ಸೋಮವಾರ, ಜೂನ್ 14, 2021
25 °C
ಟೆಸ್ಟಿಂಗ್‌, ಟ್ರೇಸಿಂಗ್‌, ಟ್ರೀಟ್‌ಮೆಂಟ್‌ ಸೂತ್ರ ಅಳವಡಿಸಿಕೊಳ್ಳಿ: ಆರೋಗ್ಯ ಸಚಿವ ಸುಧಾಕರ್‌

ಹಾವೇರಿ: ಜಿಲ್ಲೆಯ ಮರಣ ಪ್ರಮಾಣ ಆತಂಕಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ಉತ್ತಮ ಮಟ್ಟದ ಆರೋಗ್ಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆ ಮರಣ ಪ್ರಮಾಣದ ಸರಾಸರಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯ ಎಂದರು.

ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಪ್ರಮಾಣ ರಾಜ್ಯದ ಸರಾಸರಿಗೆ ಹೋಲಿಸಿದಾಗ ಹೆಚ್ಚಿದೆ. ಹೀಗಾಗಿ ಹರಡುವಿಕೆ ಮತ್ತು ಸಾವಿನ ಪ್ರಮಾಣ ನಿಯಂತ್ರಣಕ್ಕೆ ಒತ್ತು ನೀಡಬೇಕು. ಸೋಂಕಿತರು ಪತ್ತೆ ಆದ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲು ಮಾಡಬೇಕು ಎಂದರು. 

ಬೇಗ ಸ್ಥಳಾಂತರಿಸಿ:

ಕೋವಿಡ್ ಕೇರ್ ಸೆಂಟರ್‌ಗಳಿಗೆ ಮನೆಯಲ್ಲೇ ಇರುವ ಸೋಂಕಿತರನ್ನು ಆದಷ್ಟು ಬೇಗ ಸ್ಥಳಾಂತರಿಸಿ ಆರೈಕೆ ನೀಡಬೇಕು. ಟೆಸ್ಟಿಂಗ್, ಟ್ರೇಸಿಂಗ್‌, ಟ್ರೀಟ್‍ಮೆಂಟ್ ಸೂತ್ರವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಸಾವಿನ ಪ್ರಮಾಣ ತಡೆಯಲಿ ಕ್ರಮವಹಿಸಬೇಕು ಎಂದರು. 

ಶೀಘ್ರ ನೇಮಕ:

ಜಿಲ್ಲಾ ಆಸ್ಪತ್ರೆಯಲ್ಲಿ 22 ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಇರುವ ಐದು ವೆಂಟಿಲೇಟರ್ ಪೈಕಿ ನಾಲ್ಕು ಕೆಲಸ ಮಾಡುತ್ತಿಲ್ಲ ಎಂದು ಇದೀಗ ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಕೊರತೆ ಇರುವ ತಜ್ಞರು ಮತ್ತು ವೈದ್ಯರ ಹುದ್ದೆಗಳನ್ನು ಒಂದು ವಾರದಲ್ಲಿ ನೇಮಕ ಮಾಡಲಾಗುವುದು ಎಂದರು. 

ಆಕ್ಸಿಜನ್ ಕಾನ್ಸ್‍ಟ್ರೇಟರ್ಸ್ ಇನ್ನೂ 25ರಿಂದ 30 ಕಳುಹಿಸಿಕೊಡಲಾಗುವುದು. ಕೊರತೆ ಇರುವ ಔಷಧಗಳನ್ನು ತಕ್ಷಣವೇ ರವಾನೆ ಮಾಡಲು ಸೂಚನೆ ಕೊಡಲಾಗಿದೆ. ಬ್ಲಾಕ್ ಫಂಗಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಜೆಕ್ಷನ್ ಕಳುಹಿಸಿಕೊಡಲಾಗುವುದು. ಇಎನ್‍ಟಿ ತಜ್ಞರ ಸಮಿತಿ ರಚಿಸಿ ಅವರಿಂದ ಸಮಗ್ರ ದೃಷ್ಟಿಕೋನದ ಚಿಕಿತ್ಸಾ ವಿಧಾನವನ್ನು ಮಾರ್ಗಸೂಚಿಯಲ್ಲಿ ನೀಡಿರುವಂತೆ ಚಿಕಿತ್ಸೆ ಕೊಡುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದರು.

ಲಸಿಕೆ ವಿತರಣೆ ತ್ವರಿತಗೊಳಿಸಿ:

ಲಸಿಕಾ ವಿತರಣೆಯಲ್ಲಿ ಇದುವರೆಗೆ 1,71,147 ಜನರಿಗೆ ನೀಡಲಾಗಿದೆ. ಜಿಲ್ಲಾ ಉಗ್ರಾಣದಲ್ಲಿ 3630 ಡೋಸ್ ದಾಸ್ತಾನು ಇದೆ. 11,390 ಡೋಸ್ ಜಿಲ್ಲೆಯಲ್ಲಿ ಹಂಚಿಕೆ ಆಗಿರುವ ದಾಸ್ತಾನು ಇದೆ. ಮೊದಲ ಮತ್ತು ಎರಡನೇ ಡೋಸ್‍ಗೆ ದೊಡ್ಡ ಅಂತರ ಇದೆ. ಅದನ್ನು ಸರಿಪಡಿಸಬೇಕು. ಜಿಲ್ಲಾಡಳಿತ ಪ್ರತಿದಿನ ಮಾಧ್ಯಮಗಳ ಮೂಲಕ ಲಸಿಕೆ ವಿತರಣೆ, ಚಿಕಿತ್ಸಾ ವಿಧಾನ, ಸಿಸಿಸಿಗಳಲ್ಲಿ ಊಟ ಮತ್ತು ಆರೈಕೆ ವಿಷಯಗಳ ಬಗ್ಗೆ ಮಾಹಿತಿ ಮತ್ತು ವಿಡಿಯೊಗಳನ್ನು ನೀಡುವುದರಿಂದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು