ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರಿಯಾ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಜಿ.ಪಂ ಅಧ್ಯಕ್ಷ ಬಸನಗೌಡ ದೇಸಾಯಿ

ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ
Last Updated 15 ಜುಲೈ 2020, 16:48 IST
ಅಕ್ಷರ ಗಾತ್ರ

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಉತ್ತಮ ಬಿತ್ತನೆಯಾಗಿದೆ. ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ. ವಿಶೇಷವಾಗಿ ಯೂರಿಯಾ ಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಜಿ.ಪಂ. ಅಧ್ಯಕ್ಷ ಬಸನಗೌಡ ದೇಸಾಯಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು ಯೂರಿಯಾ ಪೂರೈಕೆ ಕುರಿತಂತೆ ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಎಂ.ಆರ್.ಪಿ. ದರಕ್ಕಿಂತ ₹50ರಿಂದ ₹100 ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಖರೀದಿಗೆ ಬಿಲ್ ಕೊಡುವುದಿಲ್ಲ, ರೈತರು ಬಿಲ್ ಕೇಳಿದರೆ ಯೂರಿಯಾ ಗೊಬ್ಬರ ಇಲ್ಲ ಎಂದು ಹೇಳುತ್ತಾರೆ. ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳು ಗಮನಹರಿಸಲು ಸಲಹೆ ನೀಡಿದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾಹಿತಿ ನೀಡಿ, ಈ ವರ್ಷ ಜಿಲ್ಲೆಯ ಬೇಡಿಕೆ ಹಾಗೂ ನಿಗದಿಯಾದ ಪ್ರಮಾಣದಂತೆ ಯೂರಿಯಾ ಪೂರೈಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ಯೂರಿಯಾ ಬಳಕೆ ಮಾಡುತ್ತಿದ್ದಾರೆ. ಪ್ರಸಕ್ತ ಸೆಪ್ಟಂಬರ್ ತಿಂಗಳವರೆಗೆ 48 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇದ್ದು, ಈಗಾಗಲೇ 49 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಹೆಚ್ಚುವರಿ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿರುವ ದೂರುಗಳು ಬಂದರೆ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳು ತೆರಳಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಪ್ರಸ್ತುತ ಕೃಷಿ ಇಲಾಖೆಯಿಂದ ರೈತರಿಗೆ ಆನ್‍ಲೈನ್ ಮುಖಾಂತರ ತರಬೇತಿಗಳನ್ನು ನೀಡಲಾಗುತ್ತಿದೆ. ಪ್ರಸಕ್ತ ಮುಂಗಾರಿನಿಂದ ಕ್ರಾಪ್ ಸರ್ವೆ ಕಾರ್ಯವನ್ನು ಸ್ವತಃ ರೈತರೇ ಆ್ಯಪ್‌ ಬಳಸಿ ಜಮೀನಿನ ಬೆಳೆಯನ್ನು ಅಪ್‍ಲೋಡ್ ಮಾಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಪುಸ್ತಕ:ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿತರಿಸಲು ಈಗಾಗಲೇ ಜಿಲ್ಲೆಗೆ ಪಠ್ಯಪುಸ್ತಕಗಳು ಸರಬರಾಜಾಗಿದ್ದು, ಶಾಲೆಗಳಿಗೆ ಬದಲಾಗಿ ನೇರವಾಗಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲು ನಿರ್ದೇಶನ ಬಂದಿದೆ. ಐದೈದು ಮಕ್ಕಳನ್ನು ಕರೆದು ಪುಸ್ತಕಗಳನ್ನು ವಿತರಿಸಲಾಗುವುದು. ಶಾಲೆ ಆರಂಭಕ್ಕೆ ಮುನ್ನ ಮನೆಯಲ್ಲಿ ಅಭ್ಯಾಸ ಮಾಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಶೀಘ್ರವೇ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಿಗೇರಿ ವಿವರಿಸಿದರು.

ಪ್ರಸಕ್ತ ವರ್ಷ ಶಾಲೆಗಳ ದುರಸ್ತಿ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ₹416 ಲಕ್ಷ ವೆಚ್ಚದಲ್ಲಿ 224 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಹಾಗೂ ನಿರ್ಮಿತಿ ಕೇಂದ್ರಕ್ಕೆ ಅನುದಾನ ವರ್ಗಾಯಿಸಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 75 ಹಾಸಿಗೆಗಳ ಸೆಂಟ್ರಲೈಸ್ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಹಾಗೆ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ವ್ಯವಸ್ಥೆಯುಳ್ಳ ಹಾಸಿಗೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಿಎಚ್‌ಒ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದರು.

ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಾನಂದ ಕನ್ನಪ್ಪಳವರ, ಟಾಕನಗೌಡ ಪಾಟೀಲ ಹಾಗೂ ಶಿವರಾಜ ಅಮರಾಪುರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ ಎನ್.ಕೆ., ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT