ಭಾನುವಾರ, ಜೂನ್ 26, 2022
21 °C
ಮುಂಗಾರು ಹಂಗಾಮಿಗೆ ಬಿತ್ತನೆಬೀಜ, ರಸಗೊಬ್ಬರ ಸಿದ್ಧತೆ: ಸಚಿವ ಬಸವರಾಜ ಬೊಮ್ಮಾಯಿ

ಸಹಕಾರ ಸಂಘಗಳನ್ನು ಬಲಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ವಿಶೇಷ ಅಭಿಯಾನದ ಮೂಲಕ ಪ್ರಾಥಮಿಕ ಸಹಕಾರ ಸಂಘಗಳನ್ನು ಬಲಪಡಿಸುವ ಕೆಲಸವಾಗಬೇಕು. ಸಹಕಾರಿ ಸಂಘಗಳ ಮೂಲಕವೇ ಗೊಬ್ಬರ ವಿತರಣೆಗೆ ಆದ್ಯತೆ ನೀಡಬೇಕು’ ಎಂದು ಕೃಷಿ ಮತ್ತು ಸಹಕಾರಿ ಇಲಾಖಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಜಿಲ್ಲೆಯ ಮುಂಗಾರು ಬಿತ್ತನೆಯ ಸಿದ್ಧತೆ ಕುರಿತಂತೆ ಕೃಷಿ ಹಾಗೂ ಪೂರಕ ಇಲಾಖೆಗಳ ಅಧಿಕಾರಿಗಳೊಂದಿಗೆ ಹಾವೇರಿ ಪ್ರವಾಸಿ ಮಂದಿರದಲ್ಲಿ ಗುರುವಾರ ಪರಿಶೀಲನಾ ಸಭೆ ನಡೆಸಿದರು. 

ಹಾವೇರಿ, ರಾಣೆಬೆನ್ನೂರು ಹಾಗೂ ಹಿರೇಕೆರೂರು ತಾಲ್ಲೂಕುಗಳಲ್ಲಿ ಹೆಚ್ಚು ಸಹಕಾರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳು ಹೆಚ್ಚು ಮಾರಾಟ ವಹಿವಾಟು ನಡೆಸುತ್ತಿವೆ. ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಸವಣೂರ ತಾಲ್ಲೂಕುಗಳಲ್ಲಿ ಹೆಚ್ಚುವರಿ ಸಂಘಗಳ ನೋಂದಣಿಗೆ ಕ್ರಮವಹಿಸಿ. ಈ ಸಹಕಾರ ಸಂಘಗಳ ಮೂಲಕವೇ ಗೊಬ್ಬರ ವಿತರಣೆಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಮುಂಗಾರು ಹಂಗಾಮಿಗೆ ಸಜ್ಜು:

‘ಹವಾಮಾನ ಇಲಾಖೆಯ ವರದಿಯಂತೆ ಮೂರ್ನಾಲ್ಕು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಜಿಲ್ಲೆಯಲ್ಲಿ ಮುಂಗಾರು ಕೃಷಿ ಯೋಜನೆಯಂತೆ ಡಿಎಪಿ ಗೊಬ್ಬರ ಸೇರಿದಂತೆ ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಹವಾಮಾನ ಇಲಾಖೆಯ ಮಾಹಿತಿಯಂತೆ ಈ ವರ್ಷ ಮುಂಗಾರು ಮಳೆ ಶೇ 4ರಷ್ಟು ಕಡಿಮೆಯಾಗಲಿದೆ ಎಂದು ಮುನ್ಸೂಚನೆ ದೊರೆತಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಂಗಾರು ಬಿತ್ತನೆ ಆರಂಭಗೊಳ್ಳಲಿದೆ. ಈ ಬಾರಿ 26 ಸಾವಿರ ಟನ್‌ ಡಿಎಪಿ ಜಿಲ್ಲೆಗೆ ಹಂಚಿಕೆಯಾಗಿದೆ. ಮೇ ಅಂತ್ಯಕ್ಕೆ 9,200 ಟನ್‌ ಪೂರೈಕೆಯಾಗಿದ್ದು, ಈಗಾಗಲೇ 5,745 ಟನ್‌ ವಿತರಣೆಯಾಗಿದೆ. ಹೀಗಾಗಿ ಹಳೆ ದಾಸ್ತಾನು ಸೇರಿದಂತೆ ಒಟ್ಟು 9,416 ಟನ್‌ ದಾಸ್ತಾನು ಲಭ್ಯವಿದೆ ಎಂದು ಮಾಹಿತಿ ನೀಡಿದರು. 

ಡಿಎಪಿಗೆ ಹೆಚ್ಚುತ್ತಿರುವ ಬೇಡಿಕೆ:

ಮುಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ನಿರ್ವಹಣೆ ಕುರಿತಂತೆ ಪ್ರತಿ ವಾರ ಪರಿಶೀಲನೆ ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷದ ಅಂಕಿಅಂಶಗಳನ್ನು ಪರಿಶೀಲಿಸಿದಾಗ 2018ರಲ್ಲಿ 14,653 ಟನ್‌, 2019ರಲ್ಲಿ 16,291 ಟನ್‌, 2020ರಲ್ಲಿ 20,312 ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ ಎಂದು ವಿವರಿಸಿದರು. 

ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.