ಭಾನುವಾರ, ನವೆಂಬರ್ 27, 2022
26 °C

ಬಸ್ ವ್ಯವಸ್ಥೆ ಕಲ್ಪಿಸಿ: ಮಾನೆ ಎದುರು ವಿದ್ಯಾರ್ಥಿಗಳ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ನಿತ್ಯವೂ ಐದಾರು ಕಿ.ಮೀ.ಗಟ್ಟಲೇ ನಡೆದು ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದೇವೆ. ಸಂಬಂಧಿಸಿದ ಅಧಿಕಾರಿಗಳ ಎದುರು ಹಲವು ಬಾರಿ ಅಳಲು ತೋಡಿಕೊಂಡರೂ ಬಸ್ಸಿನ ವ್ಯವಸ್ಥೆ ಮಾಡಲು ಮುಂದಾಗುತ್ತಿಲ್ಲ. ತಾವಾದರೂ ನಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿ ಎಂದು ಹಾನಗಲ್ಲ ತಾಲ್ಲೂಕಿನ ಬಸಾಪುರ ಮತ್ತು ಯಳ್ಳೂರ ಗ್ರಾಮಗಳ ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸ ಮಾನೆ ಅವರ ಬಳಿ ಅವಲತ್ತುಕೊಂಡರು.

ಬಸಾಪುರ ಮತ್ತು ಯಳ್ಳೂರ ಗ್ರಾಮಗಳಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಮ್ಮನಹಳ್ಳಿ ಮತ್ತು ಹಾನಗಲ್ಲಗೆ ಶಾಲೆ, ಕಾಲೇಜುಗಳಿಗೆ ತೆರಳುತ್ತೇವೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಕೆಎಸ್‍ಆರ್‌ಟಿಸಿ ಅಧಿಕಾರಿಗಳು ನಮ್ಮ ಗ್ರಾಮಗಳಿಗೆ ಬಸ್ಸು ಬಿಡಲು ಒಪ್ಪುತ್ತಿಲ್ಲ. ರಸ್ತೆ ಸಂಚಾರಕ್ಕೆ ಯೋಗ್ಯವಿರದ ಕಾರಣ ಖಾಸಗಿ ವಾಹನಗಳೂ ಇಲ್ಲಿ ಹೆಚ್ಚಾಗಿ ಓಡಾಡುತ್ತಿಲ್ಲ. ಸುರಿಯುವ ಮಳೆಯಲ್ಲೇ ನಡೆದುಕೊಂಡು ತಡಸ-ಶಿವಮೊಗ್ಗ ರಾಜ್ಯ ಹೆದ್ದಾರಿ ತಲುಪಿ ಅಲ್ಲಿಂದ ಬಮ್ಮನಹಳ್ಳಿ ಮತ್ತು ಹಾನಗಲ್‍ಗೆ ತೆರಳುತ್ತಿದ್ದೇವೆ. ರಸ್ತೆಯಲ್ಲೇ ಸಮಯ ಕಳೆದು ಹೋಗುತ್ತಿರುವುದರಿಂದ ಸರಿಯಾದ ಸಮಯಕ್ಕೆ ಶಾಲೆ-ಕಾಲೇಜುಗಳಿಗೆ ತಲುಪುವುದು ಸಾಧ್ಯವಾಗುತ್ತಿಲ್ಲ ಎಂದು ಮನವರಿಕೆ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಮಾನೆ, ಹದಗೆಟ್ಟ ರಸ್ತೆ ಸರಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಕೆಎಸ್‍ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ಬಸ್‌ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ವೀರನಗೌಡ ಪಾಟೀಲ, ರಾಜೂ ವಗ್ಗನವರ, ಮುಖಂಡರಾದ ಯಲ್ಲಪ್ಪ ಮಾರನಬೀಡ, ರಮೇಶ ತಳವಾರ, ವಿದ್ಯಾರ್ಥಿಗಳಾದ ಅಭಿಷೇಕ ತಳವಾರ, ಪ್ರಮೋದ ವಗ್ಗನವರ, ಮಥುರಾ ಗೋಯಿಕಾಯಿ, ಆಕಾಶ ವಗ್ಗನವರ, ಸುರೇಶ ಭಜಂತ್ರಿ, ಅನಿಲ ವಗ್ಗನವರ, ಸಿಂಧೂ ಕಮಾಟಿ, ಅಶ್ವಿನಿ ವಗ್ಗನವರ, ಸಿದ್ದಲಿಂಗೇಶ ಬೆಣ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು