ಸೋಮವಾರ, ಮಾರ್ಚ್ 1, 2021
30 °C
ತುಮ್ಮಿನಕಟ್ಟಿ ಹುಡುಗನ ಉತ್ತಮ ಸಾಧನೆ

ಕಬಡ್ಡಿ, ಕುಸ್ತಿಯಲ್ಲಿ ‘ಚಿನ್ನ’ದ ಕಿರಣ

ಬಸವರಾಜ ಒಡೇರಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುಮ್ಮಿನಕಟ್ಟಿ: ಅಪ್ಪಟ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ ಹಾಗೂ ಕುಸ್ತಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಗ್ರಾಮದ ಬಿ.ಎ ವಿದ್ಯಾರ್ಥಿ ಎಸ್.ಕಿರಣ್‍ ಕುಮಾರ್ ಇದೀಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಾಲ್ಯದಿಂದಲೇ ಕಬಡ್ಡಿ ಹಾಗೂ ಕುಸ್ತಿಯಲ್ಲಿ ಆಸಕ್ತಿ ಹೊಂದಿದ್ದ ಕಿರಣ್‍, ಬದ್ಧತೆ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸಿನತ್ತ ಮುನ್ನುಗುತ್ತಿದ್ದಾರೆ. ಅವರು ಸದ್ಯ ರಾಣೆಬೆನ್ನೂರಿನ ಬಿ.ಎ.ಜೆ.ಎಸ್‌.ಎಸ್. ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. 

‘ಕಿರಣ್ ಆಲ್‌ರೌಂಡರ್ ಆಟಗಾರ. ಎಂಥ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡುತ್ತಾನೆ. ರಕ್ಷಣಾ ವಿಭಾಗದ ಆಧಾರ ಸ್ಥಂಭವಾಗಿದ್ದಾನೆ. ಸಹ ಆಟಗಾರರಿಗೂ ಅಮೂಲ್ಯ ಸಲಹೆ ನೀಡಿ, ಹೊಸ ಚೈತನ್ಯ ತುಂಬುತ್ತಾನೆ’ ಎನ್ನುತ್ತಾರೆ ತರಬೇತುದಾರ ಪ್ರಶಾಂತ್ ಕುಂಠೆ.

‘ನಾನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಗ ರಜೆ ದಿನಗಳಲ್ಲಿ ಹಸಿವೆಯನ್ನೂ ಮರೆತು ಕಬಡ್ಡಿ, ಮರಕೋತಿ, ಚಿನ್ನಿ-ದಾಂಡು ಆಟಗಳನ್ನು ಆಡುತ್ತ ಬೆಳೆದೆ. ಕ್ರಮೇಣ ಗ್ರಾಮದ ಯುವಕರ ಕಬಡ್ಡಿ ತಂಡದಲ್ಲಿ ಸೇರಿ ಅಭ್ಯಾಸ ಪ್ರಾರಂಭಿಸಿದೆ. ಸ್ಥಳೀಯ, ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಗೆದ್ದುಕೊಂಡೆ’ ಎಂದು ವಿವರಿಸುತ್ತಾರೆ ಕಿರಣ್.

‘ಕಾಲೇಜು ದಿನಗಳಲ್ಲಿ ಅರ್ಜುನ್, ಚಂದ್ರು ಹಾಗೂ ಪ್ರಶಾಂತ್ ಕುಂಠೆ ಅವರಂತಹ ತರಬೇತುದಾರರು ಸಿಕ್ಕರು. ಅವರ ಮೂಲಕವೇ ಸಾಂಗ್ಲಿಯ ಸಾಮ್ರಾಟ್ ಕ್ಲಬ್ ತರಬೇತುದಾರ ಅಭಿಷೇಕ್ ಪಾಟೀಲ ಅವರ ಪರಿಚಯ ಬೆಳೆಯಿತು. ಅವರ ಗರಡಿಯಲ್ಲಿ ರಾಜ್ಯ
ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲೂ ಭಾಗವಹಿಸುವಷ್ಟರ ಮಟ್ಟಕ್ಕೆ ಪಳಗಿದೆ. ಇವತ್ತು ಕಬಡ್ಡಿಯಲ್ಲಿ ಅಪಾರ ಪೈಪೋಟಿ ಇದೆ’ ಎನ್ನುತ್ತಾರೆ ಅವರು. 

‘2019ರ ಜನವರಿಯಲ್ಲಿ ಬೈಂದೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದೆ. ಜುಲೈನಲ್ಲಿ ಹರಿಯಾಣದಲ್ಲಿ ನಡೆದ ‘ಆಲ್ ಇಂಡಿಯಾ ನ್ಯಾಷನಲ್ ಚಾಂಪಿಯನ್‌ಶಿಪ್‌’ನಲ್ಲಿ ಕಬಡ್ಡಿ ಹಾಗೂ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದೆ. ಯೂ
ಟ್ಯೂಬ್‌ನಲ್ಲಿ ಕ್ರೀಡಾಕೂಟಗಳನ್ನು ನೋಡಿ, ಕೆಲವು ತಂತ್ರಗಳನ್ನು ಕರಗತ ಮಾಡಿಕೊಂಡಿದ್ದೇನೆ’ ಎಂದರು. 

‘ಆರಂಭದಲ್ಲಿ ಮಗನ ಆಸೆಗೆ ಕಲ್ಲಾಕುವ ಕೆಲಸ ಮಾಡಿದೆ. ಆದರೆ, ಈಗ ಸತ್ಯದ ಅರಿವಾಗಿದೆ. ಮಗನ ಸಾಧನೆ ಹಾದಿಗೆ ನಾನು ಹಾಗೂ ನನ್ನ ಕುಟುಂಬದವರು ಬೆನ್ನೆಲುಬಾಗಿ ನಿಲ್ಲುತ್ತೇವೆ’ ಎಂದು ಕಿರಣ್‍ ತಂದೆ ಸುರೇಶ್ ಉಪ್ಪಾರ ವಿಶ್ವಾಸದಿಂದ ಹೇಳಿದರು.

ಪ್ರೋ ಕಬಡ್ಡಿಗೆ ಆಯ್ಕೆಯ ಕನಸು
‘ಪ್ರೋ ಕಬಡ್ಡಿಗೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಬೇಕು. ಚಿನ್ನ ಗೆಲ್ಲುವ ತಂಡದ ಭಾಗ ಆಗಿರಬೇಕು ಎನ್ನುವುದು ನನ್ನ ಕನಸು. ಅದರ ಜತೆ ಕುಸ್ತಿ ಮತ್ತು ಕೊಕ್ಕೊ ಕೂಡ ಅಭ್ಯಾಸ ಮಾಡುತ್ತಿದ್ದೇನೆ. ಅವಕಾಶ ಸಿಕ್ಕರೆ ಅವುಗಳಲ್ಲಿಯೂ ಸಾಧನೆ ಮಾಡಲು ಸಿದ್ಧತೆ ನಡೆಸಿದ್ದೇನೆ’ ಎಂದು ಕಿರಣ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು