ಶನಿವಾರ, ಫೆಬ್ರವರಿ 29, 2020
19 °C

ಹಿರೇಕೆರೂರ: ತಾವರೆ ಹೂವುಗಳ ಗ್ರಾಮ ‘ತಾವರಗಿ’

ಕೆ.ಎಚ್.ನಾಯಕ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರ: ತಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ಕೇವಲ 3 ಕಿ.ಮೀ. ದೂರದಲ್ಲಿರುವ ‘ತಾವರಗಿ’ ಕೃಷಿ ಪ್ರಧಾನ ಗ್ರಾಮ. ಗ್ರಾಮದಲ್ಲಿ 3 ಶಾಸನಗಳಿದ್ದರೂ ಅವುಗಳ ಬಗ್ಗೆ ಯಾರೂ ಬೆಳಕು ಚೆಲ್ಲಿಲ್ಲ. ಹಾಗಾಗಿ ಗ್ರಾಮ ನಾಮದ ಬಗ್ಗೆ ಖಚಿತ ಮಾಹಿತಿ ಇಲ್ಲ.

ಮೇಲ್ನೋಟಕ್ಕೆ ‘ತಾವರಗಿ‘ ಸರಳ ಶಬ್ದ. ಗ್ರಾಮ ನಾಮವಾಗಿ ಪರಿಗಣಿಸಿ ವಿಶ್ಲೇಷಣೆ ಮಾಡುವುದಾದರೆ ಅಷ್ಟೇ ಕಠಿಣವಾದದ್ದು. ಈ ಗ್ರಾಮದ ಕೆರೆಗಳಲ್ಲಿ ವಿಶೇಷವಾಗಿ ತಾವರೆ ಹೂವುಗಳು ಕಂಡು ಬಂದಿದ್ದರಿಂದ ‘ತಾವರಗಿ’ ಎಂದು ಹೆಸರಿಸಲಾಗಿದೆ. ವಾರ್ಗಿಕದಲ್ಲಿಯ 'ಗಿ' ಗ್ರಾಮದ ಸವೆದ ರೂಪ. ಆದ್ದರಿಂದ ತಾವರೆ ಹೂವುಗಳ ಗ್ರಾಮ ತಾವರಗಿ ಎಂದು ಸಂಶೋಧಕ, ಸಾಹಿತಿ ಡಾ.ಭೋಜರಾಜ ಪಾಟೀಲ ಅವರು ತಮ್ಮ ‘ಹಿರೇಕೆರೂರ ತಾಲ್ಲೂಕು ಗ್ರಾಮನಾಮ ಅಧ್ಯಯನ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

'ಬೌದ್ಧರ ಪ್ರಸಿದ್ಧ ದೇವತೆ ತಾರಾ ಭಗವತಿ. ಬನವಾಸಿ ಭಾಗದಲ್ಲಿ (ತಾವರಗಿ ಗ್ರಾಮವೂ ಇದರಲ್ಲಿ ಬರುತ್ತದೆ) ತಾವರೆ ಹೆಸರಿನಲ್ಲಿ ಕೆರೆ, ಕಾಡು ಹಾಗೂ ಹಳ್ಳಿಗಳು ಸಾಕಷ್ಟಿವೆ. ತಾವರೆಹಳ್ಳಿ (ಹೊಸಕೋಟೆ), ತಾವರಗೇರಾ (ಕುಷ್ಟಗಿ), ತಾವರೆಕೊಪ್ಪ (ಶಿವಮೊಗ್ಗ), ತಾವರಗೊಪ್ಪ (ಹಾನಗಲ್)... ಈ ಯಾದಿಯಲ್ಲಿ ಹಿರೇಕೆರೂರ ತಾಲ್ಲೂಕಿನ ತಾವರಗಿ ಕೂಡ ಒಂದು ಗ್ರಾಮವಾಗಿದೆ. ತಾವರಗಿಯು 'ತಾರಾ ಭಗವತಿ'ಯ ಊರು. ಪ್ರಾಚೀನ ಕಾಲದಲ್ಲಿ ಬೌದ್ಧರ ಸ್ಥಳವಾಗಿರಬೇಕು' ಎಂದು ಸಹ ಅವರು ಉಲ್ಲೇಖಿಸಿದ್ದಾರೆ.

ಈಗ ತಾವರಗಿ ಗ್ರಾಮ ಸಾಕಷ್ಟು ಮೂಲಸೌಲಭ್ಯ ಹೊಂದಿದೆ. ಗ್ರಾಮ ಪಂಚಾಯ್ತಿ, ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ಆರೋಗ್ಯ ಸಹಾಯಕಿಯರ ಕೇಂದ್ರ, ಗ್ರಂಥಾಲಯ, ರಸ್ತೆಗಳು ಹಾಗೂ ಕುಡಿಯುವ ನೀರಿನ ಸೌಲಭ್ಯ ಹೊಂದಿದೆ. ರಾಮಲಿಂಗೇಶ್ವರ, ಬ್ರಹ್ಮಲಿಂಗೇಶ್ವರ, ಆಂಜನೇಯ ಹಾಗೂ ಮಾರಿಕಾಂಬಾ ದೇವಸ್ಥಾನಗಳು ಗ್ರಾಮದ ಪ್ರಮುಖ ಧಾರ್ಮಿಕ ಕೇಂದ್ರಗಳು. ಪ್ರತಿ ವರ್ಷ ರಾಮಲಿಂಗೇಶ್ವರ-ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ನಡೆಯುತ್ತದೆ. ಪ್ರತಿ 3 ವರ್ಷಗಳಿಗೊಮ್ಮೆ ಮಾರಿಕಾಂಬಾ ಜಾತ್ರೆ ಬಹು ವೈಭವದಿಂದ ನಡೆಯುತ್ತದೆ. ಇತ್ತೀಚೆಗೆ ಗ್ರಾಮದ ಹೃದಯ ಭಾಗದಲ್ಲಿ ಮಾರಿಕಾಂಬಾ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆಗೆ ಈಗಾಗಲೇ ಭರದ ಸಿದ್ಧತೆಗಳನ್ನು ಗ್ರಾಮಸ್ಥರು ನಡೆಸಿದ್ದಾರೆ.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಎಂ.ಸಾಲಿ, ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ತಾವರಗಿ, ನಿವೃತ್ತ ಪ್ರಾಚಾರ್ಯ ದಿವಂಗತ ಪಿ.ಎಂ.ನೂಲಗೇರಿ ಅವರ ಸ್ವಗ್ರಾಮ ಈ ತಾವರಗಿ.

‘ನಮ್ಮದು ಪುಟ್ಟ ಗ್ರಾಮವಾಗಿದ್ದು, ಜನತೆ ಅತ್ಯಂತ ಸೌಹಾರ್ದದಿಂದ ಬದುಕು ಸಾಗಿಸುತ್ತಿದ್ದಾರೆ. ಇಲ್ಲಿ ಎಲ್ಲ ಅಗತ್ಯ ಮೂಲ ಸೌಕರ್ಯಗಳಿವೆ. ನನ್ನ ಅವಧಿಯಲ್ಲಿ ಪ್ರೌಢಶಾಲೆ ಮಂಜೂರು, ಮೇಲ್ಮಟ್ಟದ ಜಲಾಗಾರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ’ ಎಂದು ಗ್ರಾಮದಲ್ಲಿಯೇ ನೆಲೆಸಿರುವ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು