ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ: ಸ್ವೀಕೃತ ಅರ್ಜಿಗಳಿಗೆ 15 ದಿನಗಳಲ್ಲಿ ಇತ್ಯರ್ಥ

ಸರ್ಕಾರಿ ರಸ್ತೆ ಅತಿಕ್ರಮಣ ವಾರದಲ್ಲಿ ತೆರವು: ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
Published 31 ಜನವರಿ 2024, 4:13 IST
Last Updated 31 ಜನವರಿ 2024, 4:13 IST
ಅಕ್ಷರ ಗಾತ್ರ

ಶಿಗ್ಗಾವಿ: ಜನತಾ ದರ್ಶನದಲ್ಲಿ ಸ್ವೀಕೃತಿಯಾದ ಸಾರ್ವಜನಿಕ ಅರ್ಜಿಗಳನ್ನು 15 ದಿನದೊಳಗಾಗಿ ಇತ್ಯರ್ಥಗೊಳಿಸಬೇಕು. ಸರ್ಕಾರದ ಹಂತದಲ್ಲಿ ಇತ್ಯರ್ಥವಾಗುವ ಅರ್ಜಿಗಳನ್ನು ವಿವರಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್
ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅರ್ಜಿಗಳನ್ನು ಪರಿಶೀಲಿಸಿ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಹಂತದಲ್ಲಿ ಪರಿಹಾರ ಒದಗಿಸಬೇಕು. ಮಾಹಿತಿಯನ್ನು
ಐ.ಪಿ.ಜಿ.ಆರ್.ಎಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ನಮ್ಮ ಹಂತದಲ್ಲಿ ನಿವಾರಣೆಯಾಗುವ ಸಮಸ್ಯೆಗಳಿಗೆ ಸ್ಥಳದಲ್ಲೇ ಅಥವಾ ಕಾಲಮಿತಿಯಲ್ಲಿ ಪರಿಹಾರ ಒದಗಿಸಬೇಕು. ಸರ್ಕಾರದ ಹಂತದಲ್ಲಿ ತೀರ್ಮಾನವಾಗುವ ಸಮಸ್ಯೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು  ಎಂದರು.

ಜನತಾದರ್ಶನದಲ್ಲಿ ಮುಖ್ಯವಾಗಿ ಮನೆ ಬಿದ್ದಿರಿರುವ ಪ್ರಕರಣಗಳ ಕುರಿತು ತಹಶೀಲ್ದಾರ್ ಅತಿವೃಷ್ಟಿಯಿಂದ ಬಿದ್ದಮನೆಗಳ ಸರ್ವೆಮಾಡಿ ನಿಗಮಕ್ಕೆ ವರದಿ ಸಲ್ಲಿಸಿದ್ದಾರೆ. ನಿಗಮದ ಹಂತದಲ್ಲಿ ಅನುಮೋದನೆ ಬಾಕಿ ಉಳಿದಿವೆ. ಹೊಸದಾಗಿ ರೇಷನ್ ಕಾರ್ಡ್‌ ಮಾಡಲು ಈಗ ಅವಕಾಶ ಇರುವುದಿಲ್ಲ. ಸರ್ಕಾರದ ಹಂತದಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರ ಪುನಃ ಪೋರ್ಟಲ್ ಆರಂಭಿಸಲಿದೆ ಎಂದರು.

ರಸ್ತೆಗಳ ಸಮಸ್ಯೆ ಕುರಿತಂತೆ ಅರ್ಜಿಗಳನ್ನು ಸಲ್ಲಿದ್ದು, ಗ್ರಾಮದ ಗಾಂವಠಾಣಾ ನಕಾಶೆಯಲ್ಲಿರುವ ಸರ್ಕಾರಿ ದಾರಿಗಳನ್ನು ಯಾವುದೇ ಕಾರಣಕ್ಕೂ ಅಡ್ಡಿಪಡಿಸುವ ಹಾಗಿಲ್ಲ, ಮುಚ್ಚುವ ಹಾಗಿಲ್ಲ. ಯಾರಾದರೂ ಈ ದಾರಿಗಳನ್ನು ಒತ್ತುವರಿ ಮಾಡಿದ್ದರೆ ಒಂದು ವಾರದೊಳಗೆ ಕಡ್ಡಾಯವಾಗಿ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸೂಚಿಸಿದರು.

ರೂಢಿಗತ ದಾರಿ, ಬಂಡಿ ದಾರಿಗಳನ್ನು ತೆರವುಗೊಳಿಸಲು ಅಧಿಕಾರ ಇರುವುದಿಲ್ಲ. ಬೆಳೆ ಬಿತ್ತನೆ, ಕಟಾವು ಸಂದರ್ಭದಲ್ಲಿ ದಾರಿ ಮಾಡಿಕೊಡಲು ಅವಕಾಶವಿದೆ. ರೈತರು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಅಥವಾ ಸಿವಿಲ್ ನ್ಯಾಯಾಲದ ಮೊರೆ ಹೋಗಬೇಕು ಎಂದರು.

ಮುಂದಿನ ಆರ್ಥಿಕ ವರ್ಷದಲ್ಲಿ ಚೆಕ್ ಡ್ಯಾಂಗಳ ಕ್ರಿಯಾಯೋಜನೆ ಸಲ್ಲಿಸುವ ಮುನ್ನ ರೈತರೊಂದಿಗೆ ಚರ್ಚಿಸಿ ಬೇಡಿಕೆ ಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸಣ್ಣ ನೀರಾವರಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳ ನೋಂದಣಿ ಸಮಸ್ಯೆ ಇಲ್ಲ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಶೇ99ರಷ್ಟು ಹಣ ಜಮಾ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡತೆ ಮುನ್ಸಿಪಲ್ ರಸ್ತೆ ಅತಿಕ್ರಮಣ ದೂರು ಸಲ್ಲಿಕೆಯಾಗಿದ್ದು, ತಕ್ಷಣ ಸ್ಥಳ ಪರಿಶೀಲಿಸಿ ಜನತಾದರ್ಶನ ಮುಗಿಯುವದರೊಳಗಾಗಿ ವರದಿ ಸಲ್ಲಿಸುವಂತೆ ಪುರಸಭೆ ಎಂಜಿನಿಯರ್‌ ಹಾಗೂ ಲೋಕೋಪಯೋಗಿ ಇಲಾಖೆ
ಅಭಿಯಂತರರಿಗೆ ಸೂಚಿಸಿದರು.

ಜಾನುವಾರುಗಳಿಗೆ ಸಿಮೆಂಟ್ ನೀರಿನ ತೊಟ್ಟಿಗಳಲ್ಲಿ ಕಸ ತುಂಬಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂಬ ದೂರು ಆಲಿಸಿದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಪಂಚಾಯ್ತಿ ವಾರು ಜಾನುವಾರು ನೀರಿನ ತೊಟ್ಟಿಯಲ್ಲಿ ಕಸ ತುಂಬಿದೆ
ಎಂಬುದನ್ನು ಪರಿಶೀಲಿಸಿ ಸ್ವಚ್ಛಗೊಳಿಸಬೇಕು ಎಂದರು.

ದುಂಡಶಿ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ಹಂದಿ, ಜಿಂಕೆಗಳ ಕಾಟದಿಂದ ಬೆಳೆ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಬೆಳೆ ರಕ್ಷಣೆಗೆ ತಂತಿಬೇಲಿ ನಿರ್ಮಾಣಕ್ಕೆ ರೈತರು ಮನವಿ ಸಲ್ಲಿಸಿದರು. ಜಿಲ್ಲಾ ಅರಣ್ಯ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಕಾಡು ಪ್ರಾಣಿ ಹಾವಳಿಯಿಂದ ಬೆಳೆಹಾನಿಗೆ ಪರಿಹಾರ ನೀಡಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ತಹಶೀಲ್ದಾರ್ ಸಂತೋಷ ಹಿರೇಮಠ, ತಾ.ಪಂ.ಇಒ ಪಿ. ವಿಶ್ವನಾಥ ಇದ್ದರು.

163 ಅರ್ಜಿಗಳ ಸ್ವೀಕಾರ

ಸರ್ಕಾರಿ ದಾರಿ ಒತ್ತುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಬದಲಾವಣೆ ವಿಳಂಬ ಕೃಷಿ ಪಂಪ್‌ಸೆಟ್‌ಗಳಿಗೆ ವೊಲ್ಟೇಜ್ ತೊಂದರೆ ರೈತರ ಅವಶ್ಯಕತೆಗೆ ಅನುಗುಣವಾಗಿ ಚೆಕ್ ಡ್ಯಾಂ ನಿರ್ಮಾಣ ಸರ್ಕಾರಿ ಜಾಗ ಒತ್ತುವರಿ ಬರ ಪರಿಹಾರ ಕಾಡು ಪ್ರಾಣಿಗಳ ಹಾವಳಿ ತಡೆ ಮನೆ ಮಂಜೂರಾತಿ ಮನೆ ಬಿದ್ದ ಪ್ರಕರಣ ದಾರಿ ಸಮಸ್ಯೆ ರೇಷನ್ ಕಾರ್ಡ್‌ ಸಮಸ್ಯೆ ಸ್ಮಶಾನ ಭೂಮಿ ಸೇರಿದಂತೆ ಸಾರ್ವಜನಿಕರಿಂದ 163 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ ಇಲಾಖೆಗೆ ಸಂಬಂಧಿಸಿದ 98 ತಾ.ಪಂ-13 ಪಿಡಬ್ಲ್ಯೂಡಿ-3 ಪಂಚಾಯತ್ ರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆ- 2 ಕೃಷಿ ಇಲಾಖೆ-8 ಬಿಸಿಎಂ-2 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-6 ಭೂಮಾಪನ ಇಲಾಖೆ-19 ಪಶು ಸಂಗೋಪನೆ ಏತ ನೀರವಾರಿ ಸಾರಿಗೆ ಕಾರ್ಮಿಕ ಇಲಾಖೆ ತಲಾ ಒಂದು ಪುರಸಭೆ-3 ಅರ್ಜಿಗಳು ಸ್ವೀಕತವಾಗಿವೆ. ಕೃಷಿ ಪಂಪ್‌ಸೆಟ್‌ಗಳಿಗೆ ವೊಲ್ಟೇಜ್ ಸಮಸ್ಯೆ ನಿವಾರಣೆ ಹಾಗೂ ಟ್ರಾನ್ಸ್‌ಫಾರ್ಮರ್‌ ಬದಲಾವಣೆ ಟ್ರಾನ್ಸ್‌ಫಾರ್ಮರ್‌ ಸಾಮರ್ಥ್ಯ ಹೆಚ್ಚಳ ಕುರಿತು ಸರ್ವೆ ನಡೆಸಿ ಮಾಹಿತಿ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT