ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಹೆಗ್ಗೆರೆ ಕೆರೆಯ ಆಕರ್ಷಣೆ ನೀರು ಗೊರವ

Published 12 ಮೇ 2024, 23:30 IST
Last Updated 12 ಮೇ 2024, 23:30 IST
ಅಕ್ಷರ ಗಾತ್ರ

ಹಾವೇರಿ: ಹೆಗ್ಗೆರೆಕೆರೆಯ ನೀರು ಹಾವೇರಿ ನಗರದ ಜನತೆಯ ದಾಹ ತೀರಿಸಲು ಬಳಸುತ್ತಿರುವ ಕಾರಣ ಕೆರೆ ಬರಿದಾಗುತ್ತಿದೆ. ಇತ್ತ ಬರಿದಾಗುತ್ತಿರುವ ಕೆರೆಯಲ್ಲಿ ಜಲಚರಗಳು, ಮೀನು, ಶಂಕುಹುಳಗಳನ್ನು ಬೇಟೆಯಾಡಲು ಸುಲಭವಾಗುತ್ತಿರುವ ಕಾರಣ ಪಕ್ಷಿಗಳ ಹಿಂಡು ಕೆರೆಗೆ ಲಗ್ಗೆ ಇಟ್ಟಿವೆ.

ಹಾವೇರಿಯ ಐತಿಹಾಸಿಕ ಹೆಗ್ಗೆರೆ ನೂರಾರು ಸ್ಥಳೀಯ ಹಾಗೂ ವಲಸೆ ಪಕ್ಷಿಗಳಿಗೆ ಆಶ್ರಯ ನೀಡಿದ್ದು, ಕೆರೆ ಪರಿಸರದಲ್ಲಿ ನಿತ್ಯ ಒಂದಿಲ್ಲ ಒಂದು ಪಕ್ಷಿ ಕಾಣಿಸುತ್ತಿರುತ್ತವೆ. ಈಗ ಗಮನ ಸೆಳೆಯುತ್ತಿರುವ ಪಕ್ಷಿ ನೀರು ಗೊರವ (ಬ್ಲಾಕ್ ವಿಂಗ್ಡ್ ಸ್ಟಿಲ್ಟ್).

ನೀರು ಗೊರವ ಸದಾ ನಿಂತ ನೀರಿನ ದಡದಲ್ಲಿ ಹಾರುತ್ತಾ ಓಡುತ್ತಾ ತನ್ನ ಸುಂದರವಾದ ಗುಲಾಬಿ ಕಾಲುಗಳು ಹಾಗೂ ನೀಳವಾದ ಕಪ್ಪು ಕೊಕ್ಕುಗಳಲ್ಲಿ ಆಹಾರ ಹುಡುಕುತ್ತದೆ. ಇವೆರಡೂ ಒಂದಕ್ಕೊಂದು ಸವಾಲು ಎಸೆಯುವಂತೆ ಜೋಡಿಯಾಗಿ ಸ್ಪರ್ಧೆಗೆ ಇಳಿದಿರುತ್ತವೆ!

ಹಾವೇರಿ ಜಿಲ್ಲೆಯ ಕೆರೆ, ಹೊಂಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನೀರು ಗೊರವ ಜೋಡಿಯಾಗಿರುತ್ತವೆ. ಪ್ರತ್ಯೇಕವಾಗಿ ಬೇಟೆಯನ್ನಾಡುತ್ತವೆ. ಇವುಗಳಿಗೆ ಸಿಗಡಿ ಮೀನು ಬಲು ಪ್ರಿಯ ಆಹಾರ. ಕಪ್ಪೆಚಿಪ್ಪು, ಶಂಕು ಹುಳು, ಚಿಕ್ಕಮೀನುಗಳನ್ನು ಹೆಕ್ಕಿ ತಿನ್ನುತ್ತವೆ.

ಇವುಗಳಿಗೆ ಶುದ್ಧ ನೀರಾದರೂ ಸರಿ ಕೆಸರಾದರೂ ಸರಿ, ಒಟ್ಟಿನಲ್ಲಿ ನೀರು ಇರಬೇಕು. ರಾತ್ರಿಯಲ್ಲೂ ಇವುಗಳ ದೃಷ್ಟಿ ಭಾರಿ ಚುರುಕು. ಹೀಗಾಗಿ ಮರಿಗಳಿಗೆ ಆಹಾರ ನೀಡುವುದು ಸುಲಭ. ಮೂರರಿಂದ ನಾಲ್ಕು ಮೊಟ್ಟೆಗಳಿಗೆ 25 ದಿನಗಳ ವರೆಗೆ ಕಾವು ನೀಡುತ್ತವೆ. ಶತ್ರುಗಳ ಕಣ್ಣು ತಪ್ಪಿಸಲು ಮರಿಗಳನ್ನು ನೀರಿನಲ್ಲಿ ಬಚ್ಚಿಡುತ್ತವೆ. ಕೇವಲ 24 ಗಂಟೆಯಲ್ಲಿಯೇ ಮರಿಗಳು ಈಜಲು, ನಡೆಯುವ ಸಾಮರ್ಥ್ಯ ಪಡೆಯುತ್ತವೆ.

ಇವುಗಳು ಅಪಾಯ ಎದುರಾದಾಗ ಕೆಕ್ ಕೆ ಯಾಕ್ ಕಿಕ್ ಕಿಕ್ ಕಿಕ್ ಎಂದು ಧ್ವನಿ ಹೊರ ಹಾಕುತ್ತವೆ. ಹಾರುವಾಗ ಕಾಲನ್ನು ನೇರವಾಗಿ ಮಾಡಿ, ಕುತ್ತಿಗೆಯನ್ನು ಒಂಚೂರು ತಗ್ಗಿಸುತ್ತವೆ. ಇದರ ನೀಳವಾದ ಕಾಲು, ಬಿಳಿ, ಕಡು ಕಂದು ಗರಿಗಳು ನೋಡಲು ಬಲು ಸೊಗಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT