೂನಿಯರ್ ನ್ಯಾಷನಲ್ ಮಾಡರ್ನ್ ಕೊಕ್ಕೊ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿದ್ದರು. 2016ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಕೊಕ್ಕೊ ಯೂತ್‌ ನ್ಯಾಷನಲ್ ಚಾಂಪಿಯನ್‍ಷಿಪ್‌ನಲ್ಲಿ 2ನೇ ಸ್ಥಾನ ಪಡೆದ ತಂಡದಲ್ಲಿ ಚಂದ್ರಶೇಖರ ಕೂಡ ಇದ್ದರು. ಗೆಲುವಿನಲ್ಲಿ ಇವರ ಪಾತ್ರ ಕೂಡ ಗಣನೀಯ.

ಕಳೆದ ವರ್ಷ ತಿರುಪತಿಯಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಇವರು ಪ್ರತಿನಿಧಿಸಿದ್ದರು. ಹಲವಾರು ಅಂತರ ವಿಶ್ವವಿದ್ಯಾಲಯ, ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಸತತ ಪರಿಶ್ರಮ ಮತ್ತು ಆಸಕ್ತಿಯಿಂದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಅದಕ್ಕೆ ಪ್ರೋತ್ಸಾಹ ಮತ್ತು ಅವಕಾಶವು ಅತ್ಯಗತ್ಯ. ನನಗೆ ಕಾಲೇಜು ಮತ್ತು ಮನೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿರುವುದರಿಂದ ಓದು ಮತ್ತು ಆಟ ಎರಡರಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿದ್ದು, ಸುಪ್ತ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ ಎಂಬುದು ಚಂದ್ರಶೇಖ ಅವರ ಮನದಾಳದ ಮಾತು.

'ಚಂದ್ರಶೇಖರ ಅಡ್ಮನಿ ಕೊಕ್ಕೊ ಆಟದಲ್ಲಿ ಅತ್ಯುತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಆಟದಿಂದ ಪಟ್ಟಣಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅವರಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದೇವೆ' ಎಂದು ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಘವೇಂದ್ರ ಎ.ಜಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT