ಬುಧವಾರ, ಆಗಸ್ಟ್ 17, 2022
25 °C
3 ತಿಂಗಳಿಂದ ಕೆಟ್ಟು ನಿಂತ ಇಂಗಾಲದ ಮಾನಾಕ್ಸೈಡ್‌ ಮಾಪನ‌: ಪ್ರದರ್ಶನಾ ಫಲಕವೂ ಬಂದ್‌

ಹಾವೇರಿ | ಶಬ್ದಮಾಲಿನ್ಯ ಅಳೆಯಲು ಉಪಕರಣವೇ ಇಲ್ಲ!

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದಲ್ಲಿ ಉಂಟಾಗುವ ‘ಶಬ್ದ ಮಾಲಿನ್ಯ’ ಅಳತೆ ಮಾಡಲು ಶಿವಾಜಿನಗರದಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯಲ್ಲಿ ಹತ್ತು ವರ್ಷಗಳಿಂದ ಉಪಕರಣವೇ ಇಲ್ಲ.     

ಹಬ್ಬಗಳ ಸಂದರ್ಭದಲ್ಲಿ ಧ್ವನಿವರ್ಧಕ, ಡಿಜೆ ಸೆಟ್‌ ಮತ್ತು ಡ್ರಮ್‌ ಸೆಟ್‌ ಮುಖಾಂತರ ಅಪಾರವಾದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಜತೆಗೆ ವಾಹನ, ರೈಲು, ಯಂತ್ರಗಳು, ಕಾಮಗಾರಿ, ಮನರಂಜನಾ ಉಪಕರಣ, ಜನರ ಗಲಾಟೆ... ಮುಂತಾದ ಕಾರಣಗಳಿಂದ ಕರ್ಣ ಕಠೋರವಾದ ಶಬ್ದ ಉತ್ಪತ್ತಿಯಾಗುತ್ತದೆ. ಈ ಅನಪೇಕ್ಷಿತ ಶಬ್ದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಶಾಶ್ವತ ಕಿವುಡತನವನ್ನೂ ತರಬಲ್ಲದು. 

ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲೆಂದೇ ‘ಮಾಲಿನ್ಯ ನಿಯಂತ್ರಣ ಮಂಡಳಿ’ಯನ್ನು ಸ್ಥಾಪಿಸಲಾಗಿದೆ. ಆದರೆ, ಶಬ್ದ ಮಾಲಿನ್ಯ ಮಾಪನಾ ಉಪಕರಣ (ಎನ್‌.ಎಲ್‌.ಎಂ.ಇ) ಮತ್ತು ವಾತಾವರಣ ವಾಯು ಗುಣಮಟ್ಟ ಸಮೀಕ್ಷೆ ಉಪಕರಣಗಳೇ (ಎ.ಎ.ಕ್ಯೂ.ಎಂ.ಇ) ಇಲ್ಲದಿರುವುದರಿಂದ ಸಿಬ್ಬಂದಿ ಪರದಾಡುವಂತಾಗಿದೆ.  

ಹತ್ತು ವರ್ಷಗಳಿಂದ ಪತ್ರ ವ್ಯವಹಾರ: ಉಪಕರಣಗಳನ್ನು ಪೂರೈಸುವಂತೆ ನಗರದ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಬೆಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳಿಗೆ 2011ರಿಂದ ನಿರಂತರವಾಗಿ ಪತ್ರ ಬರೆಯುತ್ತಲೇ ಇದ್ದಾರೆ. ಆದರೆ, ಇದುವರೆಗೂ ಪ್ರಯೋಜನವಾಗಿಲ್ಲ. ವಿಶೇಷವೆಂದರೆ, ಜಿಲ್ಲಾಧಿಕಾರಿ ನೇತೃತ್ವದಲ್ಲಿ 2017ರಲ್ಲಿ ನಡೆದ ಮರಳು ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ.

ಹಬ್ಬಗಳಲ್ಲಿ ಡಿಜಿ ಸೆಟ್‌ ಮತ್ತು ಡ್ರಮ್‌ ಸೆಟ್‌ ಮುಖಾಂತರ ಉಂಟಾಗುವ ಶಬ್ದ ಮಾಲಿನ್ಯವನ್ನು ಮಾಪನ ಮಾಡಿ ವರದಿ ನೀಡಲು ಡಿ.ಸಿ. ಮತ್ತು ಎಸ್ಪಿ ಸೂಚಿಸಿದ್ದರು. ಆಗ ಉಪಕರಣಗಳೇ ಇಲ್ಲ ಎಂದು ಮಂಡಳಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು. ಕಚೇರಿಗೆ ಮೇಲಿಂದ ಮೇಲೆ ಜನರಿಂದ ದೂರುಗಳು ಬರುತ್ತಿವೆ. ನೆರೆಯ ಪ್ರಾದೇಶಿಕ ಕಚೇರಿಗಳಲ್ಲಿಯೂ ಉಪಕರಣಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಉಪಕರಣ ಪೂರೈಸುವಂತೆಯೂ ಕೋರಲಾಗಿದೆ. 

ಫಲಕದಲ್ಲಿ ‘ಸಿಒ’ ಮಾಹಿತಿಯೇ ಇಲ್ಲ!
ಶಿವಾಜಿನಗರದಲ್ಲಿರುವ ಪ್ರಾದೇಶಿಕ ಕಚೇರಿ ಮುಂಭಾಗ ವಾಯು ಗುಣಮಟ್ಟ ತಿಳಿಸುವ ಎಲ್‌ಇಡಿ ಪ್ರದರ್ಶನಾ ಫಲಕವನ್ನು (ಸಿ.ಎ.ಎ.ಕ್ಯೂ.ಎಂ.ಎಸ್‌) ಅಳವಡಿಸಲಾಗಿದೆ. ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಅಂದರೆ, ಒಂದೂವರೆ ತಿಂಗಳಿಂದ ಡಿಸ್‌ಪ್ಲೇ ಬೋರ್ಡ್‌ ಬಂದ್‌ ಮಾಡಲಾಗಿತ್ತು. ಇಂಗಾಲದ ಮಾನಾಕ್ಸೈಡ್ (ಸಿಒ)‌ ಮಾಪನಕ್ಕೆ ಸಂಬಂಧಿಸಿದ ಐಆರ್‌ ಸೋರ್ಸ್‌ ಉಪಕರಣ ಹಾಳಾಗಿರುವುದರಿಂದ, ಮೂರು ತಿಂಗಳಿಂದ ‘ಸಿಒ’ ಬಗ್ಗೆ ಮಾಹಿತಿಯೇ ಪ್ರದರ್ಶನಗೊಳ್ಳುತ್ತಿಲ್ಲ. 

ಅಷ್ಟೇ ಅಲ್ಲ, 20 ಕೆ.ವಿ. ಯೂಪಿಎಸ್ ಕೂಡ ಹಾಳಾಗಿದೆ. ಕೆಲವೊಮ್ಮೆ ಇಂಟರ್‌ನೆಟ್‌ ಕೈ ಕೊಟ್ಟಾಗಲೂ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಮಾಹಿತಿ ಪ್ರದರ್ಶನಗೊಳ್ಳುವುದಿಲ್ಲ. ಹೀಗೆ ಹಲವಾರು ತಾಂತ್ರಿಕ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಲಾಕ್‌ಡೌನ್‌ ಇರುವ ಕಾರಣ ಐಆರ್ ಸೋರ್ಸ್‌ ಉಪಕರಣ ತರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಿಬ್ಬಂದಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು