ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ರಾಸಾಯನಿಕಗಳಿಗೆ ಬೈ, ಸಾವಯವ ಕೃಷಿಗೆ ಜೈ

2.5 ಎಕರೆಯಲ್ಲಿ ನಳನಳಿಸುವ ಹಣ್ಣಿನ ಗಿಡಗಳು: ಕೃಷಿ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ
Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ತುಂಗಭದ್ರಾ ನದಿ ತೀರದ ಸುಕ್ಷೇತ್ರ ಮುದೇನೂರು ಗ್ರಾಮದ ಹನುಮಂತಪ್ಪ ನಾಗಪ್ಪ ಕೊಳ್ಳೇರ ಅವರು ಐದಾರು ವರ್ಷಗಳಿಂದ ಸಾವಯವ ಕೃಷಿ ಮಾಡಿ ವಿವಿಧ ಬಗೆಯ ಹಣ್ಣಿನ ಬೆಳೆಯನ್ನು ಬೆಳೆದು ಆದಾಯ ಹೆಚ್ಚಿಸಿಕೊಂಡಿದ್ದಾರೆ.

ಪೇರಲ ಹಣ್ಣು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆಯನ್ನು ಮಾಡುವ ಮೂಲಕ ಆರ್ಥಿಕವಾಗಿ ಯಶಸ್ಸು ಕಂಡಿದ್ದಾರೆ.

ರಾಜ್ಯ ನಾನಾ ಕಡೆಗೆ ನಡೆದ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಾವಯವ ಕೃಷಿ ಕೈಗೊಂಡ ರೈತರ ತೋಟಗಳಿಗೆ ಭೇಟಿ ನೀಡಿ, ತಮ್ಮ ತೋಟದಲ್ಲೂ ಸಾವಯವ ಕೃಷಿಯನ್ನು ಆರಂಭಿಸಿದ್ದಾರೆ. ಸಿಕ್ಕ ಸಿಕ್ಕ ಬೆಳೆಗಳನ್ನು ಬೆಳೆಯದೇ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಕಾಲಿಕ ಮಾರುಕಟ್ಟೆಯ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ಮಿಶ್ರಬೆಳೆ ಪದ್ದತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಹನುಮಂತಪ್ಪ ಅವರು ತಮಗೆ ಇರುವ 2.5 ಎಕರೆ ಜಮೀನು ಇದ್ದು, ನೀರಾವರಿಯಿಂದ ಕೂಡಿದೆ. ಅದರಲ್ಲಿ 250 ಪೇರಲ, 100 ನಿಂಬೆ, 25 ಹಲಸು, 10 ಮಾವು, 10 ಚಿಕ್ಕು, 10 ಕರಿಬೇವು, 50 ಪಪ್ಪಾಯಿ, 70 ತೇಗ, 25 ನೀರಲ, 450 ಹೆಬ್ಬೇವು ಹಾಗೂ 20 ಮಾಗನಿ, ಭವಿಷ್ಯಕ್ಕಾಗಿ 650 ಶ್ರೀಗಂಧದ ಮರಗಳನ್ನು ಹಚ್ಚಿದ್ದು ನಾಲ್ಕು ವರ್ಷದ್ದಾಗಿವೆ.

‘ರಾಸಾಯನಿಕ ಗೊಬ್ಬರ ಬಳಿಸಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಭೂಮಿ ಕೂಡ ಸವಳಾಗಿದ್ದನ್ನು ಕಂಡು ಸಾವಯವ ಕೃಷಿಯತ್ತ ಸಾಗಿದ್ದೇವೆ. ಸಾವಯವ ಬೆಳೆಗಳಿಗೆ ರೋಗ ಬರುವುದಿಲ್ಲ, ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ, ಬೇವಿನ ಕಷಾಯ, ಗೋ ಮೂತ್ರ ಬೆಳೆಗಳಿಗೆ ಸಿಂಪಡಿಸುತ್ತೇವೆ’ ಎನ್ನುತ್ತಾರೆ ರೈತ ಹನುಮಂತಪ್ಪ.

₹30 ಸಾವಿರ ನಿವ್ವಳ ಆದಾಯ:ಪೇರಲ ಹಣ್ಣಿನ ಬೆಳೆ ವರ್ಷಕ್ಕೆ ಮೂರು ಬೀಡು ಬರುತ್ತದೆ. ಮಾರುಕಟ್ಟೆ ದರ ತಿಳಿದುಕೊಂಡು ದೂರದ ಪಟ್ಟಣಗಳಿಗೆ ಮಾರುಕಟ್ಟೆಗೆ ಒಯ್ಯುತ್ತಾರೆ. ಒಂದು ಬಾರಿಯ ಬೀಡಿನಲ್ಲಿ ₹25 ರಿಂದ 30 ಸಾವಿರ ನಿವ್ವಳ ಆದಾಯ ಬರುತ್ತದೆ. ರಾಣೆಬೆನ್ನೂರು, ಹಾವೇರಿ, ಹರಿಹರ, ಹರಪನಹಳ್ಳಿ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಸಾವಯವ ಪೇರಲ ಹಣ್ಣಿಗೆ ಬಾರಿ ಬೇಡಿಕೆ ಇದೆ.

ರೈತ ಹನುಮಂತಪ್ಪ ಕೊಳ್ಳೇರ ಅವರು ಓದಿದ್ದು 7ನೇ ತರಗತಿ, ಇವರಿಗೆ ಮೂವರು ಮಕ್ಕಳಿದ್ದಾರೆ. ತಾಯಿ ನಾಗಮ್ಮ, ಪತ್ನಿ ಕವಿತಾ ಹಾಗೂ ಮಕ್ಕಳು ಕೃಷಿ ಕಾರ್ಯಕ್ಕೆ ನೆರವಾಗುತ್ತಾರೆ.

‘ಮಣ್ಣು, ನೀರು, ಗಾಳಿ ನಮಗೆ ಪ್ರಕೃತಿ ಕೊಟ್ಟಿರುವ ವರ. ಆದರೆ ಅದನ್ನು ಮನುಷ್ಯ ದುರಾಸೆಯಿಂದ ಹಾಳು ಮಾಡುತ್ತಿದ್ದಾನೆ. ರೈತರು ಬೆಳೆ ಬೆಳೆಯುವಾಗ ಮಣ್ಣು ಪರೀಕ್ಷೆ ಮಾಡಿಸಬೇಕು. ಸಾವಯವ ಕೃಷಿಯನ್ನು ನಂಬಿಕೊಂಡಿರುವ ಯಾವ ರೈತರೂ ಹಾಳಾಗಿಲ್ಲ’ ಎಂದು ರೈತಹನುಮಂತಪ್ಪ ಕೊಳ್ಳೇರ ಅವರ ಅಚಲ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT